ಸಾರಾಂಶ
ಉತ್ತರಾಖಂಡದಲ್ಲಿನ ಬಿಜೆಪಿ ಸರ್ಕಾರದ ಬಳಿಕ ಗುಜರಾತ್‌ನ ಬಿಜೆಪಿ ಸರ್ಕಾರ ಕೂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ಸರ್ಕಾರ ರಚಿಸಿದೆ.
ಗಾಂಧಿನಗರ: ಉತ್ತರಾಖಂಡದಲ್ಲಿನ ಬಿಜೆಪಿ ಸರ್ಕಾರದ ಬಳಿಕ ಗುಜರಾತ್‌ನ ಬಿಜೆಪಿ ಸರ್ಕಾರ ಕೂಡ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಂದಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ಸರ್ಕಾರ ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಐದು ಸದಸ್ಯರ ಸಮಿತಿ 45 ದಿನಗಳಲ್ಲಿ ಏಕರೂಪದ ನಾಗರಿಕ ಸಂಹಿತೆಗೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಆ ಬಳಿಕ ಸರ್ಕಾರ ಕಾನೂನು ಜಾರಿಗೆ ಸಂಬಂಧಿಸಿದ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತಿಳಿಸಿದ್ದಾರೆ.ಈ ಸಮಿತಿಯು ಮುಸ್ಲಿಂ ಧಾರ್ಮಿಕ ನಾಯಕರೂ ಸೇರಿ ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ವರದಿ ಸಿದ್ಧಪಡಿಸಲಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ನ್ಯಾ. ರಂಜನಾ ದೇಸಾಯಿ ಅವರೇ ಉತ್ತರಾಖಂಡದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತ ಸಮಿತಿಯ ಮುಖ್ಯಸ್ಥರಾಗಿದ್ದು ವರದಿ ಸಲ್ಲಿಸಿದ್ದರು. ಅದರ ಆಧಾರದಲ್ಲೇ ಸರ್ಕಾರ ಕಾನೂನು ರೂಪಿಸಿತ್ತು.
‘ದೇಶಾದ್ಯಂತ ಏಕರೂಪದ ನಾಗರಿಕ ಸಂಹಿತೆ ಜಾರಿ ಕುರಿತ ಮೋದಿ ಅವರ ಬಯಕೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ. ಈ ಐದು ಮಂದಿಯ ಸಮಿತಿಯು ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಪರಿಶೀಲಿಸಿ, ವಿವಿಧ ವರ್ಗದ ಜನರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಲಿದೆ. ಈ ವರದಿ ಪರಿಶೀಲಿಸಿದ ಬಳಿಕ ಕಾನೂನು ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಟೇಲ್ ಹೇಳಿದರು.ಏಕರೂಪ ನಾಗರಿಕ ಸಂಹಿತೆಯ ಎಲ್ಲಾ ಧರ್ಮಗಳಿಗೂ ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಮೊದಲಾದ ವಿಷಯಗಳಲ್ಲಿ ಒಂದೇ ಕಾನೂನನ್ನು ಖಚಿತಪಡಿಸಲಿದೆ. ಹಾಲಿ ಮೇಲ್ಕಂಡ ವಿಷಯಗಳಿಗೆ ಒಂದೊಂದು ಧರ್ಮದಲ್ಲಿ ಒಂದು ಕಾನೂನು ಇದೆ.