ತಿರುಮಲ : ಮುಂದಿನ ಆರ್ಥಿಕ ವರ್ಷಕ್ಕೆ ಭರ್ಜರಿ ₹5 258 ಕೋಟಿ ರು. ಬಜೆಟ್‌ : 1,729 ಕೋಟಿ ರು. ಆದಾಯದ ನಿರೀಕ್ಷೆ

| N/A | Published : Mar 25 2025, 12:48 AM IST / Updated: Mar 25 2025, 04:10 AM IST

ಸಾರಾಂಶ

ಮುಂದಿನ ಆರ್ಥಿಕ ವರ್ಷ(2025-26)ಕ್ಕೆ 5258 ಕೋಟಿ ರು. ಬಜೆಟ್‌ ಅನ್ನು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ ಮಂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ 79 ಕೋಟಿ ರು. ಅಧಿಕವಿದೆ. ಅಂತೆಯೇ, ಮುಂದಿನ ವರ್ಷ ಹುಂಡಿಯಿಂದ 1,729 ಕೋಟಿ ರು. ಆದಾಯದ ನಿರೀಕ್ಷೆ ಇದೆ ಎಂದು ಟ್ರಸ್ಟ್‌ ತಿಳಿಸಿದೆ.

ತಿರುಪತಿ: ಮುಂದಿನ ಆರ್ಥಿಕ ವರ್ಷ(2025-26)ಕ್ಕೆ 5258 ಕೋಟಿ ರು. ಬಜೆಟ್‌ ಅನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಮಿತಿ ಮಂಡಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಜೆಟ್‌ ಗಾತ್ರ 79 ಕೋಟಿ ರು. ಅಧಿಕವಿದೆ. ಅಂತೆಯೇ, ಮುಂದಿನ ವರ್ಷ ಹುಂಡಿಯಿಂದ 1,729 ಕೋಟಿ ರು. ಆದಾಯದ ನಿರೀಕ್ಷೆ ಇದೆ ಎಂದು ಟ್ರಸ್ಟ್‌ ತಿಳಿಸಿದೆ.

ಕಳೆದ ವರ್ಷ ಹುಂಡಿಯಿಂದ 1.6 ಸಾವಿರ ಕೋಟಿ ರು. ಸಂಗ್ರಹವಾಗಿತ್ತು. ಇದರೊಂದಿಗೆ, ಬ್ಯಾಂಕಿನಲ್ಲಿರಿಸಿರುವ 18 ಸಾವಿರ ಕೋಟಿ ರು.ನಷ್ಟು ಸ್ಥಿರ ಠೇವಣಿಗೆ 1.3 ಸಾವಿರ ಕೋಟಿ ರು. ಬಡ್ಡಿ ಸಿಗಲಿದೆ. ಪ್ರಸಾದದಿಂದ 600 ಕೋಟಿ ರು. ಗಳಿಕೆಯ ಸಾಧ್ಯತೆ ಇದೆ ಎಂದು ಟ್ರಸ್ಟ್‌ ಹೇಳಿದೆ. ಅಡುಗೆಮನೆಯಲ್ಲಿ ಕೆಲಸ ಮಾಡುವವರ ವೇತನ ಹಾಗೂ ವೈದ್ಯಕೀಯ ಸೌಲಭ್ಯಗಳ ಹೆಚ್ಚಳ, ವೃದ್ಧರು ಮತ್ತು ಅಂಗವಿಕಲರಿಗೆ ದರ್ಶನ ನೀಡುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸುವ ನಿರ್ಧಾರಗಳನ್ನೂ ಕೈಗೊಳ್ಳಲಾಗಿದೆ.

ಕೊಡಂಗಲ್, ಕರೀಂನಗರ, ಉಪಮಾಕ, ಅನಕಪಲ್ಲಿ, ಕರ್ನೂಲ್, ಧರ್ಮಾವರಂ, ತಲಕೋಣ, ತಿರುಪತಿ (ಗಂಗಮ್ಮ ದೇವಸ್ಥಾನ) ದೇವಾಲಯಗಳ ಮರುರ್ನಿರ್ಮಾಣಕ್ಕೆ ಆರ್ಥಿಕ ನೆರವು, ತಿರುಮಲದಲ್ಲಿ ವಿಐಪಿ ಮತ್ತು ವಿಐಪಿಯೇತರರಿಗೆ ಅತಿಥಿಗೃಹ ನಿರ್ಮಾಣ, ಅಲಿಪಿರಿಯಲ್ಲಿ ಸೈನ್ಸ್‌ ಸಿಟಿ ಮತ್ತು ವಸ್ತುಸಂಗ್ರಹಾಲಯಕ್ಕೆ ಗೊತ್ತುಪಡಿಸಿದ 20 ಎಕರೆ ಭೂಮಿಯ ಹಂಚಿಕೆಯನ್ನು ರದ್ದುಗೊಳಿಸುವುದಕ್ಕೆ ಮಂಡಳಿ ಅನುಮೋದನೆ ನೀಡಿದೆ.