ಸಾರಾಂಶ
ನಿರ್ಮಲಾ ಸೀತಾರಾಮನ್ ಅವರು ₹50.65 ಲಕ್ಷ ಕೋಟಿ ವೆಚ್ಚದ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಮಧ್ಯಮವರ್ಗದ ಬಜೆಟ್ ಎಂದು ಬಣ್ಣಿಸಲಾಗಿದೆ. ಈ ಬಜೆಟ್ ಪ್ರಮುಖಾಂಶಗಳು ಇಂತಿದೆ.
ನವದೆಹಲಿ : ನಿರ್ಮಲಾ ಸೀತಾರಾಮನ್ ಅವರು ₹50.65 ಲಕ್ಷ ಕೋಟಿ ವೆಚ್ಚದ ಕೇಂದ್ರ ಬಜೆಟ್ ಮಂಡನೆ ಮಾಡಿದ್ದು, ಮಧ್ಯಮವರ್ಗದ ಬಜೆಟ್ ಎಂದು ಬಣ್ಣಿಸಲಾಗಿದೆ. ಈ ಬಜೆಟ್ ಪ್ರಮುಖಾಂಶಗಳು ಇಂತಿದೆ.
₹50.65 ಲಕ್ಷ ಕೋಟಿ, 2025-26ನೇ ಸಾಲಿನ ಬಜೆಟ್ ಗಾತ್ರ
ಕಳೆದ ಜುಲೈನಲ್ಲಿ 47.16 ಲಕ್ಷ ಕೋಟಿ ರು. ಬಜೆಟ್ ಮಂಡನೆ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಆಯವ್ಯಯ ಗಾತ್ರ ಸುಮಾರು 3.5 ಲಕ್ಷ ಕೋಟಿ ರು. ಅಧಿಕ
ಮಿಡ್ಲ್‌ಕ್ಲಾಸ್‌ಗೆ ಫಸ್ಟ್‌ಕ್ಲಾಸ್ ಬಜೆಟ್
₹12 ಲಕ್ಷದವರೆಗಿನ ಆದಾಯಕ್ಕೆ ಇನ್ನು ತೆರಿಗೆಯೇ ಇಲ್ಲ!
- ₹12 ಲಕ್ಷ ದಾಟಿದರೆ ಪೂರ್ತಿ ತೆರಿಗೆ
- ತೆರಿಗೆ ಸ್ಲ್ಯಾಬ್‌ಗಳು ಬದಲಾವಣೆ
ಕೇಂದ್ರ ಬಜೆಟ್‌ನಲ್ಲಿ ಮಧ್ಯಮವರ್ಗಕ್ಕೆ ಬಂಪರ್ ಘೋಷಣೆ. ವಾರ್ಷಿಕ 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ. 12 ಲಕ್ಷ ರು. ಮೀರಿದರೆ ಪೂರ್ತಿ ಆದಾಯಕ್ಕೂ ವಿವಿಧ ಸ್ಲ್ಯಾಬ್‌ಗಳಡಿ ತೆರಿಗೆ. ತೆರಿಗೆ ಸ್ಲ್ಯಾಬ್ ಕೂಡ ಬದಲಾವಣೆ. ಹೊಸ ತೆರಿಗೆ ಪದ್ಧತಿ ಅಳವಡಿಸಿಕೊಂಡವರಿಗೆ ಮಾತ್ರ ಈ ಲಾಭ. 12 ಲಕ್ಷ ರು. ಆದಾಯ ಗಳಿಸುತ್ತಿದ್ದವರು ಈವರೆಗೆ 80 ಸಾವಿರ ರು. ತೆರಿಗೆ ಕಟ್ಟಬೇಕಿತ್ತು. ಅದರಿಂದ ಈಗ ಮುಕ್ತಿ. 75 ಸಾವಿರ ರು. ಸ್ಟಾಂಡರ್ಡ್ ಡಿಡಕ್ಷನ್ ಫಲವಾಗಿ ಉದ್ಯೋಗ ವರ್ಗಕ್ಕೆ 12.75 ಲಕ್ಷ ರು.ವರೆಗೂ ತೆರಿಗೆ ವಿನಾಯಿತಿ
ಠೇವಣಿಯಿಂದ ₹50 ಸಾವಿರ
ಬಡ್ಡಿ ಬಂದರೆ ಟಿಡಿಎಸ್ ಇಲ್ಲ
ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿ ಹಣಕ್ಕೆ ವಾರ್ಷಿಕ 40 ಸಾವಿರ ರು.ಗಿಂತ ಅಧಿಕ ಬಡ್ಡಿ ಬಂದರೆ ಟಿಡಿಎಸ್ ಕಡಿತವಾಗುತ್ತಿತ್ತು. ಆ ಮಿತಿ 50 ಸಾವಿರ ರು.ಗೇರಿಕೆ. ಹಿರಿಯ ನಾಗರಿಕರಾಗಿದ್ದರೆ ಇನ್ನು 50 ಸಾವಿರ ರು. ಬದಲು 1 ಲಕ್ಷ ರು.ವರೆಗಿನ ಬಡ್ಡಿ ಆದಾಯಕ್ಕೂ ಟಿಡಿಎಸ್ ಕಡಿತ ಇಲ್ಲ
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ
ಕ್ಯಾನ್ಸರ್ ಡೇ ಕೇರ್
ದೇಶದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಮುಂದಿನ 3 ವರ್ಷಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ. ಈ ವರ್ಷದಲ್ಲೇ 200 ಆಸ್ಪತ್ರೆಗಳಲ್ಲಿ ಡೇ ಕೇರ್ ಕೇಂದ್ರಗಳ ಸ್ಥಾಪನೆ
ರೈತರಿಗೆ ಇನ್ನು 5 ಲಕ್ಷರು. ರಿಯಾಯಿತಿ ಸಾಲ
ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಶೇ.4ರ ಬಡ್ಡಿ ದರದಲ್ಲಿ ಸಿಗುತ್ತಿದ್ದ 3 ಲಕ್ಷ ರು. ಸಾಲ ಇನ್ನು 5 ಲಕ್ಷ ರು.ಗೆ ಹೆಚ್ಚಳ. ಖಾಸಗಿ ವ್ಯಕ್ತಿಗಳ ಬಳಿ ಕೃಷಿ ಅಗತ್ಯಕ್ಕೆ ಸಾಲ ಮಾಡುವ ಅನಿವಾರ್ಯತೆಯಿಂದ ರೈತರು ಬಚಾವ್.
100 ಜಿಲ್ಲೆಗಳಲ್ಲಿ ಧನ-ಧಾನ್ಯ ಸ್ಕೀಂ
ದೇಶವ್ಯಾಪಿ 100 ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯಗಳ ಸಹಯೋಗದಲ್ಲಿ ‘ಪ್ರಧಾನಿಗಳ ಧನ- ಧಾನ್ಯ ಕೃಷಿ ಯೋಜನೆ’ ಜಾರಿ. ಕೃಷಿ ಉತ್ಪಾದಕತೆ ಹೆಚ್ಚಳ, ನೀರಾವರಿ ಸೌಕರ್ಯ.
ಹಳ್ಳಿಗಳಲ್ಲೇ ಜನರಿಗೆ ಉದ್ಯೋಗ ಯೋಜನೆ
ಗ್ರಾಮೀಣ ಜನರಿಗೆ ಹಳ್ಳಿಗಳಲ್ಲೇ ಉದ್ಯೋಗ ಒದಗಿಸಲು ಸರ್ಕಾರದಿಂದ ಯೋಜನೆ. ಗ್ರಾಮಗಳ ಮಟ್ಟದಲ್ಲೇ ವಿಪುಲ ಉದ್ಯೋಗ ಅವಕಾಶ ಕಲ್ಪಿಸುವುದು, ವಲಸೆ ಎನ್ನುವುದು ಆಯ್ಕೆಯೇ ಹೊರತು ಅನಿವಾರ್ಯವಲ್ಲ ಎಂದು ಸಾರುವುದು ಉದ್ದೇಶ.
