ಸಾರಾಂಶ
ಗೋಕರ್ಣ: ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ವಿದೇಶಿ ಮಹಿಳೆಯನ್ನು ಪೊಲೀಸರು ರಕ್ಷಿಸಿದ ಬಳಿಕ ತನ್ನ ದೇಶದ ಒಡನಾಡಿಗಳಿಗೆ ಕುತೂಹಲಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಸಂದೇಶವನ್ನು ತನ್ನನ್ನು ರಕ್ಷಿಸಿದ ಪೊಲೀಸರಿಗೂ ಕಳುಹಿಸಿದ್ದು, ಅದರಲ್ಲಿ ಹಾವಿನ ಜತೆ ಇರುವುದು ಹಾಗೂ ನೀರು ಬರುವುದು, ಮತ್ತಿತರ ವಿಷಯವನ್ನು ಉಲ್ಲೇಖಿಸಿದ್ದಾರೆ. ಹಾವು ಮನೆಯಲ್ಲಿಯೂ ಬರುತ್ತದೆ, ಅದರಂತೆ ಮಳೆ ಬಂದಾಗ ನೀರು ಬರಲೇಬೇಕು. ಮನೆಯಲ್ಲಿದ್ದರೂ ಅಥವಾ ಗುಹೆಯಲ್ಲಿದ್ದರೂ ನೀರು ಬರುತ್ತದೆ ಎಂದು ಹೇಳಿದ್ದು, ಅದನ್ನು ಸಾಮಾನ್ಯ ವಿಷಯವಾಗಿ ಮಹಿಳೆ ಪರಿಗಣಿಸಿದ್ದಾರೆ.
ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾದ ನಿನಾ ಕುಟಿನಾ (40) ಹಾಗೂ ಅವರ ಮಕ್ಕಳಾದ ಪ್ರೀಮಾ (6), ಅಮಾ (4) ಅವರನ್ನು ಎರಡು ದಿನಗಳ ಹಿಂದೆ ರಕ್ಷಣೆ ಮಾಡಲಾಗಿತ್ತು. ಅವರು ಒತ್ತಡದ ಬದುಕು ಬಿಟ್ಟು, ಏಕಾಂತದಲ್ಲಿ ಕಳೆಯುವ ಇಂಗಿತ ವ್ಯಕ್ತಪಡಿಸಿದ್ದು, ಅವರ ಬಗ್ಗೆ ಅತಿರೇಕವಾಗಿ ಬಿಂಬಿಸಿರುವುದನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.
ಹಾವಿನ ಜತೆ ವಾಸವಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಹಾವು ಮಳೆಗಾಲದಲ್ಲಿ ಎಲ್ಲೆಡೆ ಬರುತ್ತದೆ. ತಾನೂ ಏಕಾಂತದಲ್ಲಿ ಕಾಲ ಕಳೆಯಲು ಇಲ್ಲಿ ವಾಸವಿದ್ದೆ. ಅದು ಕೇವಲ ಏಳು ದಿನ ಮಾತ್ರ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಮಹಿಳೆ ಸಿಕ್ಕಿದ್ದು ಹೀಗೆ?: ಮುಖ್ಯ ಕಡಲ ತೀರದ ಬಳಿ ಇರುವ ರಾಮಮಂದಿರದ ಹತ್ತಿರವಿರುವ ಗುಡ್ಡ ಕಳೆದ ವರ್ಷ ಮಳೆಗಾಲದಲ್ಲಿ ಕುಸಿತವಾಗಿತ್ತು. ಈ ವರ್ಷ ಪುನಃ ಗುಡ್ಡದ ಸ್ಥಿತಿಗತಿಯ ಕುರಿತು ನಿರಂತರ ನಿಗಾ ಇಡಲು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಚಿಸಿತ್ತು. ಅದರಂತೆ ಪೊಲೀಸರು ಈ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವಾಗ ಅಲ್ಲೇ ಹತ್ತಿರದಲ್ಲಿರುವ ಪಾಂಡವರ ಗುಹೆ ಎಂದು ಕರೆಯುವ ಗುಹೆಯಲ್ಲಿ ಯಾವುದೋ ಮಹಿಳೆ ಇರುವುದು ಪತ್ತೆಯಾಗಿದೆ. ಆಕೆ ವಿದೇಶಿ ಮಹಿಳೆ ಎಂಬುದು ತಿಳಿಯಿತು. ಅಲ್ಲಿನ ಕ್ಲಿಷ್ಟಕರ ಸ್ಥಿತಿ ವಿವರಿಸಿ ಹೊರಗಡೆ ಕರೆತಂದು ರಕ್ಷಿಸಿದ್ದು, ಕಾರವಾರ ಮಹಿಳಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನಂತೆ ಮುಂದಿನ ಕ್ರಮ ಕೈಗೊಂಡಿದ್ದರು.
ಪ್ರಸ್ತುತ ಈ ಮಹಿಳೆಯನ್ನು ಮಹಿಳಾ ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ಎಫ್‌ಆರ್‌ಆರ್‌ಒ ಕಚೇರಿಗೆ ಒಪ್ಪಿಸಿ ಸ್ವದೇಶಕ್ಕೆ ತೆರಳಲು ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆಹಾರ, ವಿಹಾರ, ಗುಹೆಯಲ್ಲಿ ಪೂಜೆ: ಮಹಿಳೆ ಗುಹೆಯಲ್ಲಿ ಪಾಂಡುರಂಗನ ಮೂರ್ತಿ ಮತ್ತಿತರ ದೇವರುಗಳನ್ನು ಆರಾಧಿಸುತ್ತಿರುವುದು ತಿಳಿದು ಬಂದಿದೆ. ಪೊಲೀಸರು ಹೋದಾಗ ಹಲವು ಮೂರ್ತಿಗಳು ಹೂವಿನಿಂದ ಅಲಂಕಾರಗೊಂಡಿದುವುದು ಕಂಡುಬಂದಿದೆ. ಇನ್ನೂ ತನ್ನ ಪುಟ್ಟಮಕ್ಕಳಿಗೆ ಹಲವು ಆಟಿಕೆಗಳನ್ನು ಕೊಡಿಸಿದ್ದು, ಗುಹೆಯಲ್ಲಿ ಬಿದ್ದಿದೆ. ಪೇಟೆಗೆ ಬಂದು ಆಹಾರ ಪದಾರ್ಥಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಹಲವು ತಿಂಡಿಯ ಪ್ಯಾಕೆಟ್‌ಗಳು ಗುಹೆಯಲ್ಲಿ ಬಿದ್ದಿದೆ. ಅಡುಗೆ ತಯಾರಿಕೆಗೆ ಬಳಸುವ ಕಟ್ಟಿಗೆ, ಒಲೆ ಹಾಗೂ ಪಾತ್ರೆಗಳು ಗುಹೆಯಲ್ಲಿದೆ. ಇನ್ನು ಕೆಲವರು ಆಕೆ ಏಳು ವರ್ಷಗಳಿಂದ ಅಲ್ಲಿದ್ದರು ಎಂದು ಹೇಳುತ್ತಿದ್ದು, ಏಳು ದಿನ ಮಾತ್ರ ವಾಸವಿರುವುದು ಖಚಿತವಾಗಿದೆ.