ಬೈಡೆನ್‌ಗಿಂತಲೂ ಕಮಲಾ ಅಸಮರ್ಥೆ: ಟ್ರಂಪ್

| Published : Aug 14 2024, 12:59 AM IST

ಸಾರಾಂಶ

ಅಮೆರಿಕದ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ಆಕೆ ಬೈಡೆನ್‌ಗಿಂತಲೂ ಅಸಮರ್ಥ ವ್ಯಕ್ತಿ ಎಂದು ಟೀಕಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಡೆಮಾಕ್ರೆಟ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ಆಕೆ ಬೈಡೆನ್‌ಗಿಂತಲೂ ಅಸಮರ್ಥ ವ್ಯಕ್ತಿ ಎಂದು ಟೀಕಿಸಿದ್ದಾರೆ. ಜೊತೆಗೆ ಅಕೆಯೊಬ್ಬ ಎಡಪಂಥೀಯ, ಮಾನಸಿಕ ಅಸ್ವಸ್ಥ ಅಭ್ಯರ್ಥಿ ಎಂದು ವ್ಯಂಗ್ಯವಾಡಿದ್ದಾರೆ.

ಟ್ವೀಟರ್‌ (ಎಕ್ಸ್) ಮಾಲೀಕ ಎಲಾನ್‌ ಮಸ್ಕ್‌ ಸೋಮವಾರ ಟ್ರಂಪ್‌ ಜತೆ ಎಕ್ಸ್‌ನಲ್ಲೇ ಸಂವಾದ ನಡೆಸಿದರು. ಈ ವೇಳೆ ಕಮಲಾರನ್ನು ‘ಮೂರನೇ ದರ್ಜೆಯ ನಕಲಿ ಅಭ್ಯರ್ಥಿ ಎಂದು ದೂರಿದ ಟ್ರಂಪ್‌, ಗಡಿ ಭದ್ರತೆ ವಿಷಯದಲ್ಲಿ ಆಕೆ ಸಂಪೂರ್ಣ ವಿಫಲರಾಗಿದ್ದಾರೆ. ಇದೇ ಕಾರಣದಿಂದಾಗಿ ಸಾವಿರಾರು ಅಕ್ರಮ ವಲಸಿಗರು ದೇಶದ ಗಡಿಯೊಳಗೆ ನುಗ್ಗಿ ಬಂದಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ತಮ್ಮ ಮೇಲೆ ನಡೆದ ಗುಂಡಿನ ದಾಳಿಗೆ ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆ ಕಾರಣ ಎಂದು ಟ್ರಂಪ್‌ ಕಿಡಿಕಾರಿದರು.

ತಾಂತ್ರಿಕ ಸಮಸ್ಯೆ: ಈ ನಡುವೆ ಎಕ್ಸ್‌ನಲ್ಲಿ ಪ್ರಸಾರವಾದ ಟ್ರಂಪ್‌ ಮತ್ತು ಮಸ್ಕ್‌ ಸಂವಾದ ಭಾರೀ ತಾಂತ್ರಿಕ ಸಮಸ್ಯೆಯ ಪರಿಣಾಮ 40 ನಿಮಿಷ ವಿಳಂಬವಾಗಿ ಪ್ರಸಾರವಾಯಿತು. ಇದೆ ವೇಳೆ ಈ ತಾಂತ್ರಿಕ ದೋಷಕ್ಕೆ ದುರುದ್ದೇಶಪೂರಿತ ದಾಳಿಯೇ ಕಾರಣ ಎಂದು ಮಸ್ಕ್‌ ದೂರಿದ್ದಾರೆ.