ಮಹಿಳೆಯರು, ದಲಿತರ ಉದ್ದಿಮೆ ಆಸೆಗೆ ಸಾಲ
ಇದೇ ಮೊದಲ ಬಾರಿಗೆ ಉದ್ಯಮ ಆರಂಭಿಸಲು ಬಯಸುವ 5 ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗಾಗಿ ಸಾಲ ಯೋಜನೆ. 5 ವರ್ಷಗಳಲ್ಲಿ 2 ಕೋಟಿ ರು. ಸಾಲ ನೀಡುವ ಗುರಿ.
ವಿಶ್ವದ ಆಟಿಕೆ ಹಬ್ ಆಗಲಿದೆ ಭಾರತ
ಭಾರತವನ್ನು ಆಟಿಕೆ ಉತ್ಪಾದನೆಯಲ್ಲಿ ಜಾಗತಿಕ ಹಬ್ ಮಾಡುವ ಉದ್ದೇಶ. ಅದಕ್ಕಾಗಿ ಆಟಿಕೆ ಕ್ಲಸ್ಟರ್, ಕೌಶಲ್ಯ ಅಭಿವೃದ್ಧಿಗೆ ಹೊಸ ಯೋಜನೆ. ಮೇಡ್ ಇನ್ ಇಂಡಿಯಾ ಬ್ರ್ಯಾಂಡ್‌ನಡಿ ಉತ್ಕೃಷ್ಟ ಆಟಿಕೆ ತಯಾರಿ ಕನಸು.
ದ್ವಿದಳ ಧಾನ್ಯದಲ್ಲಿ ಆತ್ಮನಿರ್ಭರತೆ
ದ್ವಿದಳ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸಲು ‘ದ್ವಿದಳ ಧಾನ್ಯ ಆತ್ಮನಿರ್ಭರತೆ ಯೋಜನೆ’ ಜಾರಿ. ತೊಗರಿ, ಉದ್ದಿನ ಬೇಳೆ, ಮಸೂರ್ ದಾಲ್‌ಗಳಿಗೆ ವಿಶೇಷ ಆದ್ಯತೆ
ಮಕ್ಕಳಲ್ಲಿ ವಿಜ್ಞಾನಾಸಕ್ತಿ ಹೆಚ್ಚಿಸಲು ಅಟಲ್ ಲ್ಯಾಬ್
ಸರ್ಕಾರಿ ಶಾಲಾ ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳೆಸುವ ಉದ್ದೇಶದಿಂದ ದೇಶಾದ್ಯಂತ 50 ಸಾವಿರ ಅಟಲ್ ಟಿಂಕರಿಂಗ್ ಲ್ಯಾಬ್. ಮುಂದಿನ 5 ವರ್ಷದಲ್ಲಿ ಸ್ಥಾಪನೆ. ಮಕ್ಕಳಲ್ಲಿರುವ ಕುತೂಹಲ, ಆವಿಷ್ಕಾರ ಮನಸ್ಥಿತಿ ಪ್ರೋತ್ಸಾಹಿಸುವ ಉದ್ದೇಶ.
ಪಾದರಕ್ಷೆ ಉದ್ಯಮಕ್ಕೂ ಬಜೆಟ್‌ನಲ್ಲಿ ಶುಕ್ರದೆಸೆ
ಭಾರತದ ಪಾದರಕ್ಷೆ ಹಾಗೂ ಚರ್ಮೋದ್ಯಮದಲ್ಲಿ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಆದ್ಯತಾ ಉತ್ಪನ್ನ ಯೋಜನೆ ಜಾರಿ. 22 ಲಕ್ಷ ಜನರಿಗೆ ಉದ್ಯೋಗ ಅವಕಾಶ
ಶಾಲಾ- ಕಾಲೇಜಿಗೆ ಡಿಜಿಟಲ್ ಪುಸ್ತಕ
ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪುಸ್ತಕ ನೀಡಲು ‘ಭಾಷಾ ಪುಸ್ತಕ್’ ಯೋಜನೆ. ಶಾಲಾ-ಕಾಲೇಜುಗಳಲ್ಲಿ ಜಾರಿ. ಪ್ರಾದೇಶಿಕ ಭಾಷೆಗಳಲ್ಲೇ ಸಿಗಲಿದೆ ಸ್ಟಡಿ ಮೆಟಿರೀಯಲ್. ಸುಲಭವಾಗಿ ವಿಷಯ ಗ್ರಹಿಸಲು ವಿದ್ಯಾರ್ಥಿಗಳಿಗೆ ಅನುಕೂಲ.
