ಬ್ಯಾಡ್ಜ್, ಲೇಪಲ್ ಪಿನ್ ಇತ್ಯಾದಿ ತ್ಯಾಗ । ಚೀನಿ ಕಣ್ಗಾವಲು, ಟ್ರ್ಯಾಕಿಂಗ್ ತಪ್ಪಿಸಲು ಕ್ರಮ
ವಾಷಿಂಗ್ಟನ್: 3 ದಿನಗಳ ಚೀನಾ ಭೇಟಿ ಮುಗಿಸಿ ಅಮೆರಿಕಕ್ಕೆ ಮರಳುವ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಗಡ ಬಂದಿದ್ದ ಸಚಿವರು ಮತ್ತು ಅಧಿಕಾರಿ ಬಳಗ ತಮಗೆ ನೀಡಲಾಗಿದ್ದ ಚೀನಿ ವಸ್ತುಗಳನ್ನು ಅಲ್ಲೇ ಕಸದಬುಟ್ಟಿಗೆ ಎಸೆದು ಹೋಗಿದ್ದಾರೆ ಎಂದು ವರದಿಯಾಗಿದೆ. ಭದ್ರತೆಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ ಎನ್ನಲಾಗಿದೆ.ಹ್ಯಾಕಿಂಗ್ ಭೀತಿಯಿಂದ ವೈಯಕ್ತಿಕ ಮೊಬೈಲ್‌ಗಳನ್ನೂ ತಂದಿರದ ಅಮೆರಿಕನ್ ಅಧಿಕಾರಿಗಳು, ತಾತ್ಕಾಲಿಕ ಬಳಕೆಗೆ ನೆಚ್ಚಿಕೊಂಡಿದ್ದ ಫೋನ್‌ಗಳನ್ನೂ ಬಿಟ್ಟು ಬಂದಿದ್ದಾರೆ. ಜತೆಗೆ, ಚೀನಾದಲ್ಲಿ ತಮಗೆ ನೀಡಲಾಗಿದ್ದ ಬ್ಯಾಡ್ಜ್, ಲೇಪಲ್ ಪಿನ್, ಕಾಣಿಕೆ ಇತ್ಯಾದಿಗಳನ್ನು ವಿಮಾನ ಏರುವ ಮುನ್ನ ಕದಸ ಬುಟ್ಟಿಗೆ ಹಾಕಿದರು. ಚೀನಾದ ಯಾವುದೇ ವಸ್ತು ವಿಮಾನವನ್ನು ಏರಬಾರದು ಹಾಗೂ ಅಮೆರಿಕಕ್ಕೆ ಬರಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಲಾಯಿತು ಎಂದು ಅಮೆರಿಕದ ಪತ್ರಕರ್ತರೊಬ್ಬರು ಹೇಳಿದ್ದಾರೆ.
ಹೀಗ್ಯಾಕೆ ಮಾಡಿದ್ರು?:ಮೇಲ್ನೋಟಕ್ಕೆ ಚೀನಾಗೆ ತೋರಿದ ಅವಮರ್ಯಾದೆಯಂತೆ ಕಂಡರೂ ಈ ಕ್ರಮವು ಅಧ್ಯಕ್ಷ ಹಾಗೂ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡದ್ದಾಗಿತ್ತು. ಚೀನಾ ತಮಗೆ ಕೊಟ್ಟ ವಸ್ತುಗಳ ಮೂಲಕ ತಮ್ಮ ಮೇಲೆ ಕಣ್ಗಾವಲು ಇಡಬಹುದು. ತಮ್ಮ ನಡೆಗಳನ್ನು ಕದ್ದು ನೋಡಿ, ನುಡಿಗಳನ್ನು ಕೇಳಬಹುದು ಅಥವಾ ಹೋದಲ್ಲೆಲ್ಲಾ ಟ್ರ್ಯಾಕ್ ಮಾಡಬಹುದು ಎಂಬುದು ಅಮೆರಿಕನ್ನರ ಆತಂಕ. ಜತೆಗೆ, ಚೀನಿ ವಸ್ತುಗಳಲ್ಲಿ ಯಾವುದಾದರೂ ಸ್ಫೋಟಕದಂತಹ ಅಪಾಯಕಾರಿ ವಸ್ತುವಿದ್ದು, ಟ್ರಂಪ್ ಪ್ರಯಾಣಿಸುವ ಏರ್‌ಫೋರ್ಸ್ ಒನ್ ವಿಮಾನ ಆಗಸದಲ್ಲಿದ್ದಾಗ ಅದು ತನ್ನ ನಿಜಬಣ್ಣ ತೋರುವ ಸಾಧ್ಯತೆಯೂ ಇರುತ್ತದೆ. ಇದನ್ನು ತಪ್ಪಿಸಲು ಚೀನಿ ವಸ್ತುಗಳನ್ನು ಚೀನಾದಲ್ಲೇ ಬಿಟ್ಟು ಬರಲಾಗಿದೆ.