ಸಾರಾಂಶ
ನ್ಯೂಯಾರ್ಕ್/ವಾಷಿಂಗ್ಟನ್: ಬ್ರಿಟನ್, ಚೀನಾ ಬಳಿಕ ಇದೀಗ ಭಾರತದ ಜತೆಗೂ ಸದ್ಯದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದ ಜತೆಗೆ ವ್ಯಾಪಾರ ಒಪ್ಪಂದ ಸದ್ಯದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಇತರ ದೇಶಗಳ ಜತೆಗೆ ನಾವು ಮಾತುಕತೆ ನಡೆಸಿದರೂ ಯಾವುದೇ ಒಪ್ಪಂದ ಆಗಲಿದೆ ಎಂದು ಅನಿಸುತ್ತಿಲ್ಲ. ಹೀಗಾಗಿ ನಾವು ಅವರಿಗೆ ಪತ್ರ ಬರೆದಿದ್ದು, ಒಂದು ವೇಳೆ ನೀವು ಆಟವಾಡುವುದೇ ಆಗಿದ್ದರೆ ಅದಕ್ಕೆ ತಕ್ಕ ಬೆಲೆಯನ್ನೂ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾಗಿ ಟ್ರಂಪ್ ತಿಳಿಸಿದ್ದಾರೆ.
ಟ್ರಂಪ್ ಸರ್ಕಾರ ಸೋಮವಾರವಷ್ಟೇ ಜಪಾನ್, ದಕ್ಷಿಣ ಕೊರಿಯಾ, ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೇನೇಷ್ಯಾ, ಕಜಕಿಸ್ತಾನ, ಮಲೇಷ್ಯಾ, ದಕ್ಷಿಣ ಆಫ್ರಿಕಾ ಸೇರಿ 14 ದೇಶಗಳಿಗೆ ಪತ್ರ ಬರೆದಿದ್ದು, ಶೇ.20ರಿಂದ 40ರಷ್ಟು ಹೆಚ್ಚುವರಿ ಪ್ರತಿ ತೆರಿಗೆ ಹಾಕುವ ಬೆದರಿಕೆ ಹಾಕಿದೆ.
ಏ.2ರಂದು ಭಾರತದ ಮೇಲೆ ಅಮೆರಿಕ ಪ್ರತಿ ತೆರಿಗೆ ಹೇರಿದ್ದು, ಬಳಿಕ ಅದರ ಜಾರಿಯನ್ನು ಆ.1ರ ವರೆಗೆ ತಡೆಹಿಡಿದಿತ್ತು. ಈ ನಡುವೆ, ಕಳೆದ ವಾರವಷ್ಟೇ ವಾಣಿಜ್ಯ ಪಿಯೂಷ್ ಗೋಯಲ್ ಅವರು ಭಾರತವು ಯಾವುದೇ ವ್ಯಾಪಾರ ಒಪ್ಪಂದವನ್ನು ಗಡುವಿನ ಆಧಾರದಲ್ಲಿ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿಯನ್ನು ನೋಡಿಕೊಂಡು ಅಮೆರಿಕ ಜತೆಗೆ ಒಪ್ಪಂದಕ್ಕೆ ಸಹಿಹಾಕಲಿದ್ದೇವೆ ಎಂದು ತಿಳಿಸಿದ್ದಾರೆ. -ಬಾಕ್ಸ್-
ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ : ಟ್ರಂಪ್ ಪುನರುಚ್ಚಾರ
ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಪುನರುಚ್ಚರಿಸಿದ್ದಾರೆ. ಒಂದು ವೇಳೆ ನೀವು ಇದೇ ರೀತಿ ಯುದ್ಧ ಮುಂದುವರಿಸಿದ್ದೇ ಆದಲ್ಲಿ ನಾನು ನಿಮ್ಮ ಜತೆಗೆ ವ್ಯಾಪಾರ ಬಂದ್ ಮಾಡುವುದಾಗಿ ಎಂದು ಬೆದರಿಕೆ ಹಾಕಿದೆ. ಇದರಿಂದ ಅವರು ಯುದ್ಧ ನಿಲ್ಲಿಸಿದರು ಎಂದು ಹೇಳಿದರು.ಭಾರತ, ಪಾಕಿಸ್ತಾನ, ಸರ್ಬಿಯಾ, ಕೊಸೊವೋ, ರ್‍ವಾಂಡಾ ಮತ್ತು ಕಾಂಗೋ ಮತ್ತಿತರ ದೇಶಗಳು ಗಂಭೀರ ಯುದ್ಧದ ಹೊಸ್ತಿಲಲ್ಲಿದ್ದವು. ನಾವು ಹಲವು ಯುದ್ಧಗಳನ್ನು ತಡೆದಿದ್ದೇವೆ. ಇವುಗಳಲ್ಲಿ ಭಾರತ-ಪಾಕ್ ನಡುವಿನ ಯುದ್ಧ ಮಹತ್ವದ್ದು. ಈ ಎರಡೂ ದೇಶಗಳು ಅಣ್ವಸ್ತ್ರ ಕದನಕ್ಕೆ ಸಿದ್ಧರಾಗಿದ್ದವು. ಹೀಗಾಗಿ ಅದನ್ನು ತಡೆಯುವುದು ಮುಖ್ಯವಾಗಿತ್ತು ಎಂದು ಟ್ರಂಪ್ ತಿಳಿಸಿದರು.
ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್: ಪಾಕ್ ಬಳಿಕ ಇಸ್ರೇಲ್ ಶಿಫಾರಸು
ವಾಷಿಂಗ್ಟನ್: ಭಾರತ- ಪಾಕ್ ಸಂಘರ್ಷದಲ್ಲಿ ಕದನ ವಿರಾಮ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಮತ್ತು ಸಂಭವನೀಯ ಪರಮಾಣು ಯುದ್ಧ ತಡೆದಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಾಕಿಸ್ತಾನ ಸರ್ಕಾರ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ಬೆನ್ನಲ್ಲೇ ಇದೀಗ ಇಸ್ರೇಲ್ ಕೂಡ ಅದೇ ಕೆಲಸ ಮಾಡಿದೆ. ‘ಅರ್ಹರು ನೊಬೆಲ್ ಪಡೆಯಬೇಕು’ ಎಂದು ಇಸ್ರೇಲ್ ಅಧ್ಯಕ್ಷ ನೆತನ್ಯಾಹು ಟ್ರಂಪ್ ಗುಣಗಾನ ಮಾಡಿದ್ದಾರೆ. ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನ ಕೂಟದಲ್ಲಿ ಬೆಂಜಮಿನ್ ನೆತನ್ಯಾಹು ಭಾಗಿಯಾಗಿದ್ದರು. ಈ ವೇಳೆ ಅವರು ಡೊನಾಲ್ಡ್ ಟ್ರಂಪ್‌ಗೆ ನಾಮ ನಿರ್ದೇಶನ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಇಸ್ರೇಲ್- ಇರಾನ್ ಯುದ್ಧ ತಡೆಯುವಲ್ಲೂ ಟ್ರಂಪ್ ಪ್ರಮುಖ ಪಾತ್ರ ವಹಿಸಿದ್ದರು.
ಬಾಂಗ್ಲಾ ಸೇರಿ 14 ದೇಶಗಳ ಮೇಲೆ ಟ್ರಂಪ್ ತೆರಿಗೆ
ನ್ಯೂಯಾರ್ಕ್/ ವಾಷಿಂಗ್ಟನ್: ಬಾಂಗ್ಲಾ, ಜಪಾನ್ ಸೇರಿದಂತೆ 14 ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಯುದ್ಧವನ್ನು ಆರಂಭಿಸಿದ್ದು, ಆ.1ರಿಂದ ಹೊಸ ತೆರಿಗೆ ನೀತಿ ಜಾರಿಗೆ ಬರಲಿದೆ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ಆಡಳಿತ ಮಂಡಳಿ ಈ ದೇಶಗಳಿಗೆ ತೆರಿಗೆ ಪತ್ರವನ್ನು ಕಳುಹಿಸಿದೆ, ಆ ದೇಶಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸುವುದಾಗಿ ಹೇಳಿದೆ. ಲಾವೋಸ್ (ಶೇ.40), ಮ್ಯಾನ್ಮಾರ್ (ಶೇ.40), ಕಾಂಬೋಡಿಯಾ (ಶೇ.36), ಬಾಂಗ್ಲಾದೇಶ ( ಶೇ.35), ಸರ್ಬಿಯಾ (ಶೇ.35), ಇಂಡೋನೇಷ್ಯಾ (ಶೇ.32), ಬೊಸ್ನಿಯಾ ಮತ್ತು ಹರ್ಜೆಗೋವಿನಾ (ಶೇ.30), ಜಪಾನ್ (ಶೇ.25), ಕಝಕಿಸ್ತಾನ್ (ಶೇ.25), ಮಲೇಷ್ಯಾ (ಶೇ.25),ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ (ಶೇ.25) , ಥಾಯ್ಲೆಂಡ್ ಮತ್ತು ಟ್ಯುನೀಶಿಯಾ (ಶೇ.25) ದೇಶಗಳಿಗೆ ತೆರಿಗೆ ವಿಧಿಸಿ ಟ್ರಂಪ್ ಪತ್ರಕ್ಕೆ ಸಹಿಯಾಗಿದ್ದಾರೆ.