ಸಾರಾಂಶ
ಈಶಾನ್ಯ ರಾಜ್ಯ ಮಣಿಪುರದ ಜಿರಿಬಮ್‌ನಲ್ಲಿ ಸೋಮವಾರ ಕುಕಿ ಉಗ್ರರ ದಾಳಿ ವೇಳೆ ಮೈತೇಯಿ ಸಮುದಾಯದ ಇಬ್ಬರು ವೃದ್ಧರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಇಂಫಾಲ: ಈಶಾನ್ಯ ರಾಜ್ಯ ಮಣಿಪುರದ ಜಿರಿಬಮ್‌ನಲ್ಲಿ ಸೋಮವಾರ ಕುಕಿ ಉಗ್ರರ ದಾಳಿ ವೇಳೆ ಮೈತೇಯಿ ಸಮುದಾಯದ ಇಬ್ಬರು ವೃದ್ಧರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಘಟನಾ ಸಮೀಪದ ಸ್ಥಳದಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಈ ನಡುವೆ ಇನ್ನೂ 5 ಜನರು ನಾಪತ್ತೆಯಾಗಿದ್ದು, ಅವರನ್ನು ಕುಕಿ ಉಗ್ರರು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣ, ಯಾವುದೇ ಅನಾಹುತಕಾರಿ ಘಟನೆ ನಡೆಯುವುದನ್ನು ತಡೆಯುವ ಸಲುವಾಗಿ ಜಿಲ್ಲಾಡಳಿತ ಸ್ಥಳದಲ್ಲಿ ನಿಷೇಧಾಜ್ಞೆ ಹೇರಿದೆ.ಸೋಮವಾರದ ಹಿಂಸಾಚಾರದ ಬಳಿಕ ಮೈತೇಯಿ ಸಮುದಾಯದ ಹಲವರು ಕಣ್ಮರೆಯಾಗಿದ್ದರು. ನಾಪತ್ತೆಯಾದವರ ಶೋಧ ಕಾರ್ಯದ ವೇಳೆ ಸೋಮವಾರ ಶಂಕಿತ ಉಗ್ರರು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದ ಜಕುರಾಧೋರ್ ಕರೋಂಗ್ ಪ್ರದೇಶದಲ್ಲಿ ಇಬ್ಬರ ಶವ ಪತ್ತೆಯಾಗಿದೆ. ನಾಪತ್ತೆಯಾಗಿರುವ ಉಳಿದ ಐವರಿಗೆ ಭದ್ರತಾ ಪಡೆಗಳು ಹುಡುಕಾಟ ನಡೆಸಿವೆ.
ಜಿರಿಬಮ್ ಜಿಲ್ಲೆಯ ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್‌ನ ಮೇಲೆ ಸೋಮವಾರ ಕುಕಿ ಉಗ್ರರ ಗುಂಪೊಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿತ್ತು. ಜೊತೆಗೆ ಸಮೀಪದ ಮಾರುಕಟ್ಟೆಗೂ ಹೋಗಿ ಅಂಗಡಿಗಳಿಗೆ ಬೆಂಕಿ ಇಟ್ಟು, ಹಲವು ಮನೆಗಳ ಮೇಲೆ ದಾಳಿ ನಡೆಸಿ, ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ 11 ಕುಕಿ ಉಗ್ರರು ಸಾವನ್ನಪ್ಪಿದ್ದರು.