ಸಾರಾಂಶ
ನವದೆಹಲಿ:‘12th ಫೇಲ್’ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ಹಾಗೂ ಈಗ ‘ಸಾಬರಮತಿ’ ಚಿತ್ರದ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್ ನಟ ವಿಕ್ರಾಂತ್ ಮೈಸಿ ನಟನೆಗೆ ವಿದಾಯ ಘೋಷಿಸಿದ್ದಾರೆ.
ತಮ್ಮ ವಿದಾಯದ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿರುವ ಅವರು, ‘ನಾನು ಮುಂದೆ ಹೋಗಬೇಕಿದೆ. ಮನೆಗೆ ಹಿಂದಿರುಗಲು ಇದು ಸೂಕ್ತ ಸಮಯ. ಒಬ್ಬ ಗಂಡನಾಗಿ, ತಂದೆಯಾಗಿ, ನಟನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತೇನೆ. 2025ರಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗೋಣ. ಎರಡು ಸಿನಿಮಾಗಳು ಮತ್ತು ಹಲವು ವರ್ಷಗಳ ನೆನಪುಗಳು ನನ್ನೊಂದಿಗೆ ಇವೆ. ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ.ಅವರ ಅಭಿನಯದ ‘ದಿ ಸಾಬರಮತಿ ರಿಪೋರ್ಟ್’ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ನಡುವೆಯೇ ಮಾಸಿ ದಿಢೀರ್ ವಿದಾಯ ಹೇಳಿದ್ದಾರೆ. ಕಿರುತೆರೆ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದ ವಿಕ್ರಾಂತ್ , ‘ಬಾಲಿಕಾ ವಧು’, ‘ಕುಬೂಲ್ ಹೈ ’ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ್ದರು.
ದಿಲ್ಲಿಯಲ್ಲಿ ಎಕ್ಯುಐ ಇಳಿವವರೆಗೂ ನಿರ್ಬಂಧ ಸಡಿಲಿಕೆ ಇಲ್ಲ: ಸುಪ್ರೀಂ
ನವದೆಹಲಿ: ದಿಲ್ಲಿಯಲ್ಲಿ ವಾಯುಗುಣಮಟ್ಟ (ಎಕ್ಯುಐ) ಸುಧಾರಿಸುತ್ತಿದೆ ಎಂದು ಮನವರಿಕೆ ಆಗುವವರೆಗೂ ಗ್ರಾಪ್ 4 ನಿರ್ಬಂಧಗಳನ್ನು ಸಡಿಲಿಸಲ್ಲ ಎಂದು ಸೋಮವಾರ ಸುಪ್ರೀಂ ಕೋರ್ಟ್ ತಿಳಿಸಿದೆ.ಸೋಮವಾರ ದಿಲ್ಲಿ ಮಾಲಿನ್ಯದ ವಿಚಾರಣೆ ನಡೆಸಿದ ಪೀಠವು ದಿಲ್ಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟಲು ಗ್ರಾಪ್ 4 ನೇ ಹಂತ ಅಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಗ್ರಾಫ್-4 ಅನ್ವಯ ಡೀಸೆಲ್ ವಾಹನ ಸಂಚಾರ, ಕಟ್ಟಡ ನಿರ್ಮಾಣ ನಿಷೇಧ ಇದ್ದು, ಶಾಲೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ. ನೌಕರರು ವರ್ಕ್ ಫ್ರಂ ಹೋಂ ಮಾಡುತ್ತಾರೆ.
ಈ ನಡುವೆ, ನಿರ್ಬಂಧ ಇರುವ ಕಾರಣ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲ. ಅವರಿಗೆ ಪರಿಹಾರ ನೀಡಲು ತಾನು ಸೂಚಿಸಿದ್ದರೂ ನೀಡಿಲ್ಲ ಎಂದು ಕೋರ್ಟ್ ಕಿಡಿಕಾರಿತು.
ಭಾರತಕ್ಕೆ ಬೇಕಾಗಿದ್ದ ಖಲಿಸ್ತಾನಿ ಉಗ್ರ ಡಲ್ಲಾಗೆ ಕೆನಡಾದಲ್ಲಿ ಜಾಮೀನು
ಒಟ್ಟಾವಾ: ಇತ್ತೀಚೆಗೆ ಕೆನಡಾದಲ್ಲಿ ಬಂಧಿತನಾಗಿದ್ದ ಭಾರತಕ್ಕೆ ಬೇಕಾಗಿರುವ ಖಲಿಸ್ತಾನಿ ಭಯೋತ್ಪಾದಕ ಅರ್ಶ್ ಡಲ್ಲಾ ಅಲಿಯಾಸ್ ಅರ್ಶ್‌ದೀಪ್ ಸಿಂಗ್ ಗಿಲ್‌ಗೆ ಜಾಮೀನು ಲಭಿಸಿದೆ.ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆನಡಾದ ಒಂಟಾರಿಯೊದ ಮಿಲ್ಟನ್‌ನಲ್ಲಿ ಸಶಸ್ತ್ರ ಘರ್ಷಣೆಯಲ್ಲಿ ಶಂಕಿತ ಭಾಗಿಯಾಗಿದ್ದಕ್ಕಾಗಿ ಖಾಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಸಂಘಟನೆಯ ಮುಖ್ಯಸ್ಥ ಆಗಿರುವ ಡಲ್ಲಾನನ್ನು ಇತ್ತೀಚೆಗೆ ಕೆನಡಾದಲ್ಲಿ ಬಂಧಿಸಲಾಗಿತ್ತು.
ಈ ಹಿಂದೆ ಜುಲೈ 2023ರಲ್ಲಿ ಭಾರತ ಸರ್ಕಾರವು ಕೆನಡಾ ಸರ್ಕಾರಕ್ಕೆ ಆತನನ್ನು ಬಂಧಿಸಲು ವಿನಂತಿಸಿತ್ತು. ಹೀಗಾಗಿ ಡಲ್ಲಾ ಬಂಧನವು ಭಾರತದ ಆಶಾವಾದಕ್ಕೆ ಕಾರಣವಾಗಿತ್ತು. ಅಷ್ಟರಲ್ಲೇ ಆತನಿಗೆ ಜಾಮೀನು ಸಿಕ್ಕಿದೆ.
ಜಾಮೀನು ಸಿಕ್ಕ ಮರುದಿನವೇ ಬಾಲಾಜಿಗೆ ಮಂತ್ರಿಗಿರಿ: ಸುಪ್ರೀಂ ಅಚ್ಚರಿ
ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಜಾಮೀನು ಸಿಕ್ಕ ಮರುದಿನಬವೇ ತಮಿಳುನಾಡಿನಲ್ಲಿ ಸಚಿವರಾಗಿ ನೇಮಕಗೊಂಡಿರುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಅಚ್ಚರಿ ವ್ಯಕ್ತಪಡಿಸಿದೆ. ಅಲ್ಲದೆ, ತನ್ನ ಕ್ರಮದ ಬಳಿಕ ಸಾಕ್ಷಿಗಳು ಬೆದರಿಕೆಗೆ ಒಳಗಾಗಿರಬಹುದೇ ಎಂಬ ವಿಷಯವನ್ನು ಪರಿಶೀಲಿಸುವುದಾಗಿ ಅದು ಹೇಳಿದೆ.ಬಾಲಾಜಿ ಬಿಡುಗಡೆಯಿಂದ ಹಾಗೂ ಸಚಿವ ಸ್ಥಾನ ಅಲಂಕರಿಸಿದ ಕಾರಣ ಸಾಕ್ಷಿಗಳು ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಾಗಿ ಜಾಮೀನು ರದ್ದು ಮಾಡಬೇಕು ಎಂದು ಅರ್ಜಿಯೊಂದು ಸಲ್ಲಿಕೆ ಆಗಿದೆ. ಅದರ ವಿಚಾರಣೆ ನಡೆಸಿದ ಪೀಠ, ಸದ್ಯಕ್ಕೆ ಜಾಮೀನು ರದ್ದುಪಡಿಸಲು ನಿರಾಕರಿಸಿತು. ಆದರೆ ಅರ್ಜಿ ಪರಿಶೀಲನೆಗೆ ಒಪ್ಪಿತು.