ಸಾರಾಂಶ
ತಿರುಪತಿ: ತಿರುಮಲದ ತಿರುಪತಿ ದೇವಸ್ಥಾನದ ಪ್ರಸಿದ್ಧ ಶ್ರೀವಾರಿ ಲಡ್ಡು ಪ್ರಸಾದಕ್ಕೆ ಬೇಡಿಕೆ ಹೆಚ್ಚಿದ್ದು, ಲಡ್ಡು ತಯಾರಿಕೆಗೆ ಇನ್ನೂ 84 ನೌಕರರನ್ನು ನೇಮಕ ಮಾಡಿಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ನಿರ್ಧರಿಸಿದೆ.
ಪ್ರಸ್ತುತ ಪ್ರತಿ ದಿನ 3.5 ಲಕ್ಷ ಸಣ್ಣ ಲಡ್ಡುಗಳು, 6,000 ದೊಡ್ಡ ಲಡ್ಡುಗಳು ಹಾಗೂ 3,500 ವಡೆಗಳನ್ನು ತಯಾರಿಸಲಾಗುತ್ತಿದೆ. ಆದರೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿರುವ ಕಾರಣ ಬೇಡಿಕೆಯೂ ಹೆಚ್ಚಿದೆ. ಆದ್ದರಿಂದ ಇನ್ನುಮುಂದೆ ಅನುದಿನ 50,000 ಸಣ್ಣ ಲಡ್ಡು, 4,000 ದೊಡ್ಡ ಲಡ್ಡು ಹಾಗೂ 3,500 ವಡೆಗಳನ್ನು ಹೆಚ್ಚಿಗೆ ತಯಾರಿಸಲಾಗುವುದು. ಇದಕ್ಕಾಗಿ 74 ವೈಷ್ಣವರು ಹಾಗೂ 10 ವೈಷ್ಣವರಲ್ಲದವರನ್ನು ಪೊಟ್ಟು(ಲಡ್ಡು ತಯಾರಿಸುವ ಸ್ಥಳ)ವಿನಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ.
ಇನ್ನು ನೌಕರರಿಗೆ ಬ್ಯಾಡ್ಜ್:
ಟಿಟಿಡಿಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೆ ಅವರ ಹೆಸರುಳ್ಳ ಬ್ಯಾಡ್ಜ್‌ಗಳನ್ನು ನೀಡುವುದಾಗಿ ಅಧ್ಯಕ್ಷ ಬಿ.ಆರ್. ನಾಯ್ಡು ಘೋಷಿಸಿದ್ದಾರೆ. ಭಕ್ತರೊಂದಿಗೆ ನೌಕರರ ಅನುಚಿತ ವರ್ತನೆ ಪ್ರಕರಣಗಳ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಅಂತಹ ನೌಕರರನ್ನು ಗುರುತಿಸಿ ಕ್ರಮ ಕೈಗೊಳ್ಳುವುದು ಸುಲಭವಾಗಲಿದೆ.