ಸಾರಾಂಶ
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಏಕಹಂತದ ಚುನಾವಣೆ ಹಾಗೂ ಜಾರ್ಖಂಡ್ ವಿಧಾನಸಭೆಗೆ 2ನೇ ಹಂತದ ಚುನಾವಣೆ ಬುಧವಾರ ನಡೆಯಲಿವೆ. ಇದೇ ವೇಳೆ, ಉತ್ತರಾಖಂಡ, ಉತ್ತರ ಪ್ರದೇಶ, ಕೇರಳ ಹಾಗೂ ಪಂಜಾಬ್‌ನ 15 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ಕೂಡ ನಡೆಯಲಿವೆ.
ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮಹಾಯುತಿ ಕೂಟ ಹಾಗೂ ವಿಪಕ್ಷ ಮಹಾ ವಿಕಾಸ ಅಘಾಡಿ ಕೂಟಗಳ ನಡುವೆ ಭಾರಿ ಹಣಾಹಣಿ ಇದೆ. 4,136 ಅಭ್ಯರ್ಥಿಗಳು ಕಣದಲ್ಲಿದ್ದು, 9.7 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.ಇನ್ನು 81 ಕ್ಷೇತ್ರಗಳಿರುವ ಜಾರ್ಖಂಡ್ ವಿಧಾನಸಭೆ ಚುನಾವಣೆಯ 2ನೇ ಹಂತದಲ್ಲಿ 38 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಎಂಎಂ-ಕಾಂಗ್ರೆಸ್ ನಡುವೆ ಪೈಪೋಟಿ ಇದೆ. 2ನೇ ಹಂತದಲ್ಲಿ 528 ಅಭ್ಯರ್ಥಿಗಳಿದ್ದು, 1.23 ಕೋಟಿ ಮತದಾರರಿದ್ದಾರೆ.
ಎಲ್ಲ ಕಡೆ ನ.23ರಂದು ಫಲಿತಾಂಶ ಪ್ರಕಟವಾಗಲಿದೆ.==
ಬಿಜೆಪಿ ನಾಯಕ ತಾವ್ಡೆಯಿಂದ ಹಣ ಹಂಚಿಕೆ: ವಿವಾದಮುಂಬೈ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಪಾಲ್ಘರ್ ಜಿಲ್ಲೆಯ ವಿಧಾನಸಭೆ ಕ್ಷೇತ್ರವೊಂದರಲ್ಲಿ ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಬಿಜೆಪಿ ಅಭ್ಯರ್ಥಿ ಹೋಟೆಲ್‌ನಲ್ಲಿ ಹಣದ ಪ್ಯಾಕೆಟ್ ಹಂಚುತ್ತಿದ್ದರು. ಅವರ ಜತೆ ತಾವ್ಡೆ ಹಣದ ವಿವರದ ಡೈರಿ ಹೊಂದಿದ್ದರು ಎಂದು ಬಹುಜನ ವಿಕಾಸ ಅಘಾಡಿಯ (ಬಿವಿಎ) ನಾಯಕ ಹಿತೇಂದ್ರ ಠಾಕೂರ್ ಮಂಗಳವಾರ ಆರೋಪಿಸಿದ್ದಾರೆ. ತಾವ್ಡೆ ಕೂತಿದ್ದ ಟೇಬಲ್ ಮುಂದೆ ಹಣದ ಕಂತೆ ಇದ್ದ ವಿಡಿಯೋ ಹಾಗೂ ಬಿವಿಎ ಕಾರ್ಯಕರ್ತರು ಅವರ ಮುಂದೆ ಹಣದ ಕಂತೆಗಳನ್ನು ಪ್ರದರ್ಶಿಸುವ ವಿಡಿಯೋ ವೈರಲ್ ಆಗಿದೆ.ಆದರೆ ಬಿಜೆಪಿ ಈ ಆರೋಪವನ್ನು ಅಲ್ಲಗಳೆದಿದೆ. ಹಣ ಬಿಜೆಪಿಗೆ ಸೇರಿದ್ದಲ್ಲ. ಇದು ಚುನಾವಣಾ ತಂತ್ರವಲ್ಲದೆ ಮತ್ತೇನೂ ಅಲ್ಲ. ಸೋಲುವ ಭೀತಿಯಿಂದ ಮಹಾ ವಿಕಾಸ ಅಘಾಡಿ (ಎಂವಿಎ) ಹೀಗೆ ಆರೋಪ ಮಾಡುತ್ತಿದೆ. ಈ ಬಗ್ಗೆ ಆಯೋಗ ತನಿಖೆ ನಡೆಸಲಿ ಎಂದು ಹೇಳಿದೆ.ಇದರ ನಡುವೆ ತಾವ್ಡೆ ಇದ್ದ ಹೋಟೆಲ್‌ನಲ್ಲಿನ ಕೋಣೆಗಳಲ್ಲಿ 9 ಲಕ್ಷ ರು. ನಗದನ್ನು ಚುನಾವಣಾ ಅಯೋಗ ಜಪ್ತಿ ಮಾಡಿದೆ.