ಪ್ರಯಾಣಿಕ ಸಂಚಾರ ಹೊರತುಪಡಿಸಿ ಆದಾಯ ಗಳಿಸಲು ಮೆಟ್ರೋದಲ್ಲಿ ಸರಕು ಸಾಗಣೆಗೆ ಬಿಎಂಆರ್‌ಸಿಎಲ್ ಚಿಂತನೆ

| N/A | Published : Mar 20 2025, 02:01 AM IST / Updated: Mar 20 2025, 05:09 AM IST

ಸಾರಾಂಶ

ಪ್ರಯಾಣಿಕ ಸಂಚಾರ ಹೊರತುಪಡಿಸಿ ಆದಾಯ ಗಳಿಕೆಯತ್ತ ದೃಷ್ಟಿ ನೆಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ದೆಹಲಿ ಮೆಟ್ರೋ ಮಾದರಿಯಲ್ಲಿ ರೈಲಿನಲ್ಲಿ ಸರಕು ಸಾಗಣೆ ಆರಂಭಿಸುವ ಚಿಂತನೆ ಹೊಂದಿದೆ.

ಮಯೂರ್‌ ಹೆಗಡೆ

 ಬೆಂಗಳೂರು : ಪ್ರಯಾಣಿಕ ಸಂಚಾರ ಹೊರತುಪಡಿಸಿ ಆದಾಯ ಗಳಿಕೆಯತ್ತ ದೃಷ್ಟಿ ನೆಟ್ಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ದೆಹಲಿ ಮೆಟ್ರೋ ಮಾದರಿಯಲ್ಲಿ ರೈಲಿನಲ್ಲಿ ಸರಕು ಸಾಗಣೆ ಆರಂಭಿಸುವ ಚಿಂತನೆ ಹೊಂದಿದೆ.

ಸರಕು ಸಾಗಣೆ ಬಗ್ಗೆ ಈಚೆಗಷ್ಟೇ ದೆಹಲಿ ಮೆಟ್ರೋ ಸಂಸ್ಥೆಯು ಬ್ಲೂ ಡಾರ್ಟ್‌ ಕಾರ್ಗೊ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಇದೀಗ ಅದೇ ಮಾರ್ಗ ಅನುಸರಿಸುವ ಬಗ್ಗೆ ಬಿಎಂಆರ್‌ಸಿಎಲ್‌ ಪರಿಶೀಲಿಸುತ್ತಿದೆ. ಈ ಸಂಬಂಧ ಶೀಘ್ರವೇ ಸರಕು ಸಾಗಣೆ ಕಂಪನಿಗಳು, ಇ-ಕಾಮರ್ಸ್‌ ಕಂಪನಿಗಳ ಜೊತೆಗೆ ಸಭೆ ನಡೆಸಿ ಅವಕಾಶಗಳ ಸಾಧ್ಯಾಸಾಧ್ಯತೆ ಹಾಗೂ ವಿಸ್ತ್ರತ ಮಾಹಿತಿ ಪಡೆಯಲು ಮುಂದಾಗಿದೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್‌ ರಾವ್‌, ‘ ನಮ್ಮ ಮೆಟ್ರೋದಲ್ಲಿ ಸದ್ಯ ಎರಡು ಮಾರ್ಗಗಳಿವೆ, ಹಳದಿ, ಗುಲಾಬಿ ಸೇರಿ ಇತರೆ ಮಾರ್ಗಗಳು ತೆರೆದುಕೊಳ್ಳಲಿವೆ. ಮೆಟ್ರೋ ಸರಕು ಸಾಗಣೆ ಆರಂಭಿಸಿದಲ್ಲಿ ಬಿಎಂಆರ್‌ಸಿಎಲ್‌ ಕಾರ್ಯವ್ಯಾಪ್ತಿ ವಿಸ್ತಾರ ಆಗಲಿದೆ. ಎಷ್ಟು ಪ್ರಮಾಣದ ಸರಕು ಸಾಗಿಸಬಹುದು, ಸರಕಿನ ಸ್ವರೂಪ ಹೇಗಿರಬೇಕು? ಯಾವ ಸಮಯದಲ್ಲಿ ಸಾಗಾಟ ಮಾಡಲು ಸಾಧ್ಯವಿದೆ ಎಂಬುದರ ಬಗ್ಗೆ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಜನದಟ್ಟಣೆ ಇಲ್ಲದ ಸಮಯದಲ್ಲಿ ಸರಕು ಸಾಗಣೆ ಮಾಡುವ ಯೋಚನೆ ಇದೆ. ಬೈಯಪ್ಪನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಈ ಸೇವೆ ಆರಂಭಿಸಬಹುದು. ಸದ್ಯ ನಾವು ಎಲ್ಲ ಅವಕಾಶಗಳ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಖಾಸಗಿ ಕಾರ್ಗೋ ಕಂಪನಿಗಳ ಜೊತೆಗೆ ಚರ್ಚಿಸಬೇಕಾಗುತ್ತದೆ’ ಎಂದು ಹೇಳಿದರು.

