ಸಾಮಾನ್ಯ ತಪಾಸಣೆಗೆ ಆಸ್ಪತ್ರೆಗೆ : ಅನಾರೋಗ್ಯ ಬಗ್ಗೆ ಹೆಸರಾಂತ ಉದ್ಯಮಿ ರತನ್‌ ಟಾಟಾ ಸ್ಪಷ್ಟನೆ

| Published : Oct 08 2024, 01:07 AM IST / Updated: Oct 08 2024, 04:40 AM IST

ಸಾರಾಂಶ

ತಮ್ಮ ಆರೋಗ್ಯ ಕುರಿತ ವದಂತಿಗಳಿಗೆ ಹೆಸರಾಂತ ಉದ್ಯಮಿ ರತನ್‌ ಟಾಟಾ ಸೋಮವಾರ ತೆರೆ ಎಳೆದಿದ್ದು, ತಮ್ಮ ಆರೋಗ್ಯ ಸ್ಥಿರವಾಗಿದೆ, ಕಳವಳದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ತಮ್ಮ ಆರೋಗ್ಯ ಕುರಿತ ವದಂತಿಗಳಿಗೆ ಹೆಸರಾಂತ ಉದ್ಯಮಿ ರತನ್‌ ಟಾಟಾ ಸೋಮವಾರ ತೆರೆ ಎಳೆದಿದ್ದು, ತಮ್ಮ ಆರೋಗ್ಯ ಸ್ಥಿರವಾಗಿದೆ, ಕಳವಳದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಟಾಟಾ, ‘ವಯೋಸಹಜ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದೇನೆ. ನಾನು ಮುಂಬೈನ ಆಸ್ಪತ್ರೆಗೆ ಸೇರಿರುವ ವದಂತಿಗಳೆಲ್ಲ ಆಧಾರರಹಿತ. ನನ್ನಲ್ಲಿ ಇನ್ನೂ ಉತ್ಸಾಹ ಇದೆ’ ಎಂದು ಹೇಳಿರುವ ಅವರು, ತಪ್ಪು ಸಂದೇಶ ಹರಡುವಿಕೆಯಿಂದ ದೂರವಿರಿ ಎಂದು ಮನವಿ ಮಾಡಿದ್ದಾರೆ. ಅಸ್ವಸ್ಥತೆ ಹಿನ್ನೆಲೆ ಟಾಟಾ ಅವರನ್ನು ಸೋಮವಾರ ಬೆಳಿಗ್ಗೆ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿತ್ತು.

ಲಿಂಗಾ ಸೋಲಿಗೆ ನಟ ರಜನಿ ಹಸ್ತಕ್ಷೇಪ ಕಾರಣ: ನಿರ್ದೇಶಕ

ಚೆನ್ನೈ: 2014ರಲ್ಲಿ ತೆರೆಕಂಡ ‘ಲಿಂಗಾ’ ಸಿನಿಮಾದ ಸೋಲಿಗೆ ನಟ ರಜನೀಕಾಂತ್‌ ಕಾರಣ ಎಂದು ಚಿತ್ರದ ನಿರ್ದೇಶಕ ಕೆ.ಎಸ್‌. ರವಿಕುಮಾರ್‌ ಆರೋಪಿಸಿದ್ದಾರೆ. ‘ರಜನೀಕಾಂತ್‌ ಚಿತ್ರೀಕರಣ ಹಾಗೂ ಅದರ ನಂತರ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದು, ತಮ್ಮ ಇಚ್ಛೆಯಂತೆ ದೃಶ್ಯಗಳನ್ನು ಸೇರಿಸಿದ್ದರು ಹಾಗೂ ತೆಗೆದುಹಾಕಿದ್ದರು’ ಎಂದು ಸಂದರ್ಶನದ ವೇಳೆ ರವಿಕುಮಾರ್‌ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಎಡಿಟಿಂಗ್‌ನಲ್ಲೂ ಭಾಗವಹಿಸಿದ ರಜನೀ ಕಂಪ್ಯೂಟರ್ ಚಿತ್ರ ರಚಿಸಲೂ ಸಮಯ ಕೊಡಲಿಲ್ಲ. ಚಿತ್ರದ ಉತ್ತರಾರ್ಧ ಭಾಗವನ್ನು ಬದಲಿಸಿ ಕ್ಲೈಮ್ಯಾಕ್ಸ್‌ನಲ್ಲಿದ್ದ ಟ್ವಿಸ್ಟ್‌ ತೆಗೆದುಹಾಕಿದರು. ಅನುಷ್ಕಾ ಶೆಟ್ಟಿಯ ಹಾಡನ್ನು ತೆಗೆದು ತಾವು ಹಾಟ್‌ ಏರ್‌ ಬಲೂನ್ ಮೇಲೆ ಹಾರುವ ದೃಶ್ಯ ಸೇರಿಸಿದ್ದು ಚಿತ್ರದ ಸೋಲಿಗೆ ಕಾರಣವಾಯಿತು’ ಎಂದು ರವಿಕುಮಾರ್‌ ಹೇಳಿದ್ದಾರೆ.

