ಭಾರತ ಶೂನ್ಯ ತೆರಿಗೆ ಆಫರ್ ನೀಡಿದೆ : ಟ್ರಂಪ್‌

| N/A | Published : Sep 02 2025, 01:00 AM IST

ಸಾರಾಂಶ

 ಮತ್ತೆ ಭಾರತದ ವಿರುದ್ಧ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ‘ಭಾರತ ಅಮೆರಿಕದ ಮೇಲಿನ ತೆರಿಗೆಯನ್ನು ಶೂನ್ಯಕ್ಕಿಳಿಸುವ ಆಫರ್ ನೀಡಿದೆ. ಆದರೆ ಸಮಯ ಮೀರಿಹೋಗುತ್ತಿದೆ. ವರ್ಷಗಳ ಮೊದಲೇ ಭಾರತ ಈ ಕೆಲಸ ಮಾಡಬೇಕಿತ್ತು’ ಎಂದು ಗುಡುಗಿದ್ದಾರೆ.

 ನ್ಯೂಯಾರ್ಕ್‌: ಶಾಂಘೈ ಶೃಂಗದಲ್ಲಿ ಭಾರತ-ರಷ್ಯಾ ಸ್ನೇಹ ಸಂಬಂಧದ ಫೋಟೋ ವೈರಲ್‌ ಆದ ಬೆನ್ನಲ್ಲೇ ಮತ್ತೆ ಭಾರತದ ವಿರುದ್ಧ ಸಿಡಿದೆದ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ‘ಭಾರತ ಅಮೆರಿಕದ ಮೇಲಿನ ತೆರಿಗೆಯನ್ನು ಶೂನ್ಯಕ್ಕಿಳಿಸುವ ಆಫರ್ ನೀಡಿದೆ. ಆದರೆ ಸಮಯ ಮೀರಿಹೋಗುತ್ತಿದೆ. ವರ್ಷಗಳ ಮೊದಲೇ ಭಾರತ ಈ ಕೆಲಸ ಮಾಡಬೇಕಿತ್ತು’ ಎಂದು ಗುಡುಗಿದ್ದಾರೆ.

‘ನಾವು ಭಾರತದ ಜೊತೆ ದೊಡ್ಡಮಟ್ಟದ ವ್ಯಾಪಾರ ನಡೆಸುತ್ತೇವೆ. ಆದರೆ ಭಾರತ ನಮ್ಮ ಜೊತೆ ತೀರಾ ಕಡಿಮೆ ವ್ಯಾಪಾರ ನಡೆಸುತ್ತದೆ. ಇದು ಸಂಪೂರ್ಣವಾಗಿ ಏಕಪಕ್ಷೀಯ ವಿಪತ್ತು! ಅಲ್ಲದೆ, ಭಾರತವು ತನ್ನ ಹೆಚ್ಚಿನ ತೈಲ ಮತ್ತು ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತದೆ, ಅಮೆರಿಕದಿಂದ ಬಹಳ ಕಡಿಮೆ ಖರೀದಿಸುತ್ತದೆ. ಅವರು ಈಗ ತಮ್ಮ ಸುಂಕಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಮುಂದಾಗಿದ್ದಾರೆ, ಆದರೆ ತಡವಾಗುತ್ತಿದೆ. ಅವರು ವರ್ಷಗಳ ಹಿಂದೆಯೇ ಹಾಗೆ ಮಾಡಬೇಕಿತ್ತು’ ಎಂದಿದ್ದಾರೆ.

ಮೋದಿ - ಪುಟಿನ್‌ ಭೇಟಿಗೂ ಮುನ್ನ ಅಮೆರಿಕಕ್ಕೆ ದಿಢೀರ್‌ ಭಾರತ ನೆನಪು

 ವಾಷಿಂಗ್ಟನ್‌: ಕಳೆದ ಹಲವು ತಿಂಗಳಿನಿಂದ ಸತತವಾಗಿ ಭಾರತದ ಮೇಲೆ ವಾಗ್ದಾಳಿ ನಡೆಸುತ್ತಾ, ತೆರಿಗೆ ದಾಳಿಯನ್ನೂ ಆರಂಭಿಸಿರುವ ಅಮೆರಿಕ, ಇದೀಗ ಉಭಯ ದೇಶಗಳ ಸಂಬಂಧ ಮತ್ತಷ್ಟು ಎತ್ತರಕ್ಕೆ ಏರಿದೆ ಎಂದು ಬಣ್ಣಿಸಿದೆ.ಶಾಂಘೈ ಸಹಕಾರ ಶೃಂಗದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಭೇಟಿಗೂ ಮುನ್ನ ಅಮೆರಿಕ ದಿಢೀರ್‌ ಇಂಥದ್ದೊಂದು ಹೇಳಿಕೆ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕ್‌ ರುಬಿಯೋ, ‘ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಹೊಸ ಎತ್ತರಕ್ಕೆ ಹೋಗುತ್ತಿದೆ. ಉಭಯ ದೇಶಗಳ ಸಂಬಂಧವು 21ನೇ ಶತಮಾನದಲ್ಲಿ ನಿರ್ಣಾಯಕ ಘಟ್ಟ’ ಎಂದಿದ್ದಾರೆ.

