ಸಾರಾಂಶ
ನ್ಯೂಯಾರ್ಕ್: ‘ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ’ ಎಂದು ಭಾರತ ಸರ್ಕಾರದ ಮಾಜಿ ಗುಪ್ತಚರ ಅಧಿಕಾರಿ ವಿಕಾಶ್ ಯಾದವ್ ವಿರುದ್ಧ ಅಮೆರಿಕ ಸರ್ಕಾರ ದೋಷಾರೋಪ ಹೊರಿಸಿದೆ. ಜೊತೆಗೆ ಸದ್ಯ ಆತ ರಾ ಅಧಿಕಾರಿ ಅಲ್ಲ ಎಂದೂ ಸ್ಪಷ್ಟಪಡಿಸಿದೆ. ಇದರ ನಡುವೆ, ಪರಾರಿ ಆಗಿರುವ ಈತನನ್ನು ಬೈಡೆನ್ ಸರ್ಕಾರ ‘ವಾಂಟೆಡ್ ಲಿಸ್ಟ್’ಗೆ ಸೇರಿಸಿದೆ.
‘ಕೆನಡಾ ಹಾಗೂ ಅಮೆರಿಕದ ಜಂಟಿ ಪ್ರಜೆ ಆಗಿರುವ ಪನ್ನು ಹತ್ಯೆಗೆ ಕಳೆದ ವರ್ಷ ಅಮೆರಿಕದಲ್ಲಿ ಈ ಸಂಚು ನಡೆದಿತ್ತು ಹಾಗೂ ಅದು ವಿಫಲವಾಗಿತ್ತು. ಇದರಲ್ಲಿ ಭಾರತದ ಗುಪ್ತಚರ (ರಾ)ದ ಮಾಜಿ ಅಧಿಕಾರಿ ಆಗಿದ್ದ ವಿಕಾಶ್ ಯಾದವ್ ಹಾಗೂ ನಿಖಿಲ್ ಗುಪ್ತಾ ಭಾಗಿ ಆಗಿದ್ದಾರೆ’ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸಹ-ಸಂಚುಕೋರ ನಿಖಿಲ್ ಗುಪ್ತಾನನ್ನು ಚೆಕ್ ಗಣರಾಜ್ಯದಿಂದ ಅಮೆರಿಕಕ್ಕೆ ಗಡೀಪಾರು ಮಾಡಲಾಗಿತ್ತು
ಈಗ ಅಮೆರಿಕ ಸರ್ಕಾರ ವಿಕಾಶ್ ವಿರುದ್ಧ ಸುಪಾರಿ ಕೊಲೆ (ಹಣ ನೀಡಿ ಇತರರಿಂದ ಕೊಲೆ ಮಾಡಿಸುವುದು ಅಥವಾ ಬಾಡಿಗೆ ಹತ್ಯೆ) ಹಾಗೂ ಅಕ್ರಮ ಹಣ ವರ್ಗಾವಣೆ ಕೇಸಿನಡಿ ದೋಷಾರೋಪ ಹೊರಿಸಿದೆ. ವಿಕಾಶ್‌ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಗುರುವಾರ ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು.