ತಿರುಪತಿ ವೆಂಕಟೇಶ್ವರ ದೇಗುಲದ ಮಧ್ಯಾಹ್ನದ ಅನ್ನದಾನ ಪ್ರಸಾದಕ್ಕೆ ಮಸಾಲೆ ವಡೆಯೂ ಸೇರ್ಪಡೆ

| N/A | Published : Mar 07 2025, 12:49 AM IST / Updated: Mar 07 2025, 07:03 AM IST

ಸಾರಾಂಶ

 ಇಲ್ಲಿನ ವೆಂಕಟೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದದಲ್ಲಿ ಇನ್ನು ಮುಂದೆ ಹೊಸ ಖಾದ್ಯವೊಂದು ಸಿಗಲಿದೆ. ಮಧ್ಯಾಹ್ನದ ಅನ್ನ ಪ್ರಸಾದಕ್ಕೆ ಮಸಾಲೆ ವಡೆಯನ್ನು ಟಿಟಿಡಿ ಪರಿಚಯಿಸಿದೆ.

ತಿರುಪತಿ: ಇಲ್ಲಿನ ವೆಂಕಟೇಶ್ವರ ದೇಗುಲಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದದಲ್ಲಿ ಇನ್ನು ಮುಂದೆ ಹೊಸ ಖಾದ್ಯವೊಂದು ಸಿಗಲಿದೆ. ಮಧ್ಯಾಹ್ನದ ಅನ್ನ ಪ್ರಸಾದಕ್ಕೆ ಮಸಾಲೆ ವಡೆಯನ್ನು ಟಿಟಿಡಿ ಪರಿಚಯಿಸಿದೆ. ದಿನಕ್ಕೆ ಬರೋಬ್ಬರಿ 35,000 ವಡೆಗಳನ್ನು ಬೆಳಗ್ಗೆ 10.30ರಿಂದ ಸಂಜೆ 4ರವರೆಗೆ ಭಕ್ತರಿಗೆ ಬಡಿಸಲಾಗುತ್ತದೆ.

 ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರ ಅನುಮತಿ ಬಳಿಕ ವಡೆ ಸೇರಿದೆ. ಇಲ್ಲಿನ ವೆಂಗಾಮಂಬಾ ಅನ್ನ ಪ್ರಸಾದ ಭವನದಲ್ಲಿ ಟಿಟಿಡಿ ಅಧ್ಯಕ್ಷ ಬಿಆರ್‌. ನಾಯ್ಡು ಅವರು ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ಅನ್ನ, ಸಾರು, ಸಾಂಬಾರ್‌, ಚಟ್ನಿ, ಗೊಜ್ಜು, ಸಿಹಿ ಪೊಂಗಲ್‌, ಮಜ್ಜಿಗೆ ಜೊತೆಗೆ ಇನ್ನು ಮಸಾಲೆ ವಡೆಯೂ ಭಕ್ತರಿಗೆ ಸಿಗಲಿದೆ.

ತಕ್ಷಣ ಎಲ್ಲ ಒತ್ತೆಯಾಳು ಬಿಡಿ: ಹಮಾಸ್‌ಗೆ ಟ್ರಂಪ್ ಫೈನಲ್‌ ವಾರ್ನಿಂಗ್‌

ವಾಷಿಂಗ್ಟನ್‌: ಗಾಜಾದಲ್ಲಿ ಉಳಿದಿರುವ ಎಲ್ಲ ಇಸ್ರೇಲ್‌ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದು ಕೊನೆಯ ಎಚ್ಚರಿಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬುಧವಾರ ಹಮಾಸ್‌ ಬಂಡುಕೋರರಿಗೆ ಕಟು ಸಂದೇಶ ರವಾನಿಸಿದ್ದಾರೆ. 

ಬಿಡುಗಡೆ ಸಂಬಂಧ ಹಮಾಸ್‌ ಉಗ್ರರ ಜೊತೆ ಮಾತುಕತೆಗಾಗಿ ಮೊತ್ತಮೊದಲ ಬಾರಿಗೆ ಸಂಧಾನಕಾರರನ್ನು ರವಾನಿಸಿರುವ ಟ್ರಂಪ್‌, ಅದರ ಬೆನ್ನಲ್ಲೇ ಈ ಎಚ್ಚರಿಕೆ ನೀಡಿದ್ದಾರೆ. ‘ತಡಮಾಡದೆ ಈಗಲೇ ಎಲ್ಲ ಒತ್ತೆಯಾಳುಗಳ ಬಿಡುಗಡೆ ಮಾಡಿ. ಇಲ್ಲದಿದ್ದರೆ ಇಸ್ರೇಲ್‌ಗೆ ಯುದ್ಧ ಅಂತ್ಯಕ್ಕೆ ಎಲ್ಲ ನೆರವು ನೀಡುತ್ತೇವೆ. ಇದೇ ನಿಮಗೆ ಕೊನೆಯಾಗಲಿದೆ’ ಎಂದು ಟ್ರಂಪ್‌ ತಮ್ಮ ಜಾಲತಾಣದಲ್ಲಿ ಹೇಳಿಕೆಯಲ್ಲಿ ತೀಕ್ಷ್ಣ ನುಡಿಗಳನ್ನಾಡಿಸಿದ್ದಾರೆ.

ಪತ್ನಿ ಮಾಂಗಲ್ಯ, ಬಿಂದಿ ಧರಿಸದಿದ್ದರೆ, ಪತಿ ಹೇಗೆ ಆಸಕ್ತಿ ತೋರ್ತಾನೆ: ಜಡ್ಜ್‌

ನವದೆಹಲಿ: ಸೆಷನ್‌ ನ್ಯಾಯಾಧೀಶರೊಬ್ಬರು ದಂಪತಿಗಳ ಮಧ್ಯೆ ಮಧ್ಯಸ್ಥಿಕೆ ಮಾಡುವ ವೇಳೆ ಮಹಿಳೆ ಮಂಗಳಸೂತ್ರ ಮತ್ತು ಹಣೆಗೆ ಬಿಂದಿ ಧರಿಸದಿದ್ದರೆ, ಪತಿ ಹೇಗೆ ಆಸಕ್ತಿ ತೋರಿಸುತ್ತಾನೆ ಎಂಬ ಮಾತನ್ನು ಹೇಳಿದ್ದಾರೆ. ಮಧ್ಯಸ್ಥಿಕೆ ವೇಳೆ ನಡೆದ ಸಂವಾದವನ್ನು ಸಂಬಂಧಪಟ್ಟ ವಕೀಲರು ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ. ‘ನೀವು ಮಾಂಗಲ್ಯ ಸರ ಮತ್ತು ಬಿಂದಿಯನ್ನು ಧರಿಸಿಲ್ಲ. ನೀವು ಮದುವೆಯಾದವರ ರೀತಿ ನಡೆದುಕೊಳ್ಳದಿದ್ದರೆ, ನಿಮ್ಮ ಗಂಡನಿಗೆ ನಿಮ್ಮ ಮೇಲೆ ಹೇಗೆ ಆಸಕ್ತಿ ಬರಲು ಸಾಧ್ಯ’ ಎಂದು ಜಡ್ಜ್‌ ಮಹಿಳೆಯನ್ನು ಪ್ರಶ್ನಿಸಿದ್ದಾರೆ ಎಂದು ವಕೀಲರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಗೆ ಕಲ್ಕತ್ತಾ ಹೈನ ನ್ಯಾ. ಬಾಗ್ಚಿ ಶಿಫಾರಸು

ನವದೆಹಲಿ: ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶೆ ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲು ಕೊಲಿಜಿಯಂ ಗುರುವಾರ ಶಿಫಾರಸು ಮಾಡಿದೆ. ಈ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಿದರೆ, ನ್ಯಾ. ಬಾಗ್ಚಿ ಅವರು ಸುಪ್ರೀಂ ಕೋರ್ಟ್‌ನಲ್ಲಿ 6 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಲಿದ್ದಾರೆ. ಈ ಅವಧಿಯಲ್ಲಿ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ.

ತನ್ನ ದೇಶದ ಮೇಲೆ ದಕ್ಷಿಣ ಕೊರಿಯಾ ಬಾಂಬ್‌ ದಾಳಿ!

ಸಿಯೋಲ್: ತರಬೇತಿ ವೇಳೆ ದಕ್ಷಿಣ ಕೊರಿಯಾದ 2 ಯುದ್ಧವಿಮಾನಗಳು ಆಕಸ್ಮಿಕವಾಗಿ ನಾಗರಿಕ ಪ್ರದೇಶದ ಮೇಲೆ 8 ಬಾಂಬ್‌ ಬೀಳಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ.ಕೆಎಫ್-16 ವಿಮಾನಗಳಲ್ಲಿ ಒಂದು ವಿಮಾನದ ಪೈಲಟ್ ಬಾಂಬ್ ದಾಳಿ ಸ್ಥಳಕ್ಕೆ ತಪ್ಪು ನಿರ್ದೇಶನ ನೀಡಿದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ. ‘ಯುದ್ಧವಿಮಾನಗಳು ಲೈವ್-ಫೈಯರಿಂಗ್ ತರಬೇತಿ ನಡೆಸುತ್ತಿದ್ದವು. ಆ ವೇಳೆ ಆಕಸ್ಮಿಕವಾಗಿ ಪೋಚಿಯಾನ್ನ ಜನವಸತಿ ಪ್ರದೇಶದ ಮೇಲೆ ಬಾಂಬ್‌ಗಳು ಬಿದ್ದಿವೆ. ಈ ಕುರಿತು ಸಮಿತಿ ರಚಿಸಿ ಹೆಚ್ಚಿನ ತನಿಖೆ ನಡೆಸಲಾಗುವುದು’ ಎಂದು ದಕ್ಷಿಣ ಕೊರಿಯಾದ ವಾಯುಪಡೆ ಹೇಳಿಕೆ ನೀಡಿದೆ.

ಘಟನೆಯಲ್ಲಿ 6 ಮಂದಿ ನಾಗರಿಕರು ಮತ್ತು ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ 7 ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.