ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಡೆಡ್‌ಲೈನ್‌ ಆ.1ಕ್ಕೆ

| N/A | Published : Jul 08 2025, 01:48 AM IST / Updated: Jul 08 2025, 04:11 AM IST

ಸಾರಾಂಶ

ಭಾರತ ಸೇರಿ ಅನ್ಯದೇಶಗಳು ತಮ್ಮ ಮೇಲೆ ವಿಧಿಸಿದ ತೆರಿಗೆಗೆ ಪ್ರತಿಯಾಗಿ ಆ ದೇಶಗಳು ಮೇಲೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ತೆರಿಗೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ಆ.1ರವರೆಗೆ ಗಡುವು ವಿಸ್ತರಿಸಿದ್ದಾರೆ.

 ನವದೆಹಲಿ: ಭಾರತ ಸೇರಿ ಅನ್ಯದೇಶಗಳು ತಮ್ಮ ಮೇಲೆ ವಿಧಿಸಿದ ತೆರಿಗೆಗೆ ಪ್ರತಿಯಾಗಿ ಆ ದೇಶಗಳು ಮೇಲೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ತೆರಿಗೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ಆ.1ರವರೆಗೆ ಗಡುವು ವಿಸ್ತರಿಸಿದ್ದಾರೆ. ‘ಜು.9ರ ಗಡುವನ್ನು ಆ.1ಕ್ಕೆ ವಿಸ್ತರಿಸುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷರು ಸಹಿ ಹಾಕಿದ್ದಾರೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಕ್ಲೇರ್ ಲೀವಿಟ್ ತಿಳಿಸಿದ್ದಾರೆ. 

ವಿದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ಹೇರುತ್ತದೆ ಎಂದು ಆರೋಪಿಸಿದ್ದ ಅಧ್ಯಕ್ಷ ಟ್ರಂಪ್ ಇದಕ್ಕೆ ಪ್ರತಿಯಾಗಿ ಆಯಾ ದೇಶಗಳ ಮೇಲೆ ಪ್ರತ್ಯೇಕವಾದ ಪ್ರತಿ ತೆರಿಗೆ ಹೇರುವ ನಿರ್ಧಾರವನ್ನು ಕಳೆದ ಏ.2ರಂದು ಪ್ರಕಟಿಸಿದ್ದರು. ಅದರನ್ವಯ ಭಾರತದ ಮೇಲೆ ಶೇ.26ರಷ್ಟು ಪ್ರತಿತೆರಿಗೆ ಘೋಷಣೆಯಾಗಿತ್ತು.

ಆದರೆ ಬಳಿಕ ತಮ್ಮ ಧೋರಣೆಯಲ್ಲಿ ತಮ್ಮ ಬದಲಾವಣೆ ಮಾಡಿದ್ದ ಟ್ರಂಪ್‌, ಈ ಪ್ರತಿತೆರಿಗೆ ತಪ್ಪಿಸಿಕೊಳ್ಳಲು ಎಲ್ಲಾ ದೇಶಗಳಿಗೂ ಅಮೆರಿಕದೊಂದಿಗೆ ಹೊಸ ವ್ಯಾಪಾರ ಒಪ್ಪಂದಕ್ಕೆ ಅವಕಾಶ ಕಲ್ಪಿಸಿದ್ದರು. ಅದರನ್ವಯ ಪ್ರತಿ ತೆರಿಗೆ ಜಾರಿ ದಿನಾಂಕವನ್ನು ಜು.9ಕ್ಕೆ ಮುಂದೂಡಿದ್ದರು. ಈ ಗಡುವು ಜು.9ರ ಬುಧವಾರಕ್ಕೆ ಮುಕ್ತಾಯಗೊಳ್ಳಲಿತ್ತು.

