ಸಾರಾಂಶ
ಪಿಟಿಐ ವಾರಾಣಸಿ
ಕಾಶಿ ವಿಶ್ವನಾಥ ಮಂದಿರ ಪಕ್ಕದ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿನ ‘ಹಿಂದೂ ಕುರುಹು’ಗಳ ಅಧ್ಯಯನ ಮಾಡಿರುವ ಎಎಸ್‌ಐ ಸಮೀಕ್ಷಾ ವರದಿಯನ್ನು ವಿವಾದದ ಉಭಯ ಪಕ್ಷಗಾರರಿಗೆ ನೀಡಲಾಗುವುದು ಎಂದು ವಾರಾಣಾಸಿ ನ್ಯಾಯಾಲಯ ಬುಧವಾರ ಆದೇಶ ಪ್ರಕಟಿಸಿದೆ.
ಆದರೆ ವರದಿಯನ್ನು ಬಹಿರಂಗಪಡಿಸಬಾರದು ಎಂದು ತಾಕೀತು ಮಾಡಿದೆ.ಹಿಂದೂ ಮತ್ತು ಮುಸ್ಲಿಂ ಎರಡೂ ಪಕ್ಷಗಳು ವರದಿಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅಫಿಡವಿಟ್ ನೀಡಬೇಕು.
ಅದನ್ನು ಸಾರ್ವಜನಿಕಗೊಳಿಸಬಾರದು ಎಂದು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಆದೇಶಿಸಿದರು ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿದರು. ಕೇವಲ ಅಧ್ಯಯನ ಉದ್ದೇಶಕ್ಕೆ ಮಾತ್ರ ಪಕ್ಷಗಾರರಿಗೆ ವರದಿ ನೀಡಲಾಗಿದೆ.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯ ಕೆಡವಿ ನಿರ್ಮಿಸಲಾಗಿದೆ ಎಂದು ಹಿಂದೂ ಪರ ದಾವೆದಾರರು ಅರ್ಜಿ ಹಾಕಿದ್ದರು.
ಹೀಗಾಗಿ ಇದು ನಿಜವೇ ಎಂದು ಅರಿಯಲು ಜಿಲ್ಲಾ ಕೋರ್ಟು ಎಎಸ್‌ಐ (ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ) ಸಮೀಕ್ಷೆಗೆ ಆದೇಶಿಸಿತ್ತು. ಜು.21ರಂದು ಎಎಸ್ಐ, ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಿತ್ತು.
ಆದರೆ ಶಿವಲಿಂಗಾಕೃತಿಯ ಶಿಲೆ ಪತ್ತೆಯಾಗಿದ್ದ ಕಾರಂಜಿಯನ್ನು ಸಮೀಕ್ಷೆಗೆ ಕೋರ್ಟ್ ಅನುಮತಿ ನೀಡಿರಲಿಲ್ಲ.ಬಳಿಕ ಎಎಸ್‌ಐ ಇತ್ತೀಚೆಗೆ ಸಮೀಕ್ಷಾ ವರದಿ ಸಲ್ಲಿಸಿತ್ತು. ಈ ವರದಿಯ ಹಾರ್ಡ್ ಪ್ರತಿಗಳನ್ನು ಕಕ್ಷಿದಾರರಿಗೆ ನೀಡಲು ಜಿಲ್ಲಾ ಕೋರ್ಟ್ ಬುಧವಾರ ಆದೇಶಿಸಿತು.