ಜಿಲ್ಲಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಕುಟುಂಬ ಸಮೇತರಾಗಿ ಜನರು ಸಂಭ್ರಮದಿಂದ ಆಚರಿಸಿದರು.
ಹುಬ್ಬಳ್ಳಿ/ಧಾರವಾಡ:
ಜಿಲ್ಲಾದ್ಯಂತ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಕುಟುಂಬ ಸಮೇತರಾಗಿ ಜನರು ಸಂಭ್ರಮದಿಂದ ಆಚರಿಸಿದರು.ಬೆಳಗ್ಗೆಯಿಂದಲೇ ನಗರದ ವಿವಿಧ ನಾಗದೇವರ ದೇವಸ್ಥಾನ ಹಾಗೂ ಇತರ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ನಾಗದೇವರಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ದೇವಾಲಯಗಳ ಆವರಣಗಳಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ಭಕ್ತರ ದಂಡು ಕಂಡುಬಂದಿದ್ದು, ಎಲ್ಲೆಡೆ ಹಬ್ಬದ ಸಡಗರ ಮನೆಮಾಡಿತ್ತು.
ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಪರಿವಾರ ಸುಬ್ರಹ್ಮಣ್ಯ ದೇವಸ್ಥಾನ, ಅಶೋಕನಗರ ಬ್ರಿಡ್ಜ್ ಬಳಿಯ ಗಣಪತಿ ದೇವಸ್ಥಾನ, ಹಳೇ ಹುಬ್ಬಳ್ಳಿಯ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಇಂಡಿಪಂಪ್ ಬಳಿಯ ಪರಮೇಶ್ವರ ದೇವಸ್ಥಾನ, ಚನ್ನಪೇಟೆಯ ಬನ್ನಿ ಮಹಾಂಕಾಳ ದೇವಸ್ಥಾನ, ಸ್ಟೇಷನ್ ರಸ್ತೆಯ ಶಿವಾಲಯ, ವಿಶ್ವೇಶ್ವರನಗರದ ವಿಶ್ವನಾಥ ದೇವಸ್ಥಾನ, ಶಿರೂರ ಪಾರ್ಕ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನ, ದೇಶಪಾಂಡೆ ನಗರದ ನಾಗಪ್ಪನ ದೇವಸ್ಥಾನ, ಈಶ್ವರನಗರದ ಈಶ್ವರ ದೇವಸ್ಥಾನ ಹಾಗೂ ಗೋಕುಲ ರಸ್ತೆ ರಾಜಧಾನಿ ಕಾಲನಿಯ ಗಣೇಶ ದೇವಸ್ಥಾನ ಹಾಗೂ ಧಾರವಾಡದ ಸೋಮೇಶ್ವರ, ಕೊಪ್ಪದಕೇರಿ, ಗೌಲಿಗಲ್ಲಿ, ಸಾಯಿನಗರ, ಕೆಲಕೇರಿ ಸೇರಿದಂತೆ ನಗರದ ಹಲವು ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.ಭಕ್ತರು ನಾಗದೇವರ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ, ಹೂವು, ಹಣ್ಣು, ನೈವೇದ್ಯ ಅರ್ಪಿಸಿ ಕುಟುಂಬದ ಸುಖ-ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಹಲವು ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಬ್ಬಳ್ಳಿಯ ಎಪಿಎಂಸಿಯ ನಾಗದೇವತೆ ದೇವಸ್ಥಾನದಲ್ಲಿ ನಾಗರ ಪಂಚಮಿ ಅಂಗವಾಗಿ ನವಗ್ರಹ ಪೂಜೆ, ವಿಶೇಷ ಅಭಿಷೇಕ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.ಮಹಿಳೆಯರು ಸಾಂಪ್ರದಾಯಿಕವಾಗಿ ಉಂಡಿ, ಕರ್ಚಿಕಾಯಿ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿ ಬಂಧು-ಬಳಗ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡು ಹಬ್ಬದ ಸಂಭ್ರಮ ಹೆಚ್ಚಿಸಿದರು. ಅದೇ ಅಬಾಲವೃದ್ಧರಾಗಿ ಜೋಕಾಲಿ ಜೀಕಿ ಸಂಭ್ರಮಿಸಿದರು.