10 ಸಾವಿರ ವೈದ್ಯ ಸೀಟುಗಳು ಸೇರ್ಪಡೆ
ದೇಶದ ವೈದ್ಯ ಕಾಲೇಜು, ಆಸ್ಪತ್ರೆಗಳಿಗೆ ಮುಂದಿನ ವರ್ಷ 10 ಸಾವಿರ ವೈದ್ಯ ಸೀಟು ಸೇರ್ಪಡೆ. ಮುಂಬರುವ ಐದು ವರ್ಷಗಳಲ್ಲಿ 75 ಸಾವಿರ ಸೀಟುಗಳನ್ನು ಸೃಷ್ಟಿಸಲು ಗುರಿ.
ಡೆಲಿವರಿ ಬಾಯ್‌ಗಳಿಗೆ ಐಡಿ, ಆರೋಗ್ಯ ವಿಮೆ
ಇ-ಶ್ರಮ್ ಪೋರ್ಟಲ್‌ನಲ್ಲಿ ಗಿಗ್ ವರ್ಕರ್ (ಡೆಲಿವರಿ ಬಾಯ್)ಗಳ ನೋಂದಣಿ. ಗುರುತಿನ ಚೀಟಿ ವಿತರಣೆ. ಪಿಎಂ ಜನ ಆರೋಗ್ಯ ಯೋಜನೆಯಡಿ ಅವರಿಗೆ ಆರೋಗ್ಯ ಸೌಲಭ್ಯ. 1 ಕೋಟಿ ಮಂದಿಗೆ ಅನುಕೂಲ
ಶಾಲೆಗಳು, ಆರೋಗ್ಯ ಕೇಂದ್ರಕ್ಕೆ ಇಂಟರ್ನೆಟ್
ಭಾರತ್ ನೆಟ್ ಯೋಜನೆಯಡಿ ಗ್ರಾಮೀಣ ಭಾಗದ ಸರ್ಕಾರಿ ಮಾಧ್ಯಮಿಕ ಶಾಲೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ.
ಮೂಲಸೌಕರ್ಯ ವೃದ್ಧಿಗೆ ರಾಜ್ಯಗಳಿಗೆ ₹1.5 ಲಕ್ಷ
ಕೋಟಿ ಬಡ್ಡಿರಹಿತ ಸಾಲ
ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳಿಗೆ 1.5 ಲಕ್ಷ ಕೋಟಿ ರು. ಬಡ್ಡಿ ರಹಿತ ಸಾಲ. ಕುಡಿಯುವ ನೀರು, ಒಳಚರಂಡಿ, ರಸ್ತೆ ಮತ್ತಿತರೆ ಸೌಕರ್ಯಗಳಿಗಾಗಿ ಪಡೆಯಬಹುದು.
ಆಸ್ತಿ ನಗದೀಕರಣ ಭಾಗ-2 ಶೀಘ್ರ ಶುರು
ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಿ ಸಂಪನ್ಮೂಲ ಕ್ರೋಢೀಕರಿಸುವ ಯೋಜನೆಯ ಭಾಗ-2 ಜಾರಿ. 2025ರಿಂದ 30ರ ಅವಧಿಯಲ್ಲಿ 10 ಲಕ್ಷ ಕೋಟಿ ರು. ಗಳಿಸುವ ಉದ್ದೇಶ.
1 ಲಕ್ಷ ಕೋಟಿ ರು. ಅರ್ಬನ್ ಚಾಲೆಂಜ್ ಫಂಡ್ ಸ್ಥಾಪನೆ
ನಗರಗಳನ್ನು ಅಭಿವೃದ್ಧಿಯ ಹಬ್ ಮಾಡುವ ಪ್ರಸ್ತಾವ ಜಾರಿಗೆ ಹೊಸ ನಿಧಿ. ‘ಅರ್ಬನ್ ಚಾಲೆಂಜ್’ ಹೆಸರಲ್ಲಿ ಸ್ಥಾಪನೆ. 1 ಲಕ್ಷ ಕೋಟಿ ರು. ಮೂಲಧನ. ಸೃಜನಾತ್ಮಕವಾಗಿ ನಗರಗಳ ಅಭಿವೃದ್ಧಿ.
