ದೇಶಭ್ರಷ್ಟ ಹಾಗೂ ಆರ್ಥಿಕ ಅಪರಾಧಿ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವನುವಾಟು ಪಾಸ್‌ಪೋರ್ಟ್‌ ರದ್ದು

| N/A | Published : Mar 11 2025, 12:50 AM IST / Updated: Mar 11 2025, 04:12 AM IST

ಸಾರಾಂಶ

ದೇಶಭ್ರಷ್ಟ ಹಾಗೂ ಆರ್ಥಿಕ ಅಪರಾಧಿ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ನೀಡಿದ್ದ ಪಾಸ್‌ಪೋರ್ಟನ್ನು ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಖ್ಯಾತವಾಗಿರುವ ದ್ವೀಪರಾಷ್ಟ್ರ ವನುವಾಟು ರದ್ದುಗೊಳಿಸಿದೆ. ಸದ್ಯ ಬ್ರಿಟನ್‌ನಲ್ಲಿರುವ ಮೋದಿ ವನುವಾಟು ಪೌರತ್ವ ಪಡೆದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

 ಪೋರ್ಟ್ ವಿಲಾ : ದೇಶಭ್ರಷ್ಟ ಹಾಗೂ ಆರ್ಥಿಕ ಅಪರಾಧಿ, ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ನೀಡಿದ್ದ ಪಾಸ್‌ಪೋರ್ಟನ್ನು ‘ತೆರಿಗೆ ವಂಚಕರ ಸ್ವರ್ಗ’ ಎಂದೇ ಖ್ಯಾತವಾಗಿರುವ ದ್ವೀಪರಾಷ್ಟ್ರ ವನುವಾಟು ರದ್ದುಗೊಳಿಸಿದೆ. ಸದ್ಯ ಬ್ರಿಟನ್‌ನಲ್ಲಿರುವ ಮೋದಿ ವನುವಾಟು ಪೌರತ್ವ ಪಡೆದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.

ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸುವಂತೆ ವನುವಾಟು ಪ್ರಧಾನಿ ಜೋಥಮ್ ನಾಪೆಟ್ ಪೌರತ್ವ ಆಯೋಗಕ್ಕೆ ಸೂಚಿಸಿದ್ದಾರೆ. ‘ಲಲಿತ್ ಮೋದಿಯವರು ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಲು ಇಲ್ಲಿನ ಪೌರತ್ವ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ ಪಾಸ್‌ಪೋರ್ಟ್‌ ರದ್ದತಿಗೆ ಸೂಚಿಸಲಾಗಿದೆ’ ಎಂದಿದ್ದಾರೆ. ಅವರ ಪಾಸ್‌ಪೋರ್ಟ್‌ ರದ್ದತಿಗೆ ಭಾರತ ಸರ್ಕಾರ ಮನವಿ ಮಾಡಿತ್ತು. ಹೀಗಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದೇ ವೇಳೆ, ‘ಈ ಕುರಿತು ಯಾವುದೇ ಎಚ್ಚರಿಕೆ ಬಂದಿದ್ದರೂ ತಕ್ಷಣವೇ ಅವರ ಪೌರತ್ವ ಅರ್ಜಿಯನ್ನು ತಿರಸ್ಕರಿಸಲಾಗುತ್ತಿತ್ತು. ಏಕೆಂದರೆ ನಾಗರಿಕತ್ವದ ಅರ್ಜಿ ಪರಿಶೀಲನೆ ವೇಳೆ ಅವರು ಕ್ರಿಮಿನಲ್‌ ಹಿನ್ನೆಲೆಯವರು ಎಂದು ಕಂಡುಬಂದಿರಲಿಲ್ಲ. ಇಂಟರ್‌ಪೋಲ್‌ ಕೂಡ 2 ಬಾರಿ ಭಾರತದ ರೆಡ್‌ಕಾರ್ನರ್‌ ನೊಟಿಸ್‌ ಕೋರಿಕೆಗಳನ್ನು ತಿರಸ್ಕರಿಸಿತ್ತು ಎಂದು ಗೊತ್ತಾಗಿತ್ತು’ ಎಂದು ಪ್ರಧಾನಿ ಪರ ವನುವಾಟು ಸರ್ಕಾರ ಸ್ಪಷ್ಟನೆ ನೀಡಿದೆ.

