ಸಾರಾಂಶ
ಬೆಂಗಳೂರು : ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಚಲನಚಿತ್ರ ನಟ ದರ್ಶನ್ ಹಾಗೂ ಅವರ ಸಹಚರರ ಪ್ರಕರಣವನ್ನೇ ನೆನಪಿಸುವ ಮತ್ತೊಂದು ಘಟನೆ ಬೆಂಗಳೂರಲ್ಲಿ ನಡೆದಿದೆ. ತನ್ನ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆಕೆಯ ಮಾಜಿ ಗೆಳೆಯನನ್ನು ಹಾಲಿ ಗೆಳೆಯ ಮತ್ತು ಆತನ ಗ್ಯಾಂಗ್ ಅಪಹರಿಸಿ, ಬೆತ್ತಲೆ ಮಾಡಿ ಮಾರಣಾಂತರಿಕ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಇವರು ಕೊಲೆ ಮಾಡುವಾಗ ಡಿ-ಗ್ಯಾಂಗ್ ನಡೆದುಕೊಂಡ ರೀತಿಯೇ ಅನುಕರಣೆ ಮಾಡಿ ವಿಡಿಯೋ ಮಾಡಿದ್ದು, ಬೆಚ್ಚಿ ಬೀಳಿಸುವಂತಿದೆ.
ಸಾಸುವೇಘಟ್ಟ ಗ್ರಾಮದ ಮಂಜುನಾಥ್ ಲೇಔಟ್ ನಿವಾಸಿ ಕುಶಾಲ್ ಹಲ್ಲೆಗೊಳಗಾದ ಯುವಕ. ಈ ಕೃತ್ಯ ಸಂಬಂಧ ಆತನ ಮಾಜಿ ಸ್ನೇಹಿತೆ (ಅಪ್ರಾಪ್ತ ಬಾಲಕಿ), ಎ.ಶಿವಶಂಕರ್, ಯಶವಂತ್ ಪಟೇಲ್, ಹೇಮಂತ್, ಸಲ್ಮಾನ್ ಖಾನ್, ಎಂ.ರಾಹುಲ್, ಎಸ್.ತೇಜಸ್, ಆರ್.ರಾಕೇಶ್ ಹಾಗೂ ಎನ್.ಶಶಾಂಶ್‌ಗೌಡ ಅವರನ್ನು ಬಂಧಿಸಲಾಗಿದೆ.
3 ದಿನಗಳ ಹಿಂದೆ ಕುಶಾಲ್‌ನನ್ನು ಅಪಹರಿಸಿದ ಆರೋಪಿಗಳು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಏನಿದು ಘಟನೆ?:
ಕುಶಾಲ್ ಹಾಗೂ ಆಕೆಯ ಮಾಜಿ ಸ್ನೇಹಿತೆ ಪಿಯುಸಿ ಮುಗಿಸಿದ್ದು, ಬೆಂಗಳೂರು ಹೊರವಲಯದ ಚಿಕ್ಕಬಾಣಾವರ ಸಮೀಪದ ಸೋಲದೇವನಹಳ್ಳಿ ಸಮೀಪ ನೆಲೆಸಿದ್ದಾರೆ. ಮೊದಲು ಕುಶಾಲ್ ಹಾಗೂ ಆಕೆಯ ಸ್ನೇಹಿತೆ ನಡುವೆ ಆತ್ಮೀಯ ಒಡನಾಟ ಇತ್ತು. ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಬಿರುಕು ಮೂಡಿ ಪ್ರತ್ಯೇಕವಾಗಿದ್ದರು. ಇದಾದ ಬಳಿಕ ಮತ್ತೊಬ್ಬನ ಜತೆ ಆಕೆಯ ಗೆಳೆತನ ಬೆಳೆದಿತ್ತು. ಇದೇ ಗೆಳೆತನದಲ್ಲಿ ಇಬ್ಬರು ಜತೆಯಾಗಿ ಓಡಾಡುತ್ತಿದ್ದರು. ಇದನ್ನು ನೋಡಿ ಕೆರಳಿದ ಕುಶಾಲ್, ತನ್ನ ಮಾಜಿ ಸ್ನೇಹಿತೆಗೆ ನಿರಂತರವಾಗಿ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ.