==

ವಕ್ಫ್‌ ತಿದ್ದುಪಡಿ ಮಸೂದೆ ಜೆಪಿಸಿಗೆ ಬಿಜೆಪಿಯ ಜಗದಂಬಿಕಾ ಪಾಲ್‌ ಅಧ್ಯಕ್ಷ

ನವದೆಹಲಿ: ವಕ್ಫ್‌ ಮಸೂದೆ ಪರಿಶೀಲನೆಗೆ ರಚಿತವಾಗಿರುವ ಜಂಟಿ ಸದನ ಸಮಿತಿಗೆ (ಜೆಪಿಸಿ) ಲೋಕಸಭೆಯ ಬಿಜೆಪಿ ಸದಸ್ಯ ಜಗದಂಬಿಕಾ ಪಾಲ್‌ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಸಭಾಧ್ಯಕ್ಷ ಓಂ ಬಿರ್ಲಾ ಈ ನೇಮಕ ಮಾಡಿದ್ದಾರೆ. ಜೆಪಿಸಿಯ 31 ಸದಸ್ಯರ ಪೈಕಿ ಲೋಕಸಭೆಯ 21 ಮತ್ತು ರಾಜ್ಯಸಭೆಯ 10 ಸದಸ್ಯರಿದ್ದಾರೆ. ಈ ಪೈಕಿ ರಾಜ್ಯಸಭಾ ಸದಸ್ಯರಾದ ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌ ಮತ್ತು ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ ಕೂಡಾ ಸೇರಿದ್ದಾರೆ. ಮಸೂದೆಯನ್ನು ಪರಿಶೀಲನೆಗೆ ಒಳಪಡಿಸಬೇಕು ಎಂಬ ವಿಪಕ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ಅದನ್ನು ಜೆಪಿಸಿಗೆ ವಹಿಸಲಾಗಿದೆ.

==

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ಗೆ 21 ದಿನ ಪರೋಲ್‌

ಚಂಡೀಗಢ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ 21 ದಿನಗಳ ಕಾಲ ಪರೋಲ್‌ ಮಂಜೂರಾಗಿದೆ. ಇದು ಈತನಿಗೆ ಕಳೆದ 4 ವರ್ಷದಲ್ಲಿ ಸಿಗುತ್ತಿರುವ 10ನೇ ಪರೋಲ್‌.

ಈತ ಯಾವ ಕಾರಣಕ್ಕೆ ಪರೋಲ್‌ಗೆ ಮನವಿ ಮಾಡಿದ್ದ ಎಂದು ತಿಳಿದುಬಂದಿಲ್ಲ. ಈತನಿಗೆ ಪದೇ ಪದೇ ಪರೋಲ್‌ ನೀಡಬಾರದು ಎಂದು ಪಂಜಾಬ್‌ ಹೈಕೋಟ್‌ರ್ ಆದೇಶಿಸಿದ್ದರೂ ತಾತ್ಕಾಲಿಕ ಬಂಧಮುಕ್ತಿ ದೊರಕಿದೆ.ತಾತ್ಕಾಲಿಕವಾಗಿ ಬಿಡುಗಡೆಯಾಗಿರುವ ಗುರ್ಮೀತ್‌, ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವಾದಲ್ಲಿರುವ ಡೇರಾ ಆಶ್ರಮದಲ್ಲಿ ಆಶ್ರಯ ಪಡೆಯಲಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಗುರ್ಮೀತ್‌ ತನ್ನ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ 2017ರಲ್ಲಿ ಅವರಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಲಾಗಿತ್ತು. ಈ ನಡುವೆ ಕಳೆದ ಜನವರಿಯಲ್ಲಿ ಅವರಿಗೆ ಹೈಕೋರ್ಟ್‌ 50 ದಿನಗಳ ಕಾಲ ಪೆರೋಲ್ ನೀಡಿತ್ತು.