ಆದರೆ ಈಗ ‘ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಇತ್ತೀಚೆಗೆ ಲಲಿತ್ ಮೋದಿ ವಂಚನೆ ವಿಚಾರ ಬಹುರಂಗಗೊಂಡ ಬಳಿಕ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಪೌರತ್ವ ಆಯೋಗಕ್ಕೆ ಸೂಚಿಸಲಾಗಿದೆ’ ಎಂದು ರಿಪಬ್ಲಿಕ್ ಆಫ್ ವನುವಾಟು ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

‘ವನುವಾಟು ಪಾಸ್‌ಪೋರ್ಟ್ ಹೊಂದಿರುವುದು ಒಂದು ಸವಲತ್ತೇ ಹೊರತು ಹಕ್ಕಲ್ಲ. ಅರ್ಜಿದಾರರು ಕಾನೂನುಬದ್ಧ ಕಾರಣಗಳಿಗಾಗಿ ಪೌರತ್ವವನ್ನು ಪಡೆದುಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದ್ದಾರೆ’ ಎಂದು ಅದು ತಿಳಿಸಿದೆ.

ಐಪಿಎಲ್‌ನ ಅಧ್ಯಕ್ಷರಾಗಿದ್ದಾಗ ಕೋಟ್ಯಂತರ ರು. ವಂಚಿಸಿದ ಪ್ರಕರಣದಲ್ಲಿ ಲಲಿತ್ ಮೋದಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾರೆ. ಅವರು 2010ರಲ್ಲಿ ಭಾರತ ಬಿಟ್ಟು ಲಂಡನ್‌ಗೆ ಪರಾರಿಯಾಗಿದ್ದರು. ಇತ್ತೀಚೆಗಷ್ಟೇ ಅವರು, ತಮ್ಮ ಭಾರತೀಯ ಪಾಸ್‌ಪೋರ್ಟ್ ರದ್ದತಿಗೆ ಬ್ರಿಟನ್‌ನಲ್ಲಿನ ಭಾರತೀಯ ದೂತಾವಾಸಕ್ಕೆ ಅರ್ಜಿ ಸಲ್ಲಿಸಿದಾಗ ತೆರಿಗೆಮುಕ್ತ ವನುವಾಟು ದೇಶದ ಪೌರತ್ವ ಪಡೆದ ವಿಚಾರ ಬಹಿರಂಗವಾಗಿತ್ತು.

ವನುವಾಟು ದೇಶದಲ್ಲಿ ಭಾರತದ ದೂತಾವಾಸವಿಲ್ಲ. ನ್ಯೂಜಿಲೆಂಡ್‌ ದೂತಾವಾಸವೇ ಅಲ್ಲಿನ ವ್ಯವಹಾರ ನೋಡಿಕೊಳ್ಳುತ್ತದೆ.

ಇನ್ನೂ ರದ್ದಾಗಿಲ್ಲ- ಲಮೋ:

ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಲಲಿತ್‌ ಮೋದಿ, ‘ನಾನು ತಪ್ಪಿತಸ್ಥ ಎಂದು ಕೋರ್ಟ್‌ ಆದೇಶಿಸಿದರೆ ಮಾತ್ರ ಪಾಸ್‌ಪೋರ್ಟ್‌ ಹಾಗೂ ಪೌರತ್ವ ರದ್ದುಪಡಿಸುತ್ತೇವೆ ಎಂದು ವನುವಾಟು ಪೌರತ್ವ ಆಯೋಗ ನನಗೆ ತಿಳಿಸಿದೆ’ ಎಂದಿದ್ದಾರೆ.