ಈ ಸಂಗತಿಯನ್ನು ಆಕೆ ತನ್ನ ಗೆಳೆಯನಿಗೆ ತಿಳಿಸಿದ್ದಳು. ಇದರಿಂದ ಕೆರಳಿದ ಆತ, ತನ್ನ ಸ್ನೇಹಿತರ ಜತೆ ಸೇರಿ ಕುಶಾಲ್‌ಗೆ ಪಾಠ ಕಲಿಸಲು ಮುಂದಾಗಿದ್ದಾನೆ. ಅಂತೆಯೇ ಜು.4 ರಂದು ಮಾತುಕತೆ ನೆಪದಲ್ಲಿ ಕುಶಾಲ್‌ನನ್ನು ಚಿಕ್ಕಬಾಣಾವರದ ಎಜಿಬಿ ಲೇಔಟ್ ಬಳಿಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಬಂದ ಆತನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಪ್ರಾಪ್ತ ಬಾಲಕಿ ಸಹ ಇದ್ದಳು.
‘ಅಶ್ಲೀಲ ಮೆಸೇಜ್ ಮಾಡುತ್ತೀಯಾ’ ಎಂದು ಪ್ರಶ್ನಿಸಿ ಕುಶಾಲ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಆತನನ್ನು ಬೆತ್ತಲೆಗೊಳಿಸಿ ಮರ್ಮಾಂಗಕ್ಕೂ ಒದ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ನಟ ದರ್ಶನ್ ಪ್ರಕರಣವನ್ನು ಆರೋಪಿಗಳು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಹಲ್ಲೆಗೊಳಗಾದವನನ್ನು ರೇಣುಕಾಸ್ವಾಮಿ ಎಂದು ಸಂಬೋಧಿಸಿದ ಅವರು, ತಮ್ಮನ್ನು ದರ್ಶನ್ ಪ್ರಕರಣದ ರೀತಿಯಲ್ಲಿ ಆರೋಪಿ ನಂ.1, 2, 3.. ಎಂದು ಹೆಸರಿಸಿಕೊಂಡಿದ್ದಾರೆ. ಇದನ್ನೆಲ್ಲ ವಿಡಿಯೋ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸೋಷಿಯಲ್ ಮೀಡಿಯಾಗೆ ಹಾಕಿದ್ದಾರೆ. ಇದರ ನಡುವೆ ಮರು ದಿನ ಪೊಲೀಸರಿಗೆ ಸಂತ್ರಸ್ತ ಕುಶಾಲ್ ದೂರು ನೀಡಿದ್ದ. ಇದನ್ನು ಹಾಗೂ ವೈರಲ್ ವಿಡಿಯೋ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತರೆಲ್ಲರೂ ವಿದ್ಯಾರ್ಥಿಗಳು!
ಈ ಹಲ್ಲೆ ಪ್ರಕರಣದ ಬಂಧಿತ ಆರೋಪಿಗಳೆಲ್ಲ ವಿದ್ಯಾರ್ಥಿಗಳಾಗಿದ್ದು, ಖಾಸಗಿ ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳಲ್ಲಿ ಅವರು ಓದುತ್ತಿದ್ದಾರೆ. ದಾಸರಹಳ್ಳಿ, ನೆಲಮಂಗಲ ಹಾಗೂ ಪೀಣ್ಯದಲ್ಲಿ ಆರೋಪಿಗಳು ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಪ್ರಿಯಕರನನ್ನು ಅಪಹರಿಸಿ ಖಾಸಗಿ ಅಂಗಾಂಗಕ್ಕೆ ಒದ್ದು ಹತ್ಯೆ
ಕಲಬುರಗಿ : ಕಳೆದ ವರ್ಷ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೋಲುವಂತಹ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಮಹಿಳೆಯೊಂದಿಗೆ ಹೊಂದಿದ್ದ ಸಹಜೀವನದ ಸಂಬಂಧದಲ್ಲಿ ಉಂಟಾದ ಮನಸ್ತಾಪದಲ್ಲಿ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಬಡಿಗೆಯಿಂದ ಹೊಡೆದು, ಖಾಸಗಿ ಅಂಗಕ್ಕೆ ಒದ್ದು, ಭೀಕರವಾಗಿ ಕೊಲೆ ಮಾಡಿ, ಆತನ ಮೃತದೇಹವನ್ನು ನದಿಗೆ ಎಸೆಯಲಾಗಿತ್ತು. ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಲಬುರಗಿ ಗಣೇಶ ನಗರದ ನಿವಾಸಿ ರಾಘವೇಂದ್ರ ನಾಯಕ್ (39) ಕೊಲೆಯಾದ ವ್ಯಕ್ತಿ. ಗುರುರಾಜ ಅಲಿಯಾಸ್ ಗುರು ಶೇಷಪ್ಪ ನೆಲೋಗಿ (36), ಅಶ್ವಿನಿ ಅಲಿಯಾಸ್ ತನು ರಾಜಶೇಖರ ಮಲ್ಲಾಬಾದ (26) ಮತ್ತು ಲಕ್ಷ್ಮೀಕಾಂತ ಮಲ್ಲಿಕಾರ್ಜುನ ಮಾಲಿ ಪಾಟೀಲ (28) ಬಂಧಿತರು.
