ಸಾರಾಂಶ
ಟೋಕಿಯೋ: ರಷ್ಯಾದ ಪೂರ್ವಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ರಷ್ಯಾ, ಜಪಾನ್, ಅಮೆರಿಕ- ಮೊದಲಾದ ಕಡೆ ಭಾರಿ ಸುನಾಮಿ ಸೃಷ್ಟಿಯಾಗಿದೆ. ಇದು 2011ರ ಭೀಕರ ಸುನಾಮಿಯನ್ನು ನೆನಪಿಸಿದೆ.
ಇದರ ಬೆನ್ನಲ್ಲೇ ಕಮ್ಚಟ್ಕಾದಲ್ಲಿ 3-4 ಮೀಟರ್ (13 ಅಡಿ) ಎತ್ತರದ ಸುನಾಮಿ ದಾಖಲಾಗಿದ್ದು, ಜಪಾನ್‌ನ ಉತ್ತರ ದ್ವೀಪ ಹೊಕ್ಕೈಡೊದಲ್ಲಿ 60 ಸೆಂ.ಮೀ. (2 ಅಡಿ) ಎತ್ತರ ಮತ್ತು ಅಲಾಸ್ಕಾದ ಅಲ್ಯೂಟಿಯನ್ ದ್ವೀಪಗಳಲ್ಲಿ ಉಬ್ಬರವಿಳಿತದ ಮಟ್ಟಕ್ಕಿಂತ 1.4 ಅಡಿ ಎತ್ತರದಲ್ಲಿ ಸುನಾಮಿ ಅಲೆಗಳು ದಾಖಲಾಗಿವೆ.
ಘಟನೆಯಲ್ಲಿ ಜಪಾನ್‌ನಲ್ಲಿ 1 ಸಾವು ವರದಿಯಾಗಿದೆ. 20 ಲಕ್ಷ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದೆ.
ಇದೇ ವೇಳೆ, ಮುಂದಿನ ಸುನಾಮಿ ಅಲೆಗಳು 10 ಅಡಿ ಎತ್ತರದ್ದಾಗಿರಬಹುದು ಎಂಬ ಮುನ್ಸೂಚನೆ ಇತ್ತು. ಆದರೆ ಭೂಕಂಪದ ಕೆಲವು ಗಂಟೆಗಳ ನಂತರ, ಹವಾಯಿಯಲ್ಲಿ ಸುನಾಮಿ ಎಚ್ಚರಿಕೆ ಹಿಂಪಡೆಯಲಾಗಿದೆ. ಜಪಾನ್‌ನ ಫುಕುಶಿಮಾದ ದಕ್ಷಿಣ ಪೆಸಿಫಿಕ್ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಯನ್ನು ಕೂಡ ವಾಪಸು ತೆಗೆದುಕೊಳ್ಳಲಾಗಿದೆ. ಆದರೆ ಉತ್ತರಕ್ಕೆ ಎತ್ತರ ಜಾರಿಯಲ್ಲಿದೆ.
10 ಶಕ್ತಿಶಾಲಿ ಭೂಕಂಪದಲ್ಲಿ ಒಂದು:
ರಷ್ಯಾದ ಪೂರ್ವದಲ್ಲಿರುವ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿ ಬಳಿಯ ಕರಾವಳಿಯಲ್ಲಿ ಸ್ಥಳೀಯ ಸಮಯ ಸುಮಾರು 03:17ಕ್ಕೆ ಭೂಕಂಪ ಸಂಭವಿಸಿದೆ. ಇದು ಆಧುನಿಕ ಇತಿಹಾಸದಲ್ಲಿ ಜಾಗತಿಕವಾಗಿ ದಾಖಲಾದ 10 ಅತ್ಯಂತ ಶಕ್ತಿಶಾಲಿ ಭೂಕಂಪಗಳಲ್ಲಿ ಒಂದಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಭೂಕಂಪದ ನಂತರ 6.9 ತೀವ್ರತೆಯ ಭೂಕಂಪ ಸೇರಿದಂತೆ ಮತ್ತಷ್ಟು ಕಂಪನಗಳು ಸಂಭವಿಸಿವೆ.