ಆದರೆ ಈ 90 ದಿನಗಳ ಅವಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಅಮೆರಿಕದ ಜೊತೆಗೆ ಹೊಸದಾಗಿ ಒಪ್ಪಂದ ಮಾತುಕತೆ ನಡೆಸಿದ್ದವು. ಬಹುತೇಕ ದೇಶಗಳ ಜೊತೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆಯಾದರೂ, ಕೆಲವೊಂದು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಭಾರತ ಸೇರಿದಂತೆ ಕೆಲ ದೇಶಗಳಿಗೆ ಮಾತುಕತೆ ಅಂತಿಮಗೊಳಿಸಲು ಇನ್ನಷ್ಟು ಸಮಯ ನೀಡಲು ಟ್ರಂಪ್ ನಿರ್ಧರಿಸಿದ್ದಾರೆ.

ಅಂತಿಮ ಒಪ್ಪಂದ: ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಮೊದಲ ಹಂತದ ಮಾತುಕತೆಯನ್ನು ಮುಕ್ತಾಯಗೊಳಿಸಲು ಗಡುವನ್ನು ನಿಗದಿಪಡಿಸಿದ್ದಾರೆ. ಅದಕ್ಕೂ ಮೊದಲು, ಎರಡೂ ದೇಶಗಳು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಭಾರತಕ್ಕೆ ಶೇ.10ರಷ್ಟು ತೆರಿಗೆ?: 

ಈಗಾಗಲೇ ಅಮೆರಿಕದ ಜತೆ ಭಾರತದ ಮಾತುಕತೆ ಅಂತಿಮ ಹಂತ ಆರಂಭವಾಗಿದ್ದು, ಶೀಘ್ರವೇ ಮಧ್ಯಂತರ ಮಿನಿ ಒಪ್ಪಂದವಾಗುವ ನಿರೀಕ್ಷೆಯಿದೆ. ಕೆಲ ಮೂಲಗಳ ಪ್ರಕಾರ ಭಾರತ ತನ್ನ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದ್ದು, ಅಂತಿಮ ನಿರ್ಧಾರವನ್ನು ಕೈಗೊಂಡು ಒಪ್ಪಂದ ಅಂತಿಮಗೊಳಿಸುವ ಜವಾಬ್ದಾರಿಯೀಗ ಅಮೆರಿಕದ ಮೇಲಿದೆ.

ಗೋಧಿ, ಅಕ್ಕಿ, ಮೆಕ್ಕೆಜೋಳ, ಹೈನುಗಾರಿಕೆ, ತಳೀಯವಾಗಿ ಮಾರ್ಪಡಿಸಿದ (ಜಿಎಂ) ಬೆಳೆಗಳ ಮೇಲೆ ತೆರಿಗೆ ವಿನಾಯಿತಿ ನೀಡಲು ಭಾರತ ನಿರಾಕರಿಸಿರುವುದಾಗಿ ವರದಿಯಾಗಿದೆ. ಉಳಿದಂತೆ, ಅಮೆರಿಕದ ಪೆಕನ್ ಬೀಜ, ಬ್ಲೂಬೆರ್ರಿ ಮೇಲಿನ ತೆರಿಗೆ ತಗ್ಗಬಹುದು. ಅಮೆರಿಕ ಕೂಡ ಭಾರತದಲ್ಲಿ ಹೆಚ್ಚು ಕಾರ್ಮಿಕರ ದುಡಿತದಿಂದ ಉತ್ಪಾದನೆಯಾಗುವ ವಸ್ತುಗಳ ಮೇಲೆ ಕಡಿಮೆ ತೆರಿಗೆ ವಿಧಿಸುವ ನಿರೀಕ್ಷೆಯಿದೆ. ಉಭಯ ದೇಶಗಳ ನಡುವೆ ಪೂರ್ಣಪ್ರಮಾಣದ ಮಾತುಕತೆ ಜು.9ಕ್ಕೆ ಆರಂಭವಾಗುವ ಸಂಭವವಿದೆ.

Read more Articles on