ಸಾರಾಂಶ
ರಾಂಚಿ: ರೈಲು ದುರಂತಗಳ ಸರಣಿ ಮುಂದುವರಿದಿದೆ. ಮಂಗಳವಾರ ಹೌರಾ-ಮುಂಬೈ ಎಕ್ಸ್‌ಪ್ರೆಸ್ ರೈಲಿನ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 20 ಮಂದಿಗೆ ಗಾಯಗಳಾಗಿರುವ ಘಟನೆ ಜಾರ್ಖಂಡ್‌ನ ಸರಾಯ್ಕೆಲಾ- ಖರ್ಸಾವನ್ ಜಿಲ್ಲೆಯಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿದ ಆಗ್ನೇಯ ರೈಲ್ವೆಯ ವಕ್ತಾರ ಓಂ ಪ್ರಕಾಶ್ ಚರಣ್, ‘ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಬರಬಂಬೂವಿನಲ್ಲಿ ಮುಂಜಾನೆ 3:45ಕ್ಕೆ ಹೌರಾ ರೈಲು ದುರ್ಘಟನೆ ಸಂಭವಿಸಿದೆ. ಹತ್ತಿರದಲ್ಲೇ ಇನ್ನೊಂದು ಗೂಡ್ಸ್ ರೈಲೂ ಹಳಿತಪ್ಪಿದ್ದು, ಎರಡೂ ಘಟನೆಗಳು ಒಟ್ಟಿಗೇ ಸಂಭವಿಸಿವೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದಿದ್ದಾರೆ.ನಾಗ್ಪುರದ ಮೂಲಕ ಸಾಗುವ 12810 ಹೌರಾ-ಮುಂಬೈ ರೈಲಿನ 22 ಬೋಗಿಗಳ ಪೈಕಿ 18 ಬೋಗಿಗಳು ಹಳಿತಪ್ಪಿವೆ. ಇವುಗಳಲ್ಲಿ 16 ಪ್ರಯಾಣಿಕರಿದ್ದ ಕೋಚ್‌ಗಳಾಗಿದ್ದು, ಒಂದು ಪವರ್ ಕಾರ್ ಹಾಗೂ ಇನ್ನೊಂದು ಅಡುಗೆ ತಯಾರಿಸುವ ಪ್ಯಾಂಟ್ರಿ ಕಾರ್ ಆಗಿತ್ತು.
ಕಳೆದ 2 ತಿಂಗಳಲ್ಲಿ ಸಂಭವಿಸಿದ 3ನೇ ರೈಲು ದುರಂತ ಇದಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶ ಹಾಗೂ ಪ.ಬಂಗಾಳದಲ್ಲಿ 2 ರೈಲುಗಳು ಹಳಿ ತಪ್ಪಿದ್ದವು.10 ಲಕ್ಷ ರು. ಪರಿಹಾರ:
ಚಕ್ರಧರಪುರದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರು., ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರು., ಸಣ್ಣಪುಟ್ಟ ಗಾಯಗಳಾದವರಿಗೆ 1 ಲಕ್ಷ ರು. ಪರಿಹಾರವನ್ನು ಘೋಷಿಸಿದ್ದಾರೆ.ಅಪಘಾತದ ವೇಳೆ ಗಾಯಗೊಂಡವರಿಗೆ ಬರಬಂಬೂವಿನಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಕ್ರಧರಪುರಕ್ಕೆ ಕರೆದೊಯ್ಯಲಾಗಿದೆ. ಉಳಿದ ಪ್ರಯಾಣಿಕರನ್ನು ಬೇರೊಂದು ರೈಲಿನಲ್ಲಿ ಕಳುಹಿಸಲಾಗಿದೆ.
ಅಪಘಾತ ಸಂಭವಿಸಿದ ಮಾರ್ಗದಲ್ಲಿ ಚಲಿಸಲುವ ಕೆಲ ಎಕ್ಸ್‌ಪ್ರೆಸ್ ಹಾಗೂ ಪ್ರಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಿಸಲಾಗಿದೆ.ಜಾರ್ಖಂಡ್ ಮುಖ್ಯಂಮತ್ರಿ ಹೇಮಂತ್ ಸೊರೇನ್ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳಿಗೆ ಸಹಾಯ ಮಾಡಲು ಅಧಿಕಾಗಳಿಗೆ ಆದೇಶಿಸಿದ್ದಾರೆ. ಇದೇ ವೇಳೆ ಸೊರೇನ್‌ರ ಪತ್ನಿ ಕಲ್ಪನಾ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತಕ್ಕೆ ಸಹಾಯ ಮಾಡಿ, ತೊಂದರೆಗೀಡಾದವರಿಗೆ ನೀರು ಮತ್ತು ಆಹಾರ ಒದಗಿಸುವಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ಹಾಗೂ ಇಂಡಿಯಾ ಕೂಟದ ಕಾರ್ಯಕರ್ತರಿಗೆ ಹೇಳಿದ್ದಾರೆ.
‘ರೀಲ್ಸ್ ಬಿಡಿ, ರೈಲಿನತ್ತ ಗಮನ ನೀಡಿ: ವೈಷ್ಣವ್‌ಗೆ ವಿಪಕ್ಷ ಚಾಟಿರಾಂಚಿ: ಜಾರ್ಖಂಡ್‌ನಲ್ಲಿ ಸಂಭವಿಸಿದ ಹೌರಾ-ಮುಂಬೈ ರೈಲು ಅಪಘಾತಕ್ಕೆ ವಿಪಕ್ಷಗಳು ರೈಲ್ವೇ ಇಲಾಖೆಯನ್ನು ಹೊಣೆ ಮಾಡಿವವೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜಾರ್ಖಂಡ ಮುಕ್ತಿ ಮೋರ್ಚಾ, ‘ರೈಲ್ವೇ ಸಚಿವ ಅಶ್ವಿನಿ ವೃಷ್ಣವ್ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವುದು ಬಿಟ್ಟು ತಮ್ಮ ಕೆಲಸದತ್ತ ಗಮನ ಹರಿಸಬೇಕಾದ ಅಗತ್ಯವಿದೆ. ಇದರಲ್ಲಿ ಸಿಎಂ ಸೊರೇನ್ ಅಥವ ಇಂಡಿಯಾ ಕೂಟದ ಕೈವಾಡವಿಲ್ಲ’ ಎಂದಿದೆ. ಒಂದರ ಹಿಂದೊಂದರಂತೆ ಸಂಭವಿಸುತ್ತಿರುವ ರೈಲು ದುರಂತಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪಶ್ಮಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರದ ನಿರ್ಲಕ್ಷಕ್ಕೆ ಕೊನೆಯೇ ಇಲ್ಲವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಇತ್ತ ವೈಷ್ಣವ್‌ರನ್ನು ‘ಸೋತ ಸಚಿವ’ ಎಂದು ಕರೆದಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಈ ವರ್ಷದ ಜೂನ್ ಮತ್ತು ಜುಲೈ ತಿಂಗಳುಗಳಲ್ಲೇ ಮೂರು ರೈಲು ಅಪಘಾತಗಳು ಸಂಭವಿಸಿದ್ದು, 17 ಜನ ಪ್ರಾಣ ಕಳೆದುಕೊಂಡು ನೂರಾರು ಮಂದಿ ಗಾಯಗೊಂಡಿದ್ದಾರೆ’ ಎಂದರು. ‘ಇದೇ ಮೋದಿಯವರ ಹೊಸ ಭಾರತ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವ್ಯಂಗ್ಯವಾಡಿದ್ದಾರೆ.