14 ವರ್ಷಗಳ ಎನ್‌ಐಎ ಹೋರಾಟಕ್ಕೆ ಸಿಕ್ಕಿತು ಫಲ : ಗಡೀಪಾರು ತಪ್ಪಿಸಿಕೊಳ್ಳುವ ರಾಣಾನ ಎಲ್ಲಾ ಯತ್ನ ವಿಫಲ

| N/A | Published : Apr 11 2025, 12:33 AM IST / Updated: Apr 11 2025, 04:44 AM IST

ಸಾರಾಂಶ

ತಹಾವುರ್‌ ರಾಣಾನ ಗಡೀಪಾರಿನೊಂದಿಗೆ ಈ ಬಗ್ಗೆ 14 ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಹೋರಾಟಕ್ಕೆ ಯಶಸ್ಸು ಸಿಕ್ಕಿದಂತಾಗಿದೆ.

ನವದೆಹಲಿ: ತಹಾವುರ್‌ ರಾಣಾನ ಗಡೀಪಾರಿನೊಂದಿಗೆ ಈ ಬಗ್ಗೆ 14 ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಹೋರಾಟಕ್ಕೆ ಯಶಸ್ಸು ಸಿಕ್ಕಿದಂತಾಗಿದೆ.

2008ರಲ್ಲಿ ಮುಂಬೈ ನಡೆದ ಸರಣಿ ದಾಳಿ ಪ್ರಕರಣ ನಡೆದ ಮಾರನೇ ವರ್ಷ ಲಷ್ಕರ್‌ ಜೊತೆ ನಂಟು ಮತ್ತು ಡೆನ್ಮಾರ್ಕ್ ಪತ್ರಿಕೆಯೊಂದರ ಮೇಲೆ ನಡೆದ ದಾಳಿ ಪ್ರಕರಣ ಸಂಬಂಧ ಅಮೆರಿಕದಲ್ಲಿ ರಾಣಾನನ್ನು ಬಂಧಿಸಲಾಗಿತ್ತು. ಇನ್ನೊಂದೆಡೆ ಮುಂಬೈ ದಾಳಿ ಕುರಿತು 2009ರಲ್ಲಿ ಎನ್‌ಐಎ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ರಾಣಾನ ಹೆಸರು ಸೇರಿಸಿರಲಿಲ್ಲ.

ಆದರೆ ಹೆಚ್ಚಿನ ತನಿಖೆಯಲ್ಲಿ ಈತನ ಪಾತ್ರ ಬೆಳಕಿಗೆ ಬಂದ ಮೇಲೆ 2011ರಲ್ಲಿ ಸಲ್ಲಿಸಿದ್ದ ಹೊಸ ಆರೋಪಟ್ಟಿಯಲ್ಲಿ ರಾಣಾನ ಹೆಸರನ್ನು ಎನ್‌ಐಎ ಸೇರಿಸಿತ್ತು.

2011ರಲ್ಲಿ ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ರಾಣಾ ಹೆಸರು ಮೊದಲ ಬಾರಿ ಕಂಡುಬಂದಿತ್ತು. ಜೊತೆಗೆ ಇದೇ ಪ್ರಕರಣದಲ್ಲಿ ಬಂಧಿತ ಹೆಡ್ಲಿ ಕೂಡಾ ಸಂಚಿನಲ್ಲಿ ರಾಣಾನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದ. ಹೀಗಾಗಿ ಆತನ ಗಡೀಪಾರಿಗೆ ಎನ್‌ಐಎ ಕಾನೂನು ಹೋರಾಟ ಆರಂಭಿಸಿತ್ತು.

2019ರಲ್ಲಿ, ರಾಣಾನನ್ನು ಗಡೀಪಾರು ಮಾಡುವಂತೆ ಭಾರತೀಯ ಅಧಿಕಾರಿಗಳು ಅಮೆರಿಕದ ಬಳಿ ಕೇಳಿದ್ದರು. ಇದಕ್ಕೆ ಸ್ಪಂದಿಸಿದ ಕ್ಯಾಲಿಫೋರ್ನಿಯ ಕೋರ್ಟ್‌, ಆತನ ತಾತ್ಕಾಲಿಕ ಬಂಧನ ವಾರಂಟ್‌ಗೆ ಸಹಿ ಹಾಕಿತು. ಆದರೆ ಇದನ್ನು ವಿರೋಧಿಸಿದ ರಾಣಾ, ‘ನನ್ನನ್ನು ಈಗಾಗಲೇ ಇಂತಹ ಪ್ರಕರಣಗಳಲ್ಲಿ ವಿಚಾರಣೆ ನಡೆಸಿಯಾಗಿದೆ. ಈಗ ಮತ್ತೆ ಕಾನೂನು ಕ್ರಮ ಜರುಗಿಸುವುದು ಕಾನೂನುಬಾಹಿರ’ ಎಂದು ವಾದಿಸಿದ್ದ. ಬಳಿಕ, ತನ್ನನ್ನು ಗಡೀಪಾರು ಮಾಡದಂತೆ ನ್ಯಾಯಾಲಯಗಳಲ್ಲೂ ಕೋರಿದ್ದ. ಆದರೆ ಕೋರ್ಟ್‌ ಆತನ ಮನವಿಯನ್ನು ತಿರಸ್ಕರಿಸಿತ್ತು.