ಸಾರಾಂಶ
ವಿಧಾನಸಭೆ ಅಧಿವೇಶನದ ಬಳಿಕ ಯುಸಿಸಿ ಕರಡು ಜಾರಿಗೆ ಕ್ರಮ ಕೈಗೊಳ್ಳುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಡೆಹರಾಡೂನ್: ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ, ಐವರು ಸದಸ್ಯರ ಸಮಿತಿ ಕರಡು ಪ್ರತಿಯನ್ನು ಸಿದ್ಧಗೊಳಿಸಿದ್ದು, ಶೀಘ್ರವೇ ಸರ್ಕಾರಕ್ಕೆ ಹಸ್ತಾಂತರಿಸಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಹೇಳಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಕೆಯಾದ ಬಳಿಕ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗುವುದು. ಇದಾದ ಬಳಿಕ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಮದುವೆ, ವಿಚ್ಛೇದನ, ಭೂಮಿ, ಆಸ್ತಿ, ವಂಶಪಾರಂಪರ್ಯತೆಗೆ ಸಂಬಂಧಿಸಿದಂತೆ ಒಂದು ಕಾನೂನು ಚೌಕಟ್ಟನ್ನು ಯುಸಿಸಿ ರಚಿಸಲಿದೆ. ಅಲ್ಲದೇ ಇದು ಸಾಮಾಜಿಕ ಸಾಮರಸ್ಯವನ್ನು ಮೂಡಿಸಿ, ಲಿಂಗಾಧಾರಿತ ತಾರತಮ್ಯವನ್ನು ಹೋಗಲಾಡಿಸುತ್ತದೆ ಎಂದು ಅವರು ಹೇಳಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದಾಗಿ 2022ರ ಫೆಬ್ರವರಿಯಲ್ಲಿ ಧಾಮಿ ಘೋಷಿಸಿದ್ದರು. ಇದಾದ ಬಳಿಕ ಸರ್ಕಾರ ರಚನೆ ಮಾಡಿ ಮೊದಲ ಸಂಪುಟ ಸಭೆಯಲ್ಲಿಯೇ ಯುಸಿಸಿಗೆ ಅಂಗೀಕಾರ ನೀಡಿದ್ದರು. ಇದಾದ ಬಳಿಕ 5 ಮಂದಿಯ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ 60ಕ್ಕೂ ಹೆಚ್ಚು ಸಭೆ ನಡೆಸಿದ್ದು, 60 ಸಾವಿರಕ್ಕೂ ಹೆಚ್ಚು ಜನರ ಜೊತೆ ಸಂವಾದ ನಡೆಸಿ 2.3 ಲಕ್ಷ ಸಲಹೆಗಳನ್ನು ಸ್ವೀಕರಿಸಿತ್ತು.