ಈ ವರ್ಷ 10000 ಸಿಬ್ಬಂದಿ ನೇಮಕ: ಎಸ್‌ಬಿಐ ಅಧ್ಯಕ್ಷ

ನವದೆಹಲಿ: ಈ ವರ್ಷ 10000 ಸಿಬ್ಬಂದಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಾರ್ವಜನಿಕ ವಲಯದಲ್ಲಿ ದೇಶದ ಅಗ್ರಗಣ್ಯನಾಗಿರುವ ಎಸ್‌ಬಿಐ ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಯಾಂಕ್‌ನ ಅಧ್ಯಕ್ಷ ಚಲ್ಲಾ ಶ್ರೀನಿವಾಸುಲು ಶೆಟ್ಟಿ, ‘ಡಾಟಾ ಅನಾಲಿಸಿಸ್ಟ್‌, ಡಾಟಾ ಆರ್ಕಿಟೆಕ್ಟ್‌, ನೆಟ್‌ವರ್ಕ್‌ ಆಪರೇಟರ್‌ ಸೇರಿ ಇನ್ನಿತರ ವಿಭಾಗಗಳಲ್ಲಿ 8000- 10,000 ಹುದ್ದೆಗಳಿಗೆ ನೇಮಕಾತಿ ಶುರುಮಾಡಲಿದ್ದೇವೆ. ಜೊತೆಗೆ ಪ್ರಸಕ್ತ ಹಣಕಾಸಿನ ವರ್ಷದಲ್ಲಿ ದೇಶಾದ್ಯಂತ ಒಟ್ಟು 600 ಹೊಸ ಶಾಖೆಗಳನ್ನು ಶುರು ಮಾಡುವ ಗುರಿ ಹೊಂದಿದ್ದೇವೆ. ಇದರ ಭಾಗವಾಗಿ ಸಿಬ್ಬಂದಿಯನ್ನು ಹೆಚ್ಚಿಸಿಕೊಳ್ಳಲು ನೇಮಕಾತಿ ಮಾಡಲಿದ್ದೇವೆ’ ಎಂದು ಹೇಳಿದರು.

ಮಾಜಿ ಡಿಸಿಎಂ ತೇಜಸ್ವಿ ವಿರುದ್ಧ ನಲ್ಲಿ, ಸೋಫಾ, ಎಸಿ ಕದ್ದೊಯ್ದ ಆರೋಪ

ಪಟನಾ: ಆರ್‌ಜೆಡಿ ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಪಟನಾದಲ್ಲಿರುವ ಉಪಮುಖ್ಯಮಂತ್ರಿ ಅಧಿಕೃತ ನಿವಾಸವನ್ನು ಖಾಲಿ ಮಾಡುವ ಸಂದರ್ಭದಲ್ಲಿ ಸೋಫಾ, ಎಸ್‌ಸಿ ಕದ್ದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಹಾರದ ಹಾಲಿ ಮುಖ್ಯಮಂತ್ರಿ ಸಾಮ್ರಾಟ್‌ ಚೌಧರಿ ಆಪ್ತ ಕಾರ್ಯದರ್ಶಿ ಶತೃಧನ್‌ ಕುಮಾರ್‌ ಈ ಆರೋಪ ಮಾಡಿದ್ದು, ಭಾನುವಾರ ಉಪಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಖಾಲಿ ಮಾಡಿದ ತೇಜಸ್ವಿ ಯಾದವ್‌ ಸೋಫಾ, ಹೂಕುಂಡ, ಎಸ್‌ಸಿ ಸೇರಿದಂತೆ ಪ್ರಮುಖ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ. ಆದರ ಆರ್‌ಜೆಡಿ ಈ ಆರೋಪವನ್ನು ತಳ್ಳಿ ಹಾಕಿದ್ದು, ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದಿದೆ.

ಕೋಮುದ್ವೇಷಕ್ಕೆ ಕುಮ್ಮಕ್ಕು: ಬೆಂಗ್ಳೂರಿನ ಆಲ್ಟ್‌ ನ್ಯೂಸ್‌ ಜುಬೇರ್‌ ವಿರುದ್ಧ ಪ್ರಕರಣ

ಗಾಜಿಯಾಬಾದ್‌: ಯತಿ ನರಸಿಂಗಾನಂದ್‌ ಅವರ ಹಳೆ ವಿಡಿಯೋವೊಂದನ್ನು ಹಂಚಿಕೊಂಡು ಕೋಮುದ್ವೇಷಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬೆಂಗಳೂರಿನ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಯತಿ ನರಸಿಂಗಾನಂದ್‌ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಈ ಕೇಸ್‌ ದಾಖಲಿಸಿದ್ದು, ಅದರಲ್ಲಿ ಜುಬೇರ್‌ ಅ.3ರಂದು ನರಸಿಂಗಾನಂದ್‌ ಅವರ ಹಳೆ ವಿಡಿಯೋವೊಂದನ್ನು ಹಂಚಿಕೊಂಡು ಹಿಂದೂಗಳ ವಿರುದ್ಧ ಕೋಮುದ್ವೇಷ ಹರಡಲು ಮುಸ್ಲಿಮರಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಯತಿ ನರಸಿಂಗಾನಂದ್‌ ಅವರು ಇತ್ತೀಚಿನ ತಮ್ಮ ಸಮಾವೇಶದಲ್ಲಿ ಪ್ರವಾದಿ ಮೊಹಮ್ಮದ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕಣ್ಮರೆಯಾಗಿದ್ದಾರೆ.