ಬಿಹಾರಕ್ಕೆ 2ನೇ ವರ್ಷವೂ ಬಂಪರ್
ಅಕ್ಟೋಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಹಲವು ಘೋಷಣೆ. ಗ್ರೀನ್‌ಫೀಲ್ಡ್, ಬ್ರೌನ್‌ಫೀಲ್ಡ್ ಏರ್‌ಪೋರ್ಟ್. ಬಿಹಾರದ ಜನಪ್ರಿಯ ಮಖಾನಾ ಮಾರುಕಟ್ಟೆಗೆ ಮಂಡಳಿ. ರಾಷ್ಟ್ರೀಯ ಆಹಾರ ತಂತ್ರಜ್ಞಾನ ಕೇಂದ್ರ ಸೇರಿ ಹಲವು ಪ್ರಕಟಣೆ.
ದೇಶದ 120 ಸ್ಥಳಗಳಿಗೆ ಉಡಾನ್ ವಿಮಾನಗಳು
ಶ್ರೀಸಾಮಾನ್ಯನ ವಿಮಾನಯಾನ ಕನಸು ನನಸಾಗಿಸುವ ಉಡಾನ್ ಯೋಜನೆಯಡಿ 120 ಹೊಸ ಸ್ಥಳಗಳಿಗೆ ವಿಮಾನ ಸಂಪರ್ಕ. ಈಗ ಇರುವ ಪ್ರಯಾಣಿಕರ ಸಂಖ್ಯೆಯನ್ನು 10 ವರ್ಷದಲ್ಲಿ 4 ಕೋಟಿಗೇರಿಸುವ ಗುರಿ.
ಅತಿಸಣ್ಣ ಉದ್ದಿಮೆಗೆ ಸಾಲ ಮೊತ್ತ ಡಬಲ್
ಅತಿ ಸಣ್ಣ ಹಾಗೂ ಸಣ್ಣ ಉದ್ದಿಮೆಗಳಿಗೆ ಸಿಗುವ ಸಾಲ 5ರಿಂದ 10 ಕೋಟಿ ರು.ಗೆ ಹೆಚ್ಚಳ. ಸ್ಟಾರ್ಟಪ್‌ಗಳಿಗೆ ಸಿಗುವ ಸಾಲ 10ರಿಂದ 20 ಕೋಟಿ ರು.ಗೆ ಏರಿಕೆ. ಅತ್ಯುತ್ತಮ ರಫ್ತಿನ ಎಂಎಸ್‌ಎಂಇಗಳಿಗೆ 20 ಕೋಟಿ ರು. ಸಾಲ
ಸಣ್ಣ ಉದ್ದಿಮೆಗಳಿಗೆ ₹5
ಲಕ್ಷ ರು. ಕ್ರೆಡಿಟ್‌ಕಾರ್ಡ್
ಉದ್ಯಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ ಅತಿ ಸಣ್ಣ ಉದ್ದಿಮೆಗಳಿಗೆ 5 ಲಕ್ಷ ರು. ಮಿತಿಯ ಕ್ರೆಡಿಟ್ ಕಾರ್ಡ್. ಮೊದಲ ವರ್ಷದಲ್ಲಿ 10 ಲಕ್ಷ ಕಾರ್ಡ್‌ಗಳ ವಿತರಣೆ ಗುರಿ.
ಸ್ಟಾರ್ಟ್‌ಅಪ್‌ಗಳಿಗೆ
10 ಸಾವಿರ ಕೋಟಿ
ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ ನೀಡಲು ಮತ್ತೊಂದು ಫಂಡ್ ಆಫ್ ಫಂಡ್ಸ್ ಸ್ಥಾಪನೆ. ಸರ್ಕಾರದಿಂದ 10 ಸಾವಿರ ಕೋಟಿ ರು. ಮೂಲ ನಿಧಿ ಹಂಚಿಕೆ
ಹೋಂ ಸ್ಟೇಗಳಿಗೆ ಮುದ್ರಾದಡಿ ಸಾಲ
ಪ್ರವಾಸೋದ್ಯಮಕ್ಕೆ ಒತ್ತು. ರಾಜ್ಯಗಳ ಸಹಯೋಗದಲ್ಲಿ 50 ಪ್ರವಾಸಿ ತಾಣ ಅಭಿವೃದ್ಧಿ. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲು ಆದ್ಯತೆ. ಹೋಂ ಸ್ಟೇಗಳಿಗೆ ಮುದ್ರಾ ಯೋಜನೆಯಡಿ ಸಾಲ.
