ಸಾರಾಂಶ
ಹೈದರಾಬಾದ್ : ಕರ್ನಾಟಕದ ಹುಬ್ಬಳ್ಳಿ ಮೂಲದವರಾದ ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ಅವರನ್ನು ಹೈದರಾಬಾದ್ ಪೊಲೀಸ್ ಕಮಿಷನರ್ ಹುದ್ದೆಗೆ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿ.ಸಿ. ಸಜ್ಜನರ್ ಅವರು ಈವರೆಗೆ ತೆಲಂಗಾಣ ರಸ್ತೆ ಸಾರಿಗೆ ವಿಭಾಗದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ದಕ್ಷತೆಗೆ ಹೆಸರಾಗಿದ್ದ ಅವರು ಸಾರಿಗೆ ಇಲಾಖೆಯಲ್ಲಿ ಲಾಭದ ಹಳಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2019ರಲ್ಲಿ ತೆಲಂಗಾಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಸೈಬರಾಬಾದ್ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾ*ರ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಎನ್‌ಕೌಂಟರ್ ನಡೆದಿತ್ತು. ಈ ವೇಳೆ ಸಜ್ಜನ್ ಅಲ್ಲಿನ ಪೊಲೀಸ್ ಕಮಿಷನರ್ ಆಗಿದ್ದರು ಹಾಗೂ ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಪಡೆದಿದ್ದರು.
ಮೂಲತಃ ಹುಬ್ಬಳ್ಳಿಯವರು:
ಆಂಧ್ರಪ್ರದೇಶ ಕೇಡರ್‌ನ 1996 ಬ್ಯಾಚ್ ಅಧಿಕಾರಿಯಾಗಿದ್ದ ಇವರು ಮೂಲತಃ ಕರ್ನಾಟಕದ ಹುಬ್ಬಳ್ಳಿಯವರು. ಹುಬ್ಬಳ್ಳಿಯ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದರು.