ಪ್ರವಾಸಿ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿಗೆ ಮನವಿ

| Published : Sep 02 2025, 12:00 AM IST

ಪ್ರವಾಸಿ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ವರ್ತಕರ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವಂತೆ ವರ್ತಕರ ಹಿತ ರಕ್ಷಣಾ ಸಮಿತಿ, ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಕುಶಾಲನಗರ ಅವರು ಮನವಿ ಸಲ್ಲಿಸಿದ್ದಾರೆ.

ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವವು ಸೆ. 23 ರಿಂದ ಅ. 2 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ದಸರಾ ಅಂಗವಾಗಿ ಹೊರ ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ವಾಹನಗಳೊಂದಿಗೆ ಸಾವಿರಾರು ಪ್ರವಾಸಿಗರು ಆಗಮಿಸಲಿದ್ದಾರೆ. ಆದ್ದರಿಂದ 2019 ರ ಆದೇಶದ ಪ್ರಕಾರ ಈ ಬಾರಿಯೂ ದಸರಾ ಅಂಗವಾಗಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಜೊತೆಗೆ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕರ್ನಾಟಕ ಮೋಟರ್ ವಾಹನ ತೆರಿಗೆ ಅಧಿನಿಯಮ 1957 ರ ಕಲಂ 16(1) ರಡಿಯಲ್ಲಿ ತೆರಿಗೆ ಪಾವತಿಯಿಂದ ವಿನಾಯಿತಿ ಕೊಡಬೇಕಾಗಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರಿಗೆ ವರ್ತಕರ ಹಿತ ರಕ್ಷಣಾ ಸಮಿತಿ, ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಕುಶಾಲನಗರ ಅವರು ಮನವಿ ಸಲ್ಲಿಸಿದ್ದಾರೆ.

ಮೈಸೂರು, ಕೊಡಗು ಹೊರ ರಾಜ್ಯಗಳ ಗಡಿ ಪ್ರದೇಶಗಳಾದ ಕಾರಣ ಹೊರ ರಾಜ್ಯದ ಪ್ರವಾಸಿಗರಿಗೆ ದಸರಾ ಮಹೋತ್ಸವಕ್ಕೆ ಬರಲು ಅನುಕೂಲವಾಗುತ್ತದೆ. ಇದರಿಂದ ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಹಾಗೂ ಪ್ರವಾಸೋದ್ಯಮ ವ್ಯಾಪಾರದಲ್ಲಿ ತೊಡಗಿಕೊಂಡಿರುವ ವ್ಯಾಪಾರಿಗಳಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ. ಆದ್ದರಿಂದ ತಾವುಗಳು ಈ ಬಗ್ಗೆ ಗಮನ ಹರಿಸಿ ಸಹಾಯ ಸಹಕಾರ, ನೀಡಬೇಕು ಎಂದು ಪ್ರವಾಸಿತಾಣವಾದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವರ್ತಕರ ನಿಯೋಗವು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರಿಗೆ ಮನವಿ ಮಾಡಿದ್ದಾರೆ.

ವರ್ತಕರ ಮನವಿಗೆ ಸ್ಪಂದಿಸಿದ ಶಾಸಕ ಡಾ.ಮಂತರ್ ಗೌಡ ಅವರು ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಭೆ‌ ಕರೆಯಲಾಗುವುದು ಎಂದು ತಿಳಿಸಿದ್ದಾರೆ.ನಿಯೋಗದಲ್ಲಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವರ್ತಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೈಸಿ ಕತ್ತಣಿರ, ಉಪಾಧ್ಯಕ್ಷ ಮುರುಳಿ, ಹಿರಿಯ ಸಲಹೆಗಾರರು ಲೋಕೇಶ್, ಸಮಿತಿಯ ಸದಸ್ಯರಾದ ಜಾನ್, ಪರಮೇಶ್, ನಾಸಿರ್, ಶಮೀರ್, ವಸೀಮ್, ಶಾಫಿ ಮತ್ತಿತರರು ಇದ್ದರು.