ಪ್ರಕರಣವೇನು?:ಮೂಲತಃ ಕಾರವಾರದವನಾಗಿದ್ದ ರಾಘವೇಂದ್ರ ನಾಯಕ್, ನಗರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಸಾಧಾರಣವಾಗಿ 15 ದಿನಗಳಿಗೊಮ್ಮೆ ತನ್ನೂರಿಗೆ ಹೋಗಿ ಬರುತ್ತಿದ್ದ. ಆದರೆ, ಎರಡು ತಿಂಗಳು ಕಳೆದರೂ ಮನೆಗೆ ಬಾರದೇ ಇರುವುದನ್ನು ಕಂಡ ಆತನ ಪತ್ನಿ ಸುರೇಖಾ, ಕಳೆದ ಮೇ 25ರಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು. ದೂರು ಆಧರಿಸಿ, ಪೊಲೀಸರು ತನಿಖೆ ಕೈಗೊಂಡಾಗ ಒಂದೊಂದೆ ಸಂಗತಿ ಬಯಲಿಗೆ ಬಂದಿದೆ.
ರಾಘವೇಂದ್ರನಿಗೆ ಅಶ್ವಿನಿ ಎಂಬಾಕೆ ಜೊತೆ ಸ್ನೇಹವಿದ್ದು, ಆಕೆಯೊಂದಿಗೆ ಸಹಜೀವನ ನಡೆಸುತ್ತಿದ್ದ. ಸ್ವಲ್ಪ ದಿನಗಳ ನಂತರ ಅಶ್ವಿನಿ, ರಾಘವೇಂದ್ರನನ್ನು ಬಿಟ್ಟು ಗುರುರಾಜನ ಜತೆ ಸಂಬಂಧ ಬೆಳೆಸಿದಳು. ಇದು ರಾಘವೇಂದ್ರ ಹಾಗೂ ಗುರುರಾಜನ ನಡುವೆ ವೈಷಮ್ಯಕ್ಕೆ ಕಾರಣವಾಯಿತು.
ಈ ಮಧ್ಯೆ, ಮಾ.12ರಂದು ಅಶ್ವಿನಿ, ರಾಘವೇಂದ್ರನಿಗೆ ಕರೆ ಮಾಡಿ, ಭೇಟಿಯಾಗೋಕೆ ತಿಳಿಸಿದ್ದಳು. ರಾತ್ರಿ 8.30ರ ಸುಮಾರಿಗೆ ರಾಘವೇಂದ್ರ, ಕಲಬುರಗಿಯ ಸೂಪರ್ ಮಾರ್ಕೆಟ್ ಹತ್ತಿರ ಇರುವ ಲಾಡ್ಜ್ ಹತ್ತಿರ ಬಂದಾಗ ಮೂವರು ಆರೋಪಿಗಳು ರಾಘವೇಂದ್ರನನ್ನು ಕಾರಿನಲ್ಲಿ ಕೂಡಿಸಿಕೊಂಡು, ಕೃಷ್ಣಾನಗರದ ಸ್ಮಶಾನ ಭೂಮಿಯ ಹತ್ತಿರ ಕರೆದುಕೊಂಡು ಬಂದಿದ್ದರು. ಅಲ್ಲಿ, ಕೈ ಮತ್ತು ಬಡಿಗೆಗಳಿಂದ ಹೊಡೆದು, ಖಾಸಗಿ ಅಂಗಕ್ಕೆ ಒದ್ದು, ಹತ್ಯೆ ಮಾಡಿ, ನಂತರ ಶವವನ್ನು ಕಾರಿನಲ್ಲಿ ಹಾಕಿಕೊಂಡು ರಾಯಚೂರು ಜಿಲ್ಲೆಯ ಶಕ್ತಿನಗರದ ಬಳಿ ಕೃಷ್ಣಾ ನದಿಯ ಸೇತುವೆ ಮೇಲಿಂದ ಶವ ಎಸೆದು ಬಂದಿದ್ದರು. ಪೊಲೀಸರು ಇದನ್ನು ಅಪರಿಚಿತ ವ್ಯಕ್ತಿಯ ಕೊಲೆ ಎಂದು ಪ್ರಕರಣ ದಾಖಲಿಸಿದ್ದರು.