==

ನಕ್ಸಲ್‌ ನಾಯಕನ ಮನೆ ಬಾಗಿಲು ಒಡೆದು ಎನ್‌ಐಎ ದಾಳಿ

ಕೊಚ್ಚಿ: ಕೇರಳದ ಮೋಸ್ಟ್‌ ವಾಂಟೆಡ್‌ ಮಾವೋವಾದಿ ನಾಯಕ ಮುರಳಿ ಕನ್ನೆಂಪಿಲ್ಲಿ ಮನೆಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಮಂಗಳವಾರ ದಾಳಿ ಮಾಡಿದ್ದು, ಈ ವೇಳೆ ಮನೆಯ ಬಾಗಿಲು ಒಡೆದು ಎನ್‌ಐಎ ತಂಡ ನುಗ್ಗಿದ ಪ್ರಸಂಗ ನಡೆದಿದೆ.ತೆಲಂಗಾಣದಿಂದ ಆಗಮಿಸಿದ ಎನ್‌ಐಎ ತಂಡವು ಕನ್ನೆಂಪಲ್ಲಿ ಮನೆಯ ಬಾಗಿಲು ಬಡಿದಿದೆ. ಬಾಗಿಲು ತೆರೆಯದ ಆತ ‘ನಮ್ಮ ವಕೀಲರು ಬರುವವರೆಗೂ ಕಾಯಿರಿ’ ಎಂದಿದ್ದಾನೆ. ಆದರೆ ಎನ್‌ಐಎ ಅಧಿಕಾರಿಗಳು ‘ನಮ್ಮ ಬಳಿ ವಾರಂಟ್ ಇದೆ’ ಎಂದು ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ ಹಾಗೂ ಮನೆಯಲ್ಲಿ ತಪಾಸಣೆ ಮಾಡಿ ಹಲವು ವಿದ್ಯುನ್ಮಾನ ಸಾಧನ ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತೆಲಂಗಾಣದಲ್ಲಿ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯನಾಗಿದ್ದ ಮಾವೋವಾದಿ ಸಂಜಯ್‌ ದೀಪಕ್ ರಾವ್ ಬಂಧನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಎನ್‌ಐಎ ತಂಡ ದಾಳಿ ಮಾಡಿದೆ.

==

ಕ್ರಿಶ್ಚಿಯನ್‌ ಶಾಲೆಯಲ್ಲಿ ನಮಾಜ್‌ಗೆ ಅವಕಾಶ ಕೋರಿ ಮನವಿ

ಕೊಚ್ಚಿ: ಕೇರಳದ ಕೋಥಮಂಗಲಂನ ಸಂತ ಜೋಸೆಫ್‌ ಶಾಲೆಯಲ್ಲಿ ತಮಗೆ ನಮಾಜ್‌ ಮಾಡಲು ಅವಕಾಶ ಒದಗಿಸಬೇಕು ಎಂದು ಇಬ್ಬರು ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಮನವಿ ಮಾಡಿದ್ದು ವಿವಾದಕ್ಕೆ ಎಡೆಮಾಡಿದೆ. ಇದಕ್ಕೆ ಅನುಮತಿ ನೀಡದ ಪ್ರಾಂಶುಪಾಲರು ಶಾಲೆಯ ಆವರಣದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ನಡೆಸುವಂತಿಲ್ಲ ಎಂದಿದ್ದು, ಕೇರಳ ಶಿಕ್ಷಣ ನಿಯಮಗಳಡಿಯಲ್ಲಿ ಇದಕ್ಕಾಗಿ ನೀಡಲಾಗಿರುವ ಸಮಯವನ್ನು ಬಳಸಿಕೊಳ್ಳಬಹುದು ಎಂದಿದ್ದಾರೆ.

==

ಧಾರ್ಮಿಕ ಸ್ವಾತಂತ್ರ್ಯ ಕಾಪಾಡಲು ಮತಾಂತರ ಕಾಯ್ದೆ ಅಗತ್ಯ: ಅಲಹಾಬಾದ್‌ ಹೈ

ಪ್ರಯಾಗ್‌ರಾಜ್‌: ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದುಕೊಳ್ಳಲು ಉತ್ತರಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ-2021 ಅತ್ಯಗತ್ಯ ಎಂದು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.ಮಹಿಳೆಯೊಬ್ಬಳನ್ನು ಲೈಂಗಿಕವಾಗಿ ಶೋಷಿಸಿ ಮತಾಂತರಕ್ಕೆ ಒತ್ತಾಯಿಸಿದ್ದ ಆರೋಪ ಎದುರಿಸುತ್ತಿದ್ದ ಅಜೀಮ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಏಕಸದಸ್ಯ ಪೀಠ, ಸಾಂವಿಧಾನಿಕವಾಗಿ ತಮ್ಮ ಧರ್ಮಗಳನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು ಎಲ್ಲರಿಗೂ ಇದೆ. ಹಾಗೆಂದು ಒತ್ತಾಯಪೂರ್ವಕ ಮತಾಂತರಕ್ಕೆ ಇದು ಅನ್ವಯವಾಗುವುದಿಲ್ಲ ಎಂದಿದೆ.