ಸಾರಾಂಶ
9 ವಿಮಾನ ನಿಲ್ದಾಣಗಳಲ್ಲಿ ತನಗೆ ಸೇವೆ ಸಲ್ಲಿಸಲು ನೀಡಿದ್ದ ಭದ್ರತಾ ಪರವಾನಗಿ ಹಿಂದಕ್ಕೆ ಪಡೆದ ಭಾರತ ಸರ್ಕಾರದ ನಿರ್ಧಾರವನ್ನು ಟರ್ಕಿ ಮೂಲದ ಸೆಲೆಬಿ ಕಂಪನಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ
ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ 9 ವಿಮಾನ ನಿಲ್ದಾಣಗಳಲ್ಲಿ ತನಗೆ ಸೇವೆ ಸಲ್ಲಿಸಲು ನೀಡಿದ್ದ ಭದ್ರತಾ ಪರವಾನಗಿ ಹಿಂದಕ್ಕೆ ಪಡೆದ ಭಾರತ ಸರ್ಕಾರದ ನಿರ್ಧಾರವನ್ನು ಟರ್ಕಿ ಮೂಲದ ಸೆಲೆಬಿ ಕಂಪನಿ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಮೂಲಕ, ಇತ್ತೀಚೆಗೆ ಪಾಕ್‌ಗೆ ಯುದ್ಧದಲ್ಲಿ ಬೆಂಬಲ ನೀಡಿದ್ದ ಟರ್ಕಿ, ಭಾರತಕ್ಕೆ ಸೆಡ್ಡು ಹೊಡೆಯುವ ಮತ್ತೊಂದು ಉದ್ಧಟತನ ಪ್ರದರ್ಶಿಸಿದೆ.
ಪಾಕಿಸ್ತಾನದ ಬೆನ್ನಿಗೆ ನಿಂತಿರುವ ಟರ್ಕಿಗೆ ಬುದ್ಧಿ ಕಲಿಸಲು ಸೆಲೆಬಿ ಕಂಪನಿಗೆ ನೀಡಿದ್ದ ಪರವಾನಗಿಯನ್ನು ಗುರುವಾರವಷ್ಟೇ ಭಾರತ ಸರ್ಕಾರ ಹಿಂದಕ್ಕೆ ಪಡೆದಿತ್ತು. ಇದರ ಪ್ರಶ್ನಿಸಿ ಶುಕ್ರವಾರ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿರುವ ಸೆಲೆಬಿ, ರಾಷ್ಟ್ರೀಯ ಭದ್ರತೆ ಹಿತಾಸಕ್ತಿಯ ಕಾರಣ ನೀಡಿ ತನ್ನ ಸೇವೆ ರದ್ದುಗೊಳಿಸಿದ ಸರ್ಕಾರದ ಆದೇಶವನ್ನು ತಡೆಹಿಡಿಯುವಂತೆ ಕೋರಿದೆ.
ಜೊತೆಗೆ, ನಮ್ಮಿಂದ ರಾಷ್ಟ್ರೀಯ ಭದ್ರತೆಗೆ ಯಾವ ರೀತಿಯಲ್ಲಿ ಹಾನಿಯಾಗುತ್ತದೆ ಎಂದು ಹೇಳಿಲ್ಲ. ಕಂಪನಿಗೆ ಯಾವುದೇ ಎಚ್ಚರಿಕೆ ನೀಡದೆ ಈ ಆದೇಶ ಹೊರಡಿಸಲಾಗಿದೆ. ಇದರಿಂದ 3791 ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ. ಜತೆಗೆ, ಹೂಡಿಕೆದಾರರು ಸಹ ವಿಶ್ವಾಸ ಕಳೆದುಕೊಳ್ಳುತ್ತಾರೆ’ ಎಂದು ಕಂಪನಿ ವಾದಿಸಿದೆ.
ಸೆಲೆಬಿ ಹಿನ್ನೆಲೆ:
ಟರ್ಕಿ ಮೂಲದ ಸೆಲೆಬಿ ಕಂಪನಿಯು ಬ್ರಿಡ್ಜ್ ಮೌಂಟೆಡ್ ಸಲಕರಣೆಗಳ ಸ್ಥಾಪನೆ ಮತ್ತು ಸರಕು ನಿರ್ವಹಣೆ ಸೇರಿದಂತೆ ಗ್ರೌಂಡ್ ಹ್ಯಾಂಡಲಿಂಗ್ ಸೇವೆಯನ್ನು ಬೆಂಗಳೂರು, ದೆಹಲಿ, ಮುಂಬೈ, ಕೊಚ್ಚಿ ಸೇರಿದಂತೆ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒದಗಿಸುತ್ತಿದೆ.