6 ಲಕ್ಷ ರು.ವರೆಗಿನ ವಾಣಿಜ್ಯ ಕಟ್ಟಡಗಳ ಬಾಡಿಗೆಗೆ ಟಿಡಿಎಸ್ ಇಲ್ಲ
ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ನೀಡಿದ್ದರೆ, ಮಾಸಿಕ 20 ಸಾವಿರ ರು.ಗಿಂತ ಅಧಿಕ ಬಾಡಿಗೆ ಬಂದರೆ ಶೇ.10ರಷ್ಟು ಟಿಡಿಎಸ್ ಕಡಿತವಾಗುತ್ತಿತ್ತು. ಆ ಮಿತಿಯನ್ನು ಈಗ ಮಾಸಿಕ 50000 ರು.ಗೆ ಏರಿಕೆ ಮಾಡಲಾಗಿದೆ. ಅಂದರೆ ವಾರ್ಷಿಕ 6 ಲಕ್ಷ ರು.ವರೆಗೆ ಆದಾಯ ಬಂದರೆ ಟಿಡಿಎಸ್ ಕಡಿತವಾಗದು.
ರಾಜ್ಯದಲ್ಲಿನ ರೈಲ್ವೆ ಯೋಜನೆಗಳಿಗೆ ₹7564 ಕೋಟಿ
ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ 7564 ಕೋಟಿ ರು. ಅನುದಾನ ನೀಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೇಲ್ವೆ ಕಾಮಗಾರಿಗೆ 350 ಕೋಟಿ ರು. ಅನುದಾನ ಒದಗಿಸಲಾಗಿದೆ. ಕಳೆದ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್‌ನಲ್ಲಿ 7559 ಕೋಟಿ ರು. ಅನುದಾನ ಸಿಕ್ಕಿತ್ತು. ಸಬರ್ಬನ್ ರೈಲ್ವೆ ಯೋಜನೆಗೆ 350 ಕೋಟಿ ರು. ನೀಡಲಾಗಿತ್ತು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬಜೆಟ್ ಎಕ್ಸ್‌ಪರ್ಟ್ - ಜನರ ಜೇಬಿಗೆ ಹಣ ಇಡುವ ಬಜೆಟ್
ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ಈಡೇರಿಸುವಂತಹ ಜನರ ಬಜೆಟ್ ಇದು. ಆಯವ್ಯಯಗಳು ಸಾಮಾನ್ಯವಾಗಿ ಸರ್ಕಾರದ ಬೊಕ್ಕಸ ತುಂಬಲು ನೋಡುತ್ತವೆ. ಆದರೆ ಈ ಬಾರಿಯ ಬಜೆಟ್ ಜನರ ಜೇಬಿನಲ್ಲಿ ಹೆಚ್ಚು ಹಣ ಇಡುವ ಹಾಗೂ ಅವರ ಉಳಿತಾಯ ಹೆಚ್ಚಿಸುವ ಉದ್ದೇಶ ಹೊಂದಿದೆ. ಭಾರತದ ಅಭಿವೃದ್ಧಿ ಯಾನದಲ್ಲಿ ಜನರನ್ನು ಪಾಲುದಾರರನ್ನಾಗಿಸುವ ಗುರಿ ಹೊಂದಿದೆ. ಇದು ಅಭಿವೃದ್ಧಿಯ ಹಾದಿಯಲ್ಲಿ ಐತಿಹಾಸಿಕ ಹಾಗೂ ಮಹತ್ತರ ಮೈಲುಗಲ್ಲು.
- ನರೇಂದ್ರ ಮೋದಿ, ಪ್ರಧಾನಿ