ಅಮೆರಿಕ, ಜಪಾನ್ ಮೊದಲಾದ ನೆರೆಯ ದೇಶಗಳು, ನ್ಯೂಜಿಲೆಂಡ್‌ನ ದಕ್ಷಿಣಕ್ಕೆ ಪೆಸಿಫಿಕ್ ದ್ವೀಪಗಳು ಹಾಗೂ ಕುರಿಲ್, ಹವಾಯಿಯನ್ ಮೊದಲಾದ ದ್ವೀಪಗಳಿಗೆ ಪೆಸಿಫಿಕ್ ಮಹಾಸಾಗರದ ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ಸಂಭಾವ್ಯ ಸುನಾಮಿ ಅಪಾಯವು ಒಂದು ದಿನಕ್ಕಿಂತ ಹೆಚ್ಚು ಕಾಲ ಇರುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸುರಕ್ಷತಾ ದೃಷ್ಟಿಯಿಂದ ಜಪಾನ್‌ನ ಕರಾವಳಿ ತೀರದ 20 ಲಕ್ಷ ಜನರ ಸ್ಥಳಾಂತರಕ್ಕೆ ಸೂಚಿಸಲಾಗಿದೆ. ಇನಾಜ್ ಬೀಚ್ ಸೇರಿದಂತೆ ಹಲವು ಜನಪ್ರಿಯ ಕಡಲತೀರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಎಲ್ಲೆಲ್ಲಿ ಪರಿಣಾಮ?:ರಷ್ಯಾದ ಕುರಿಲ್ ದ್ವೀಪ, ಅಮೆರಿಕದ ಹವಾಯಿ ದ್ವೀಪ, ಅಲಸ್ಕಾದ ಅಲ್ಯೂಟಿಯನ್ ದ್ವೀಪ, ಉತ್ತರ ಕ್ಯಾಲಿಫೋರ್ನಿಯಾದ ಕೆಲಭಾಗಗಳು, ಜಪಾನ್‌ನ ಹೊಕ್ಕೈಡೊ ದ್ವೀಪ, ಟೋಕೊಯೊ ಕೊಲ್ಲಿ ಸೇರಿದಂತೆ ಹಲವು ಭಾಗಗಳಲ್ಲಿ ಸುನಾಮಿಯ ಅಲೆಗಳು ಅಪ್ಪಳಿಸಿವೆ. ಕರಾವಳಿಯುದ್ದಕ್ಕೂ ಸುನಾಮಿ ಅಲೆಗಳು ಈಗಾಗಲೇ ಪರಿಣಾಮ ಬೀರಲು ಪ್ರಾರಂಭಿಸಿವೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ. ಒವಾಹುದ ಉತ್ತರ ತೀರದಲ್ಲಿರುವ ಹಲೈವಾದಲ್ಲಿ ಅತಿ ಹೆಚ್ಚು ಎತ್ತರದ (4 ಅಡಿ/1.2 ಮೀ.) ಭೂಕಂಪ ದಾಖಲಾಗಿದೆ. ಹೊಕ್ಕೈಡೊ, ಟೋಕಿಯೊ ಕೊಲ್ಲಿಯುದ್ದಕ್ಕೂ 2 ಅಡಿ (60 ಸೆಂ.ಮೀ.) ಎತ್ತರದ ಸುನಾಮಿ ಪತ್ತೆಯಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ. ಇನ್ನಷ್ಟು ದೊಡ್ಡ ಅಲೆಗಳು ಏಳಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
- ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ 8.8 ತೀವ್ರತೆಯ ಭೂಕಂಪ
- ರಷ್ಯಾ ಕರಾವಳಿಗೆ ಅಪ್ಪಳಿಸಿದ 13 ಅಡಿ ಎತ್ತರದ ಸುನಾಮಿ
- ಅಮೆರಿಕ, ಜಪಾನ್‌ಗೂ ಸುನಾಮಿ ಅಲೆಗಳ ಅಪಾಯ
- ಜಗತ್ತಿನ 10 ಅತ್ಯಂತ ಶಕ್ತಿಶಾಲಿ ಭೂಕಂಪಗಳಲ್ಲಿ ಒಂದು- ಜಪಾನ್‌ನ 20 ಲಕ್ಷ ಜನರ ಸ್ಥಳಾಂತರ, ಬೀಚ್‌ಗಳಲ್ಲಿ ಕಟ್ಟೆಚ್ಚರ