ಜೊತೆಗೆ ಈ ತಿಂಗಳು ನಾವು ಅಭಿವೃದ್ಧಿ ಮತ್ತು ನಮ್ಮ ಸಂಬಂಧವನ್ನು ಇನ್ನಷ್ಟು ಮುನ್ನಡೆಸುವ ದಿಸೆಯಲ್ಲಿ ಗಮನ ಹರಿಸಿದ್ದೇವೆ. ನಾವೀನ್ಯತೆಯಿಂದ ಹಿಡಿದು ಉದ್ಯಮಶೀಲತೆವರೆಗೆ, ರಕ್ಷಣೆಯಿಂದ ಹಿಡಿದು ದ್ವಿಪಕ್ಷೀಯ ಮಾತುಕತೆವರೆಗೆ ನಮ್ಮ ನಿರಂತರ ಸ್ನೇಹದ ಪಯಣ ಮುಂದುವರೆಯಲಿದೆ ಎಂದು ರುಬಿಯೋ ಹೇಳಿದ್ದಾರೆ.

ಮೋದಿ ಚೀನಾ ಭೇಟಿ ಅಮೆರಿಕಕ್ಕೆ ಕಹಿ ಸುದ್ದಿ: ಟ್ರಂಪ್ ಮಾಜಿ ಆಪ್ತ

ವಾಷಿಂಗ್ಟನ್‌: ‘ಪ್ರಧಾನಿ ನರೇಂದ್ರ ಮೋದಿ ಅವರ ಚೀನಾ ಭೇಟಿ ಮತ್ತು ರಷ್ಯಾ ಅಧ್ಯಕ್ಷರ ಜತೆಗಿನ ಸಭೆಯು ಪಶ್ಚಿಮ ದೇಶಗಳು ಮತ್ತು ಅಮೆರಿಕಕ್ಕೆ ಅತ್ಯಂತ ಕೆಟ್ಟ ಸುದ್ದಿ’ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಮಾಜಿ ಆಪ್ತ ಜಾನ್‌ ಬೋಲ್ಟನ್‌ ಹೇಳಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿದ ಬೋಲ್ಟನ್‌, ‘ಇದು ಅತ್ಯಂತ ಕೆಟ್ಟು ಸುದ್ದಿ. ಶೀತಲ ಸಮರದ ಅವಧಿಯಿಂದ ಸೋವಿಯತ್‌/ರಷ್ಯಾ ನಂಟಿನಿಂದ ಭಾರತವನ್ನು ಬೇರ್ಪಡಿಸಲು ಪಾಶ್ಚಿಮಾತ್ಯ ದೇಶಗಳು ದಶಕಗಳ ಕಾಲ ಭಾರಿ ಶ್ರಮ ವಹಿಸಿದ್ದವು. ಅತ್ಯಾಧುನಿಕ ಆಯುಧ ಪೂರೈಕೆ, ಜಪಾನ್‌, ಆಸ್ಟ್ರೇಲಿಯಾ, ಅಮೆರಿಕ ಜತೆ ಕ್ವಾಡ್‌ ಮೂಲಕ ಚೀನಾದ ಆಕ್ರಮಣ ನೀತಿ ವಿರುದ್ಧ ಎಚ್ಚರಿಕೆ ನೀಡಿತ್ತು. ಭಾರತವನ್ನು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಸಹಕಾರ ವೃದ್ಧಿಗೆ ಸಾಕಷ್ಟು ಶ್ರಮ ವಹಿಸಲಾಗಿತ್ತು.

ಈ ಪರಿಶ್ರಮವನ್ನು ಟ್ರಂಪ್‌ ಒಬ್ಬರೇ ಮುರಿದು ಹಾಕಿದ್ದಾರೆ. ಭಾರತವನ್ನು ರಷ್ಯಾ ಮತ್ತು ಚೀನಾಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

Read more Articles on