ಸಾರಾಂಶ
ಲಖನೌ: ಉತ್ತರ ಪ್ರದೇಶದ ವಿಧಾನಸಭೆ ಒಳಗೇ ಶಾಸಕರೊಬ್ಬರು ಗುಟ್ಕಾ ಜಗಿದು ಉಗಿದ ಘಟನೆ ಬೆನ್ನಲ್ಲೇ ಅಸೆಂಬ್ಲಿಯಲ್ಲಿ ಇನ್ನು ಮುಂದೆ ಪಾನ್ ಮಸಾಲಾ, ಗುಟ್ಕಾ ಜಗಿಯುವುದರ ಮೇಲೆ ಸ್ಪೀಕರ್ ನಿಷೇಧ ಹೇರಿದ್ದಾರೆ.
ಅಲ್ಲದೇ ಒಂದು ವೇಳೆ ಉಲ್ಲಂಘಿಸಿದಲ್ಲಿ 1000 ರು. ದಂಡ ಹೇರುವುದಾಗಿ ಹೇಳಿದ್ದಾರೆ. ಬುಧವಾರ ವಿಧಾನಸಭೆಯ ಒಳಗೇ ಶಾಸಕರೊಬ್ಬರು ಗುಟ್ಕಾ ಉಗಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದ ಸ್ಪೀಕರ್ ಸತೀಶ್ ಮಹಾನಾ,‘ಗುಟ್ಕಾ ಉಗಿದ ಶಾಸಕರನ್ನು ಸಿಸಿಟೀವಿಯಲ್ಲಿ ನೋಡಿದ್ದೇನೆ. ಅವರಾಗಿಯೇ ಬಂದು ಒಪ್ಪಿಕೊಂಡರೆ ಒಳಿತು. ಇಲ್ಲವಾದರೆ ಹೆಸರು ಬಹಿರಂಗ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ತಮ್ಮ ಕೈಯಾರೆ ಗಲೀಜು ಸ್ವಚ್ಛಗೊಳಿಸಿದ್ದರು.
ತ.ನಾಡಲ್ಲಿ ಮತ್ತೆ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ: ಪಳನಿ ಸುಳಿವು
ಕೊಯಮತ್ತೂರು: 2 ವರ್ಷದ ಹಿಂದೆ ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿದ್ದ ತಮಿಳುನಾಡಿನ ವಿಪಕ್ಷ ಅಣ್ಣಾಡಿಎಂಕೆ ಮತ್ತು ತಮ್ಮ ಹಳೆ ದೋಸ್ತ್ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದೆ. ಈ ಬಗ್ಗೆ ಪಕ್ಷದ ನಾಯಕ ಇ.ಪಳನೀಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ. ಸೇಲಂನಲ್ಲಿ ಮಾತನಾಡಿದ ಇಪಿಎಸ್,‘2026ರ ನಮ್ಮ ಏಕೈಕ ಎದುರಾಳಿ ಎಂದರೆ ಅದು ಜನವಿರೋಧಿ ಡಿಎಂಕೆ. ಸ್ಟಾಲಿನ್ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ. ಮತ ವಿಭಜನಯಾಗಲು ಬಿಡುವುದಿಲ್ಲ’ ಎಂದರು. ಇದಕ್ಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪಳನೀಸ್ವಾಮಿ, ಇನ್ನು 6 ತಿಂಗಳಲ್ಲಿ ಮೈತ್ರಿ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.
ಭಾರತವನ್ನು ಹಿಂಡಿಯಾ ಮಾಡಲು ಬಿಜೆಪಿ ಯತ್ನ: ಕಮಲ್‌ಹಾಸನ್ ಟೀಕೆ
ಚೆನ್ನೈ: ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ರನ್ನು ನಟ, ರಾಜಕಾರಣಿ ಕಮಲ್ ಹಾಸನ್ ಕೂಡ ಬೆಂಬಲಿಸಿದ್ದು, ಹಿಂದಿಯೇತರ ರಾಜ್ಯಗಳಲ್ಲಿಯೂ ಹಿಂದಿಯೇರಿಕೆ ಮೂಲಕ ಕೇಂದ್ರ ಸರ್ಕಾರವು ಇಂಡಿಯಾವನ್ನು ಹಿಂಡಿಯಾವನ್ನಾಗಿ ಪರಿವರ್ತಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಹಿಂದಿ ಹೇರಿಕೆ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ವಿರುದ್ಧ ನಿರ್ಣಯ ಅಂಗೀಕರಿಸುವ ಸಂದರ್ಭದಲ್ಲಿ ತಮಿಳ್ ಪಕ್ಷದ ಸಭೆಯಲ್ಲಿ ಈ ಕುರಿತು ಮಾತನಾಡಿದ ಕಮಲ್ ಹಾಸನ್, ‘ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳನ್ನು ಹಿಂದಿಯಲ್ಲಿ ಮಾತನಾಡುವಂತೆ ಮಾಡಿ, ಬಹುಮತದಿಂದ ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದೆ. ನಮ್ಮ ಕನಸು ಭಾರತ ಮತ್ತು ಅವರ ಕನಸು ಹಿಂಡಿಯಾ’ ಎಂದರು.
