ಅಪ್ರಾಪ್ತೆ ದಾಖಲಿಸಿದ್ದ ಪೋಕ್ಸೋ ಪ್ರಕರಣ ಸಂಬಂಧ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್‌ ಅವರ ಪುತ್ರ ಭಗೀರಥನನ್ನು (25) ತೆಲಂಗಾಣ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

- ಕೇಂದ್ರ ಸಚಿವ ಬಂಡಿ ಪುತ್ರ ಶರಣು, ಬಂಧನ

- ಕಾನೂನಿನ ಮುಂದೆ ಎಲ್ರೂ ಒಂದೇ: ಬಂಡಿ

--

ಏನಿದು ಪ್ರಕರಣ?

- ಸಚಿವ ಬಂಡಿ ಸಂಜಯ್‌ ಪುತ್ರನ ಮೇಲೆ ಅಪ್ರಾಪ್ತೆಯಿಂದ ಲೈಂಗಿಕ ಕಿರುಕುಳ ಆರೋಪ

- ಈ ಸಂಬಂಧ ಪೋಕ್ಸೋ ಕೇಸು ದಾಖಲು. ಆದರೆ ಆರೋಪ ಸುಳ್ಳು ಎಂದಿದ್ದ ಸಚಿವರ ಮಗ

- ಸಚಿವರ ಮಗ ದಶರಥ್‌ ಜಾಮೀನು ಅರ್ಜಿ ವಜಾ. ಹೀಗಾಗಿ ಅನಿವಾರ್ಯವಾಗಿದ್ದ ಬಂಧನ

- ಕೇಸಿನಿಂದ ಸಚಿವರಿಗೆ ಮುಜುಗರ. ಪುತ್ರನ ಮೇಲೆ ಕ್ರಮಕ್ಕೆ ಹೆಚ್ಚಿದ್ದ ರಾಜಕೀಯ ಒತ್ತಡ

- ಕೊನೆಗೆ ಮಗನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಬಂಡಿ. ನ್ಯಾಯಪಾಲನೆಯ ಭರವಸೆ

ಹೈದರಾಬಾದ್‌: ಅಪ್ರಾಪ್ತೆ ದಾಖಲಿಸಿದ್ದ ಪೋಕ್ಸೋ ಪ್ರಕರಣ ಸಂಬಂಧ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್‌ ಅವರ ಪುತ್ರ ಭಗೀರಥನನ್ನು (25) ತೆಲಂಗಾಣ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಅಚ್ಚರಿ ವಿಷಯವೆಂದರೆ ಸ್ವತಃ ಕೇಂದ್ರ ಸಚಿವ ಸಂಜಯ್‌ ಕುಮಾರ್‌ ಅವರೇ ತಮ್ಮ ಪುತ್ರನಿಗೆ ಪೊಲೀಸರ ಮುಂದೆ ಶರಣಾಗುವಂತೆ ಸೂಚಿಸಿದ್ದು ಅದರಂತೆ ಅವರ ಪುತ್ರ ಶರಣಾಗಿದ್ದಾನೆ. ಇದೇ ವೇಳೆ, ‘ಪ್ರಕರಣದಲ್ಲಿ ನನ್ನ ಮಗ ನಿರ್ದೋಷಿ, ಆದರೆ ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ವಿಚಾರಣೆ ಎದುರಿಸುವ ಸಲುವಾಗಿ ಆತನಿಗೆ ಶರಣಾಗುವಂತೆ ಸೂಚಿಸಿದ್ದೆ’ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರೂ ಆಗಿರುವ ಬಂಡಿ ಹೇಳಿದ್ದಾರೆ.

ಏನಿದು ಪ್ರಕರಣ?:

ಭಗೀರಥ್‌ ನನ್ನ ಜೊತೆ ಸ್ನೇಹ ಬೆಳೆಸಿ ಬಳಿಕ ಅದೇ ಸಲುಗೆಯಿಂದ ಲೈಂಗಿಕವಾಗಿ ಹಲ್ಲೆ ನಡೆಸಿದ್ದ ಮತ್ತು ದೌರ್ಜನ್ಯ ಎಸಗಿದ್ದ ಎಂದು 17 ವರ್ಷದ ಅಪ್ರಾಪ್ತೆಯೊಬ್ಬಳು ಇತ್ತೀಚೆಗೆ ದೂರು ದಾಖಲಿಸಿದ್ದಳು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಈ ನಡುವೆ ಬಂಧನ ಭೀತಿ ಎದುರಿಸುತ್ತಿದ್ದ ಭಗೀರಥ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಶನಿವಾರ ತೆಲಂಗಾಣ ಹೈಕೋರ್ಟ್‌ ವಜಾ ಮಾಡಿತ್ತು. ಹೀಗಾಗಿ ನಾಪತ್ತೆಯಾಗಿದ್ದ ಆರೋಪಿ ವಿರುದ್ಧ ಪೊಲೀಸರು ಲುಕೌಟ್‌ ನೋಟಿಸ್‌ ಜಾರಿ ಮಾಡಿದ್ದರು. ಇದು ಕೇಂದ್ರ ಸಚಿವರಿಗೆ ಭಾರೀ ಮುಜುಗರ ಉಂಟು ಮಾಡಿತ್ತು. ಅದರ ಬೆನ್ನಲ್ಲೇ ರಾತ್ರಿ ವೇಳೆಗೆ ಭಗೀರಥ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಸಚಿವ ಬಂಡಿ ಸಂಜಯ್‌ ಕುಮಾರ್‌, ‘ಕಾನೂನು ಮತ್ತು ನ್ಯಾಯಾಂಗದ ಮೇಲಿನ ಅತ್ಯುನ್ನತ ಗೌರವದಿಂದ ನನ್ನ ಪುತ್ರ ಬಂಡಿ ಭಗೀರಥ ಇಂದು ವಕೀಲರ ಸಮ್ಮುಖದಲ್ಲಿ ಪೊಲೀಸರ ಮುಂದೆ ವಿಚಾರಣೆಗಾಗಿ ಹಾಜರಾಗಿದ್ದಾರೆ. ಈ ಹಿಂದೆಯೂ ನಾನು ಹೇಳಿದ್ದೆ; ಅದು ನನ್ನ ಮಗನೇ ಆಗಿರಲಿ ಅಥವಾ ಜನಸಾಮಾನ್ಯರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು. ನನ್ನ ಪುತ್ರ ಕೂಡಾ ನಾನು ಏನೂ ತಪ್ಪು ಮಾಡಿಲ್ಲ ಎಂದು ಸತತವಾಗಿ ಹೇಳುತ್ತಲೇ ಬಂದಿದ್ದಾನೆ. ಆದರೂ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮತ್ತು ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಅವರೊಂದಿಗೆ ಹಂಚಿಕೊಂಡ ಬಳಿಕ ಪ್ರಕರಣವನ್ನು ಕಾನೂನು ಮಾರ್ಗದಲ್ಲೇ ಸೂಕ್ತವಾಗಿ ಬಗೆಹರಿಸುವ ಸಲಹೆಯನ್ನು ನಮಗೆ ನೀಡಿದ್ದರು’ ಎಂದು ಹೇಳಿದ್ದಾರೆ.