ಸಾರಾಂಶ
ಮುದ್ದಿನ ಬೆಕ್ಕು ಸತ್ತಿದ್ದಕ್ಕಾಗಿ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರದಲ್ಲಿ ನಡೆದಿದೆ.
ಅಮ್ರೋಹಾ: ಮುದ್ದಿನ ಬೆಕ್ಕು ಸತ್ತಿದ್ದಕ್ಕಾಗಿ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರದಲ್ಲಿ ನಡೆದಿದೆ.
ಪೂಜಾ (32) ಮೃತ ಮಹಿಳೆ. 8 ವರ್ಷಗಳ ಹಿಂದೆ ಪೂಜಾಗೆ ದೆಹಲಿ ಮೂಲದ ವ್ಯಕ್ತಿಯೊಡನೆ ವಿವಾಹವಾಗಿತ್ತು. ಆದರೆ ಎರಡೇ ವರ್ಷದಲ್ಲಿ ದಾಂಪತ್ಯ ಮುರಿದುಬಿದ್ದು, ತವರು ಮನೆ ಸೇರಿದ್ದರು. ವಿಚ್ಛೇದನದ ನೋವಿನಿಂದ ಹೊರಬರಲು ಬೆಕ್ಕೊಂದನ್ನು ಸಾಕಿದ್ದರು. ಆದರೆ ಗುರುವಾರ ಆ ಬೆಕ್ಕು ಮೃತಪಟ್ಟಿತ್ತು. ಅದರಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಆಕೆ 2 ದಿನಗಳಿಂದ ಬೆಕ್ಕನ್ನು ಹೂಳಲು ಸಹ ಬಿಟ್ಟಿರಲಿಲ್ಲ. ಅದೇ ನೋವಿನಲ್ಲಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.
ಯುವ, ವಯಸ್ಕರ ವಿದೇಶ ಪ್ರವಾಸಕ್ಕೆ ಪಾಕಿಸ್ತಾನ ಸರ್ಕಾರ ದಿಢೀರ್ ಬ್ರೇಕ್
ಲಾಹೋರ್: ಅಕ್ರಮ ವಲಸೆ ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರವು 35 ವಯೋಮಿತಿ ಒಳಗಿನವರ ಮೊದಲ ಬಾರಿಯ ವಿಮಾನ ಪ್ರಯಾಣ ನಿಷೇಧಿಸಿ ಆದೇಶ ಹೊರಡಿಸಿದೆ. ಪ್ರಯಾಣಿಕರು ಪ್ರಯಾಣದ ನಿಖರ ಉದ್ದೇಶ, ದೃಢೀಕೃತ ಹೋಟೆಲ್ ಬುಕಿಂಗ್ ಮತ್ತು ಸಾಕಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರಬೇಕು.
ಉಮ್ರಾ ಯಾತ್ರೆಗೆ ಹೋಗುವವರು ಸಾಕಷ್ಟು ಧಾರ್ಮಿಕ ತಿಳುವಳಿಕೆಯನ್ನು ಹೊಂದಿರಬೇಕು. ಅಂಥವರಿಗೆ ಮಾತ್ರವೇ ವಿದೇಶಗಳಿಗೆ ತೆರಳಲು ಅವಕಾಶ ನೀಡಲಾಗುವುದು ಎಂದು ಪಾಕ್ ಸರ್ಕಾರ ಲಾಹೋರ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಉಮ್ರಾ ಯಾತ್ರೆ ಹೆಸರಲ್ಲಿ ವೀಸಾ ಪಡೆದು ಸೌದಿ ಅರೇಬಿಯಾ, ಇರಾನ್, ಇರಾಕ್, ಟರ್ಕಿ, ರಷ್ಯಾ, ಲಿಬಿಯಾ ಮೊದಲಾದ ದೇಶಗಳಿಗೆ ಜನ ಅಕ್ರಮವಾಗಿ ಪ್ರವೇಶಿಸುತ್ತಿದ್ದರು. 2023ರಲ್ಲಿ ಅಕ್ರಮವಾಗಿ ಸಮುದ್ರ ದಾಟುವ ವೇಳೆ ಲಿಬಿಯಾ ಬಳಿ ದೋಣಿ ಮುಳುಗಿ ಸುಮಾರು 61 ಜನ ಪ್ರಾಣಬಿಟ್ಟಿದ್ದರು. ಇದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.