ಸಾರಾಂಶ
ಡೆಹ್ರಾಡೂನ್ : ವಿವಾಹ, ವಿಚ್ಛೇದನ, ಉತ್ತರದಾಯಿತ್ವ ವಿಷಯದಲ್ಲಿ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಜಾರಿಗೆ ಅವಕಾಶ ಮಾಡಿಕೊಡುವ ಮೂಲಕ ಸಮಾಜದಲ್ಲಿ ಏಕರೂಪತೆಯನ್ನು ತರುವ ಉದ್ದೇಶ ಹೊಂದಿರುವ ‘ಏಕರೂಪ ನಾಗರಿಕ ಸಂಹಿತೆ’, ಉತ್ತರಾಖಂಡದಲ್ಲಿ ಸೋಮವಾರದಿಂದ ಜಾರಿಗೆ ಬರಲಿದೆ. ಸ್ವಾತಂತ್ರ್ಯಾನಂತರದಲ್ಲಿ ರಾಜ್ಯವೊಂದು ಇಂಥ ಕಾಯ್ದೆ ಜಾರಿಗೊಳಿಸುತ್ತಿರುವುದು ಇದೇ ಮೊದಲು.
ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಪೈಕಿ ಒಂದಾದ ಈ ಕಾಯ್ದೆಯನ್ನು ಇದೀಗ ಬಿಜೆಪಿ ಆಡಳಿತದ ರಾಜ್ಯವಾದ ಉತ್ತರಾಖಂಡದಲ್ಲಿ ಜಾರಿ ಮಾಡಲಾಗುತ್ತಿದೆ. ಹೊಸ ಕಾಯ್ದೆ ಹೇಗಿರಬೇಕು ಈಗಾಗಲೇ ನಿರ್ಧರಿಸಲಾಗಿದ್ದು, ಅದರ ಜಾರಿಯ ಕುರಿತು ಈಗಾಗಲೇ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ತರಬೇತಿ ನೀಡಿದೆ.
‘ಮೋದಿ ಯಜ್ಞ’ಕ್ಕೆ ಕೊಡುಗೆ- ಸಿಎಂ:
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘ಯೋಜಿತ, ಸ್ವಾವಲಂಬನೆಯ ಹಾಗೂ ಅಭಿವೃದ್ದಿಗೊಂಡ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸಿಂಗ್ ಅವರು ಮಾಡುತ್ತಿರುವ ಯಜ್ಞಕ್ಕೆ ಕೊಡುಗೆಯ ರೂಪದಲ್ಲಿ ನಾವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುತ್ತಿದ್ದೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಯ್ದೆಯಲ್ಲಿ ಏನಿದೆ?:
- ಮದುವೆಯಂತೆ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯವಾಗಲಿದೆ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ, ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ, ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ನೋಂದಣಿ ಕಡ್ಡಾಯ.
- ಉಯಿಲಿನ ಸಾಕ್ಷಿಗಳ ವಿಡಿಯೋ ಕಡ್ಡಾಯ: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಜತೆಗೆ, 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್‌ಲೋಡ್ ಮಾಡಬೇಕು.
ಚುನಾವಣಾ ಭರವಸೆ:
2022ರ ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿಯು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ರಾಜ್ಯದಲ್ಲಿ ಎರಡನೇ ಬಾರಿಗೆ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಇದೀಗ ಜಾರಿಗೆ ತರಲಾಗುತ್ತಿದೆ.
2022ರಲ್ಲಿ ಧಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಸ್ವೀಕರಿಸಿದ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಕಾಯ್ದೆ ಜಾರಿಗೆ ಸಂಬಂಧಿಸಿ ತಜ್ಞರ ಸಮಿತಿಯನ್ನು ರಚಿಸಿದ್ದರು. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಂಜನ್ ಪ್ರಕಾಶ್ ದೇಸಾಯಿ ನೇತತ್ವದ ಸಮಿತಿಗೆ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ಕರಡು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿತ್ತು. ಈ ಸಮಿತಿಯು ನಾಲ್ಕು ಅಧ್ಯಾಯಗಳಲ್ಲಿ ಕರಡು ಕಾಯ್ದೆ ರಚಿಸಿ ಕಳೆದ ವರ್ಷ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಒಪ್ಪಿಸಿತ್ತು.
ಆ ಬಳಿಕ ಈ ಕಾನೂನು ಜಾರಿಗೆ ಅಗತ್ಯವಿರುವ ನಿಯಮಾವಳಿ ರೂಪಿಸಲು ಮಾಜಿ ಮುಖ್ಯಕಾರ್ಯದರ್ಶಿ ಶತ್ರುಘ್ನ ಸಿಂಗ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಕಳೆದ ವರ್ಷವೇ ಇದು ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದ್ದು, ಸೋಮವಾರದಿಂದ ಜಾರಿಗೆ ಬರಲಿದೆ.
ಉತ್ತರಾಖಂಡದಲ್ಲಿ ಈ ಕಾಯ್ದೆ ಜಾರಿಯಾದ ಬಳಿಕ ಬಿಜೆಪಿ ಆಡಳಿತವಿರುವ ಅಸ್ಸಾಂ ಸೇರಿ ವಿವಿಧ ರಾಜ್ಯಗಳೂ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಅಸ್ಸಾಂ ಸೇರಿ ಹಲವು ರಾಜ್ಯಗಳು ಈ ಕುರಿತು ಆಸಕ್ತಿ ತೋರಿವೆ.
ಗೋವಾದಲ್ಲಿ ಈಗಾಗಲೇ ಜಾರಿಯಲ್ಲಿದೆ ಯುಸಿಸಿ!ಪಣಜಿ: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ಸೋಮವಾರದಿಂದ ಜಾರಿಗೆ ಬರಲಿದೆ. ಸ್ವಾತಂತ್ರ್ಯಾನಂತರ ದೇಶದಲ್ಲಿ ಯುಸಿಸಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪೋರ್ಚುಗೀಸ್ ಕಾಲದಲ್ಲಿಯೇ ಗೋವಾದಲ್ಲಿ ಯುಸಿಸಿ ಜಾರಿಗೊಂಡಿತ್ತು. ಪೋರ್ಚುಗೀಸ್ ಸಿವಿಲ್ ಕೋಡ್-1867ರ ಪ್ರಕಾರ ಜಾರಿಕೊಂಡ ಕಾಯ್ದೆ, ಪೋರ್ಚುಗೀಸ್ ಆಳ್ವಿಕೆ ವಿಮೋಚನೆಯ ನಂತರ, ಗೋವಾ, ದಮನ್ ಮತ್ತು ದಿಯು ಆಡಳಿತ ಕಾಯಿದೆ-1962ರ ಸೆಕ್ಷನ್ 5(1) ರ ಮೂಲಕ ಮುಂದುವರೆದಿದೆ.
ಸಂಹಿತೆಯಲ್ಲೇನಿದೆ?- ಎಲ್ಲ ಧರ್ಮದವರಿಗೆ ಸಂಹಿತೆ ಅನ್ವಯ ಸರ್ಕಾರದಲ್ಲಿ ವಿವಾಹ ನೋಂದಣಿ ಕಡ್ಡಾಯ
- ಆಯಾ ಧರ್ಮದನುಸಾರ ಬೇರೆ ಬೇರೆ ವಿವಾಹ ನೋಂದಣಿ ಇನ್ನಿಲ್ಲ
- ಎಲ್ಲಾ ಧರ್ಮೀಯರಿಗೂ ವಿಚ್ಛೇದನ, ಆಸ್ತಿಗೆ ಒಂದೇ ಕಾನೂನು
- ಮದುವೆಯಂತೆ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ
- ನೋಂದಣಿಯು ಉತ್ತರಾಖಂಡ ನಿವಾಸಿಗಳಿಗೆ ಅನ್ವಯ
- ಅನ್ಯ ರಾಜ್ಯಗಳಲ್ಲಿರುವ ಉತ್ತರಾಖಂಡ ಮೂಲದವರಿಗೂ ಅನ್ವಯ
- ಲಿವ್ ಇನ್‌ನಿಂದ ಮಗು ಜನಿಸಿದರೆ ಕೂಡ 7 ದಿನದಲ್ಲಿ ನೋಂದಣಿ ಕಡ್ಡಾಯ
- ಉಯಿಲು ಬರಹಗಾರರು ಸರ್ಕಾರಕ್ಕೆ ತಮ್ಮ ಆಧಾರ್ ಮಾಹಿತಿ ಸಲ್ಲಿಸಬೇಕು
- 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋ ಚಿತ್ರೀಕರಣ ಕಡ್ಡಾಯ