ಮಾರಕ ನೀತಿಗಳ ಜಾರಿ : ಅಮೆರಿಕದ 50 ರಾಜ್ಯಗಳಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟನೆ

| N/A | Published : Apr 07 2025, 12:36 AM IST / Updated: Apr 07 2025, 04:58 AM IST

ಸಾರಾಂಶ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಅಧಿಕಾರಕ್ಕೆ ಬಂದ ನಂತರ ಮಾರಕ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಾದ್ಯಂತ ಶನಿವಾರ ಅವರ ವಿರೋಧಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಕಂಡು ಕೇಳರಿಯದ ಪ್ರತಿಭಟನೆ ಎಂದು ಹೇಳಲಾಗಿದೆ.

  ವಾಷಿಂಗ್ಟನ್ :  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಅಧಿಕಾರಕ್ಕೆ ಬಂದ ನಂತರ ಮಾರಕ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದಾದ್ಯಂತ ಶನಿವಾರ ಅವರ ವಿರೋಧಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಕಂಡು ಕೇಳರಿಯದ ಪ್ರತಿಭಟನೆ ಎಂದು ಹೇಳಲಾಗಿದೆ.

ಅಮೆರಿಕದ 50 ರಾಜ್ಯಗಳ 1200 ಸ್ಥಳಗಳಲ್ಲಿ ಸುಮಾರು 150 ಸಂಘಟನೆಗಳು ‘ಹ್ಯಾಂಡ್ಸ್‌ ಆಫ್‌’ ಹೆಸರಿನಲ್ಲಿ ಪ್ರತಿಭಟನೆ ನಡೆಸಿದವು. ಇವುಗಳಲ್ಲಿ ನಾಗರಿಕ ಹಕ್ಕು, ಕಾರ್ಮಿಕ ಸಂಘಟನೆಗಳು, ತೃತೀಯ ಲಿಂಗಿ ಸಮುದಾಯಗಳು, ಚುನಾವಣಾ ಕಾರ್ಯಕರ್ತರು ಹಾಗೂ ಮಾಜಿ ಯೋಧರು ಇದ್ದರು. ಇವರ ಪ್ರತಿಭಟನೆಗಳು ಟ್ರಂಪ್‌ ಎದುರು ಸೋತು ಸುಣ್ಣವಾಗಿದ್ದ ಡೆಮಾಕ್ರೆಟಿಕ್‌ ಪಕ್ಷಕ್ಕೆ ಹುಮ್ಮಸ್ಸು ನೀಡಿದೆ.

ಪ್ರತಿಭಟನಾಕಾರರು ಟ್ರಂಪ್‌ ಮತ್ತು ಅವರ ಆಪ್ತನಾದ ಆಡಳಿತ ಸುಧಾರಣಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಇತ್ತೀಚೆಗೆ ಜಾರಿಗೆ ತಂದ ತೆರಿಗೆ ನೀತಿ, ಅಮೆರಿಕದಲ್ಲಿನ ಸಾವಿರಾರು ಸರ್ಕಾರಿ ನೌಕರರ ವಜಾಗಳನ್ನು ತೀವ್ರವಾಗಿ ಖಂಡಿಸಿದರು. ಇದೇ ವೇಳೆ, ‘ತೃತೀಯ ಲಿಂಗಿಗಳ ಅಧಿಕಾರ ಮೊಟಕು ಮಾಡಿ ಮತ್ತು ಗರ್ಭಪಾತದ ಮೇಲೆ ನಿರ್ಬಂಧ ಹೇರಿ ನಾಗರಿಕ ಸ್ವಾತಂತ್ರ್ಯ ಹತ್ತಿಕ್ಕುತ್ತಿದ್ದಾರೆ’ ಎಂದು ಆರೋಪಿಸಿದರು.

 ವಾಷಿಂಗ್ಟನ್, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್ ಮತ್ತು ಇತರ ಸ್ಥಳಗಳಲ್ಲಿ ಧಿಕ್ಕಾರದ ಘೋಷಣೆಗಳು ಮೊಳಗಿದವು. ‘ಅವನೊಬ್ಬ (ಟ್ರಂಪ್‌) ಹುಚ್ಚ’ ಎಂದು ಕೆಲವರು ಮೂದಲಿಸಿದರು.‘ಟ್ರಂಪ್‌ ತಮ್ಮ ತೆರಿಗೆ ನೀತಿಯಿಂದ ನಮ್ಮ ಮಿತ್ರರಾಷ್ಟ್ರಗಳು ಅಮೆರಿಕದಿಂದ ದೂರವಾಗುತ್ತಿವೆ. ಇದರಿಂದ ಅಮೆರಿಕಕ್ಕೆ ಹೆಚ್ಚು ತೊಂದರೆ. ಸರ್ವಾಧಿಕಾರಿ ಧೋರಣೆಯಿಂದ ನಮ್ಮ ದೇಶವನ್ನು ಅವರು ನಾಶಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಟ್ರಂಪ್‌ ಮಾಡಿದ್ದು ಸರಿ- ಶ್ವೇತಭವನ:

ಆದರೆ ಈ ಪ್ರತಿಭಟನೆಗಳನ್ನು ಖಂಡಿಸಿರುವ ಶ್ವೇತಭವನ, ‘ಅಮೆರಿಕದ ರಕ್ಷಣೆ ಮಾಡಲು ಏನು ಬೇಕೋ ಆ ಎಲ್ಲ ಕ್ರಮಗಳನ್ನು ಟ್ರಂಪ್‌ ತೆಗೆದುಕೊಂಡಿದ್ದಾರೆ. ಈ ವಿಷಯದಲ್ಲಿ ಅವರು ಸ್ಪಷ್ಟವಾಗಿದ್ದಾರೆ’ ಎಂದು ಹೇಳಿದೆ.