ಸಾರಾಂಶ
ನವದೆಹಲಿ: ಬಹುಭಾಷಾ ಪಂಡಿತ, ವಾಗ್ಮಿ, ಸಂವಾದಿ ಫೈರ್‌ಬ್ರ್ಯಾಂಡ್ ನಾಯಕ ಸೀತಾರಾಂ ಯೆಚೂರಿ (72) ಗುರುವಾರ ಇಲ್ಲಿ ನಿಧನರಾದರು. ಶ್ವಾಸಕೋಶ ಸಮಸ್ಯೆಯಿಂದ ಬಳುತ್ತಿದ್ದ ಯೆಚೂರಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಬುಧವಾರ ಮಧ್ಯಾಹ್ನ ಕೊನೆಯುಸಿರೆಳೆದರು.
ಯೆಚೂರಿ, ಪತ್ನಿ (ವೈರ್ ಸಂಪಾದಕಿ ಸೀಮಾ ಚಿಸ್ತಿ) ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.ಯೆಚೂರಿ ನಿಧನಕ್ಕೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್ ಆದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.
ಬಾಲ್ಯ ಮತ್ತು ರಾಜಕೀಯ: 1952ರಲ್ಲಿ ಚೆನ್ನೈನಲ್ಲಿ ಜನಿಸಿದ ಯೆಚೂರಿ, ಬಾಲ್ಯದ ವಿದ್ಯಾಭ್ಯಾಸವನ್ನು ಹೈದರಾಬಾದ್‌ನಲ್ಲಿ ನಡೆಸಿದರು. ಈ ವೇಳೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಹೋರಾಟ ತೀವ್ರಗೊಂಡ ಕಾರಣ ದೆಹಲಿಗೆ ತೆರಳಿ ಅಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಸಿಬಿಎಸ್‌ಇನಲ್ಲಿ ಟಾಪರ್ ಆಗಿದ್ದ ಯೆಚೂರಿ ಜೆಎನ್‌ಯು ವಿವಿಯಲ್ಲಿ ಯುವ ನಾಯಕನಾಗಿ ಹೊರಹೊಮ್ಮಿದರು.
ಅಲ್ಲಿಯೇ ತಮ್ಮ ಮೊದಲ ರಾಜಕೀಯ ಪಯಣ ಶುರುಮಾಡಿದ ಅವರು, 1974ರಲ್ಲಿ ಎಸ್‌ಎಫ್‌ಐ, 75ರಲ್ಲಿ ಸಿಪಿಎಂ ಸೇರಿದರು. ತುರ್ತು ಪರಿಸ್ಥಿತಿ ವೇಳೆ ಜೈಲುವಾಸ ಅನುಭವಿಸಿದರು. 2005ರಿಂದ 2017ರವರೆಗೆ ರಾಜ್ಯಸಭೆ ಸಂಸದರಾಗಿದ್ದರು. 2015ರಿಂದ ಮೂರು ಬಾರಿ ಪಕ್ಷದ ಅತ್ಯುನ್ನತ ಹುದ್ದೆಯಾದ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು.