ಸಂಸತ್ ದಾಳಿ ರೂವಾರಿ ಮಸೂದ್‌ ಅಜರ್‌ ಪಾಕ್‌ನಲ್ಲಿ ಹತ್ಯೆ?

| Published : Jan 02 2024, 02:15 AM IST

ಸಾರಾಂಶ

ಕಂದಹಾರ್‌ ವಿಮಾನ ಹೈಜಾಕ್‌ ಮಾಡಿದ್ದ ಉಗ್ರ ಮಸೂದ್‌ ಅಜ಼ರ್‌ ಬಾಂಬ್‌ಗೆ ಬಲಿಯಾಗಿದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸಂದೇಶಗಳ ಹರಿದಾಟವಾಗುತ್ತಿದೆ.

ನವದೆಹಲಿ: ಸಂಸತ್‌ ಭವನದ ಮೇಲಿನ ದಾಳಿಯ ರೂವಾರಿ, ಕಂದಹಾರ್‌ ವಿಮಾನ ಹೈಜಾಕ್‌ ಪ್ರಕರಣದ ಮಾಸ್ಟರ್‌ಮೈಂಡ್‌ ಉಗ್ರ ಮಸೂದ್‌ ಅಜರ್‌ನನ್ನು ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅನಾಮಧೇಯ ವ್ಯಕ್ತಿಗಳು ಬಾಂಬ್‌ ಸ್ಫೋಟಿಸಿ ಹತ್ಯೆಗೈದಿದ್ದಾರೆ ಎಂಬ ವದಂತಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಡಿವೆ.

ಆದರೆ ಈ ಸಂದೇಶಗಳಿಗೆ ಯಾವುದೇ ಖಚಿತ ಆಧಾರವಿಲ್ಲ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.

ಟ್ವೀಟ್‌ಗಳಲ್ಲೇನಿದೆ?:ಈತ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರರಲ್ಲಿ ಒಬ್ಬನಾಗಿದ್ದು, ಇತ್ತೀಚೆಗೆ ಹಲವು ಉಗ್ರರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುತ್ತಿರುವಂತೆಯೇ ಇವನೂ ನಿಗೂಢ ದಾಳಿಗೆ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸೋಮವಾರ ಬೆಳಿಗ್ಗೆ 5 ಗಂಟೆಗೆ ನಡೆದ ಸ್ಫೋಟದಲ್ಲಿ ಮಸೂದ್‌ ಸಾವನ್ನಪ್ಪಿದ್ದಾನೆ ಎಂದು ಕೆಲವರು ಬರೆದಿದ್ದಾರೆ.‘ದಾವೂದ್‌ ಇಬ್ರಾಹಿಂ ಬಳಿಕ ಅನಾಮಧೇಯ ದಾಳಿಕೋರರು ಮಸೂದ್‌ ಅಜರ್‌ನನ್ನು ಸ್ವರ್ಗಕ್ಕೆ 72 ಯುವತಿಯರ ಬಳಿಗೆ ಕಳಿಸಿದ್ದಾರೆ. ಈ ಹೊಸ ವರ್ಷದ ಉಡುಗೊರೆಗೆ ಧನ್ಯವಾದಗಳು’ ಎಂದು ಒಬ್ಬರು ಬರೆದಿದ್ದಾರೆ.

ಇತ್ತೀಚೆಗೆ ಉಗ್ರರ ಸರಣಿ ನಿಗೂಢ ಸಾವು:2023ರ ನವೆಂಬರ್‌ನಲ್ಲಿ ಮಸೂದ್‌ ಅಜರ್‌ನ ಬಲಗೈ ಬಂಟ ಮೌಲಾನಾ ರಹೀಮುಲ್ಲಾ ತಾರಿಖ್‌ ಪಾಕಿಸ್ತಾನದಲ್ಲಿ ಅನಾಮಧೇಯರ ಗುಂಡಿನ ದಾಳಿಗೆ ಬಲಿಯಾಗಿದ್ದ. ಇಂತಹ 20ಕ್ಕೂ ಹೆಚ್ಚು ಉಗ್ರರ ಸಾವು ಕೆಲ ತಿಂಗಳಿನಿಂದ ಈಚೆಗೆ ಸಂಭವಿಸಿದ್ದು, ಅದನ್ನು ಭಾರತದ ಗುಪ್ತಚರ ದಳ ಮಾಡಿಸುತ್ತಿದೆ ಎಂದು ಪಾಕಿಸ್ತಾನದಲ್ಲಿ ಸುದ್ದಿ ಹರಡಿದೆ.ಮಸೂದ್‌ ಅಜರ್‌ ಪಾಕಿಸ್ತಾನದ ಜೈಷ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಸ್ಥಾಪಕನಾಗಿದ್ದು, ಭಾರತದಲ್ಲಿ ಹಲವಾರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದಾನೆ. 2001ರ ಸಂಸತ್‌ ದಾಳಿ, 2005ರ ಅಯೋಧ್ಯೆ ರಾಮನ ದೇಗುಲದ ಮೇಲಿನ ದಾಳಿ, 2019ರ ಪುಲ್ವಾಮಾ ದಾಳಿ ಮುಂತಾದವುಗಳ ರೂವಾರಿ ಅವನೇ ಎನ್ನಲಾಗಿದೆ. ಆತ ಪಾಕಿಸ್ತಾನದ ಸೇನೆಯ ಭದ್ರತೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನೆಲೆಸಿದ್ದಾನೆ.