ಸದ್ಯ 76 ಕಿಮೀ ವ್ಯಾಪ್ತಿಯ ನಮ್ಮ ಮೆಟ್ರೋ ಬಳಿ ಕೇವಲ 57 ರೈಲುಗಳಿವೆ. ಫೆಬ್ರವರಿಯಲ್ಲಿ ಪ್ರಯಾಣಿಕ ದರ ಹೆಚ್ಚಾದ ಬಳಿಕ ಒಂದಿಷ್ಟು ಪ್ರಮಾಣದಲ್ಲಿ ಪ್ರಯಾಣಿಕರನ್ನು ಕಳೆದುಕೊಂಡಿದೆ.

ಯಾವ ಸಮಯ ಸೂಕ್ತ?:

ಬೆಳಗ್ಗೆ 8ಗಂಟೆವರೆಗೆ ನಂತರ ಮಧ್ಯಾಹ್ನ 12ರಿಂದ 4ಗಂಟೆವರೆಗೆ ಹಾಗೂ ರಾತ್ರಿ 9ರಿಂದ ಕೊನೆಯ 11.30ರವರೆಗಿನ ಅವಧಿಯನ್ನು ನಾನ್‌ಪೀಕ್‌ ಅವರ್‌ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಸರಕು ಸಾಗಣೆ ಮಾಡುವ ಮೂಲಕ ಸಂಸ್ಥೆ ಆದಾಯ ಗಳಿಸಿಕೊಳ್ಳಬಹುದು ಎಂದು ಮೆಟ್ರೋ ಪ್ರಯಾಣಿಕರ ಸಂಘ ಅಭಿಪ್ರಾಯಪಟ್ಟಿದೆ. ಆರಂಭಿಕವಾಗಿ ಹಸಿರು, ನೇರಳೆ ಮಾರ್ಗದ ತಲಾ ಹತ್ತು ಮೆಟ್ರೋ ರೈಲಿನ ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು ಬಿಎಂಆರ್‌ಸಿಎಲ್‌ ಯೋಜಿಸಿದೆ. ಜತೆಗೆ ನಿಲ್ದಾಣದಲ್ಲಿ ಜಾಹೀರಾತುಗಳ ಮೂಲಕ, ನಿಲ್ದಾಣಗಳ ಕೆಲ ಸ್ಥಳಗಳಿಗೆ ಕಂಪನಿಗಳ ನಾಮಕರಣದ ಮೂಲಕ, ನಿಲ್ದಾಣಗಳಿಗೆ ಪೂರ್ಣ ಹೆಸರಿನ ಹಕ್ಕನ್ನು ಕಂಪನಿಗಳಿಗೆ ನೀಡುವ ಮೂಲಕ ವಾರ್ಷಿಕ ₹100 ಕೋಟಿ ಆದಾಯ ಗಳಿಸುವ ಗುರಿ ಹೊಂದಿದೆ.

ದೆಹಲಿಯಂತೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸರಕು ಸಾಗಣೆ ಸಾಧ್ಯವಿದೆ. ಈ ಸಂಬಂಧ ಕಾರ್ಗೋ ಕಂಪನಿಗಳ ಜೊತೆಗೆ ಚರ್ಚಿಸಲಾಗುವುದು.

- ಎಂ.ಮಹೇಶ್ವರ್‌ ರಾವ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು

8 ತಿಂಗಳ ಮೊದಲೆ ನಾವು ಮೆಟ್ರೋದಲ್ಲಿ ಕೋರಿಯರ್‌ ಸರ್ವೀಸ್‌ ಆರಂಭಿಸುವಂತೆ ಮನವಿ ಮಾಡಿದ್ದೆವು. ಬಿಎಂಆರ್‌ಸಿಎಲ್‌ ಸಂಸ್ಥೆಗೆ ಇದು ಹೆಚ್ಚಿನ ಆದಾಯ ತರುವ ಜೊತೆಗೆ ನಗರದಲ್ಲಿ ಸರಕು ಸಾಗಣೆಗೆ ಅನುಕೂಲವಾಗಲಿದೆ.

- ಪ್ರಕಾಶ್‌ ಮಂಡೊತ್, ಅಧ್ಯಕ್ಷ ಬೆಂಗಳೂರು ಮೆಟ್ರೋ - ಸಬ್‌ಅರ್ಬನ್‌ ರೈಲ್ವೆ ಪ್ರಯಾಣಿಕರ ಸಮಿತಿ