ಚೀನಾ ರಕ್ಷಣಾ ಬಜೆಟ್ ₹21 ಲಕ್ಷ ಕೋಟಿಗೇರಿಕೆ: ಭಾರತಕ್ಕಿಂತ 3 ಪಟ್ಟು
ಬೀಚಿಂಗ್: ಪ್ರಸಕ್ತ ವರ್ಷದಲ್ಲಿ ಚೀನಾ ತನ್ನ ರಕ್ಷಣಾ ಬಜೆಟ್‌ಗೆ 21 ಲಕ್ಷ ಕೋಟಿ ರು. ಮೀಸಲಿರಿಸಲು ನಿರ್ಧರಿಸಿದೆ. ಇದು ಕಳೆದ ವರ್ಷದ ರಕ್ಷಣಾ ಬಜೆಟ್ ಮೊತ್ತವಾದ 19 ಲಕ್ಷ ಕೋಟಿ ರು.ಗೆ ಹೋಲಿಸಿದರೆ ಶೇ.7.2ರಷ್ಟು ಹೆಚ್ಚಳವಾಗಿದೆ. ಬುಧವಾರ ಸಂಸತ್‌ನಲ್ಲಿ ಪ್ರಧಾನಿ ಲೀ ಖಿಯಾಂಗ್ ಮಂಡಿಸಿದ ಬಜೆಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಚೀನಾದ ರಕ್ಷಣಾ ಬಜೆಟ್‌ನ ಗಾತ್ರವು ಭಾರತಕ್ಕಿಂತ ಮೂರು ಪಟ್ಟು ಹೆಚ್ಚು. ವಿಮಾನವಾಹಕ ನೌಕೆಗಳ ನಿರ್ಮಾಣ, ನೌಕಾ ಹಡಗುಗಳ ತ್ವರಿತ ನಿರ್ಮಾಣ, ಆಧುನಿಕ ರಹಸ್ಯ ವಿಮಾನಗಳು ಸೇರಿದಂತೆ ಬೃಹತ್ ಮಿಲಿಟರಿ ಉಪಕರಣಗಳಿಗಾಗಿ ಚೀನಾ ರಕ್ಷಣಾ ಬಜೆಟ್ ಹೆಚ್ಚಿಸಿದೆ.
ದೇಶವ್ಯಾಪಿ ಕಾಂಗ್ರೆಸ್ ಆಸ್ತಿಗಳ ಮೇಲೆ ನಿಗಾ ಇಡಲು ಹೊಸ ವಿಭಾಗ
ನವದೆಹಲಿ: ಪಕ್ಷದ ಆಸ್ತಿಗಳ ಮೇಲೆ ನಿಗಾವಹಿಸಲು ಮತ್ತು ಪ್ರತಿ ರಾಜ್ಯಗಳಲ್ಲಿ ಇರುವ ಆಸ್ತಿ, ಕಚೇರಿ, ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಹೊಸ ವಿಭಾಗವೊಂದನ್ನು ಷ್ಟಿಸಿದೆ. ಅಸೆಟ್ಸ್ ಮತ್ತು ಪ್ರಾಪರ್ಟಿ ವಿಭಾಗಕ್ಕೆ ಪಕ್ಷದ ಹೆಚ್ಚುವರಿ ಖಜಾಂಚಿ, ಮಾಜಿ ಸಂಸದ ವಿಜಯ್ ಇಂದರ್ ಸಿಂಗ್ಲಾ ಅವನ್ನು ಮುಖ್ಯಸ್ಥರಾಗಿ ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ. ಸಿಂಗ್ಲಾ ಅವರು ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಕಾಂಗ್ರೆಸ್ ಕಚೇರಿಗಳ ಜವಾಬ್ದಾರಿಯನ್ನು ಹೊರಲಿದ್ದಾರೆ. ಇವುಗಳ ಲೆಕ್ಕಾಚಾರವನ್ನು ಸಹ ನಿರ್ವಹಿಸಲಿದ್ದಾರೆ. ಇದರ ಜೊತೆಗೆ ಪಕ್ಷದ ಹೆಚ್ಚುವರಿ ಖಜಾಂಚಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.