ಸಾರಾಂಶ
ಲಖನೌ: ಬಲವಂತ ಮತ್ತು ಅಕ್ರಮ ಮಾರ್ಗದ ಮೂಲಕ ಮತಾಂತರ ಮಾಡಿದ ಪ್ರಕರಣದಲ್ಲಿ ದೋಷಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶ ನೀಡುವ ತಿದ್ದುಪಡಿ ಮಸೂದೆಯನ್ನು ಉತ್ತರಪ್ರದೇಶದ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.ಈ ಹಿಂದಿನ ಕಾಯ್ದೆ ಅನ್ವಯ ಅಕ್ರಮ ಮತ್ತು ಬಲವಂತದ ಮತಾಂತರಕ್ಕೆ ಗರಿಷ್ಠ 10 ವರ್ಷ ಜೈಲು ಮತ್ತು 50 ಸಾವಿರ ರು. ದಂಡ ವಿಧಿಸಬಹುದಾಗಿತ್ತು.ಆದರೆ ಮಂಗಳವಾರ ಅಂಗೀಕರಿಸಲಾದ ‘ಉತ್ತರಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ ನಿಷೇಧ (ತಿದ್ದುಪಡಿ) ಮಸೂದೆ 2024’ರ ಅನ್ವಯ, ‘ಧಾರ್ಮಿಕವಾಗಿ ಮತಾಂತರದ ಉದ್ದೇಶದಿಂದ ಯಾವುದೇ ವ್ಯಕ್ತಿ ಬೆದರಿಕೆ ಹಾಕಿದರೆ, ದಾಳಿ ನಡೆಸಿದರೆ, ವಿವಾಹವಾದರೆ ಅಥವಾ ಮದುವೆಯಾಗುವ ಭರವಸೆ ನೀಡಿದರೆ ಅಥವಾ ಅದಕ್ಕೆ ಸಂಚು ರೂಪಿಸಿದರೆ ಅಂಥ ಪ್ರಕರಣಗಳನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಲಾಗುತ್ತದೆ. ಇಂಥ ಪ್ರಕರಣದ ದೋಷಿಗಳಿಗೆ 20 ವರ್ಷ ಜೈಲು ಅಥವಾ ಜೀವಾವಧಿ ಶಿಕ್ಷೆ ನೀಡಬಹುದಾಗಿದೆ.ಜೊತೆಗೆ, ಮತಾಂತರ ಪ್ರಕರಣದ ಬಗ್ಗೆ ಇದೀಗ ಯಾರು ಬೇಕಾದರೂ ದೂರು ನೀಡಬಹುದಾಗಿರುತ್ತದೆ. ಈ ಹಿಂದೆ ಸಂತ್ರಸ್ತೆ ಅಥವಾ ಅವರ ಪೋಷಕರ ಸಮ್ಮುಖದಲ್ಲಿ ಮಾತ್ರವೇ ಯಾವುದೇ ವ್ಯಕ್ತಿ ದೂರು ನೀಡಬಹುದಾಗಿತ್ತು. ಅಲ್ಲದೆ ಹೊಸ ಕಾಯ್ದೆ ಅನ್ವಯ ಇಂಥ ಪ್ರಕರಣಗಳನ್ನು ಸೆಷನ್ಸ್ ಕೋರ್ಟ್‌ಗಿಂತ ಕೆಳ ಹಂತದ ಯಾವುದೇ ಕೋರ್ಟ್‌ಗಳು ವಿಚಾರಣೆ ನಡೆಸುವಂತಿಲ್ಲ. ಜೊತೆಗೆ ಪಬ್ಲಿಕ್ ಪ್ಯಾಸಿಕೂಟರ್ ವಾದವನ್ನು ಆಲಿಸದೇ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸುವಂತಿಲ್ಲ. ಜೊತೆಗೆ ಇಂಥ ಎಲ್ಲಾ ಪ್ರಕರಣಗಳನ್ನು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು.