ವಕ್ಫ್‌ ಸಭೆ ವೇಳೆ ಹೈಡ್ರಾಮಾ: ಗ್ಲಾಸ್‌ ಒಡೆದು ಪೀಠದತ್ತ ಎಸೆದ ಬ್ಯಾನರ್ಜಿ!

| Published : Oct 23 2024, 12:52 AM IST / Updated: Oct 23 2024, 12:53 AM IST

ವಕ್ಫ್‌ ಸಭೆ ವೇಳೆ ಹೈಡ್ರಾಮಾ: ಗ್ಲಾಸ್‌ ಒಡೆದು ಪೀಠದತ್ತ ಎಸೆದ ಬ್ಯಾನರ್ಜಿ!
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್‌ ತಿದ್ದುಪಡಿ ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ಮಂಗಳವಾರ ಹೈಡ್ರಾಮಾ ನಡೆದಿದ್ದು, ಸಭೆ ವೇಳೆ ಬಿಜೆಪಿ ಸದಸ್ಯನ ಮಾತಿನಿಂದ ಕೋಪಗೊಂಡ ತೃಣಮೂಲ ಕಾಂಗ್ರೆಸ್‌ ಸಂಸದ ಕಲ್ಯಾಣ್‌ ಬ್ಯಾನರ್ಜಿ, ಅಲ್ಲೇ ಇದ್ದ ಗಾಜಿನ ಲೋಟ ಒಡೆದು ಅದನ್ನು ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರತ್ತ ಎಸೆದ ಪ್ರಸಂಗ ನಡೆದಿದೆ.

ಪಿಟಿಐ ನವದೆಹಲಿ

ಘಟನೆಯಲ್ಲಿ ಕಲ್ಯಾಣ್‌ ಬೆರಳುಗಳಿಗೆ ಗಾಯಗಳಾಗಿವೆ. ಆದರೆ ಅನುಚಿತವಾಗಿ ವರ್ತಿಸಿದರು ಎಂದು ಆರೋಪಿಸಿ ಮುಂದಿನ ವಕ್ಫ್‌ ಸಭೆಯಿಂದ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

ಆಗಿದ್ದೇನು?:ಕ್ಫ್‌ ಸದನ ಸಮಿತಿ ಸಭೆ ನಡೆಯುತ್ತಿದ್ದ ವೇಳೆ ಮೊದಲು ಕಲ್ಯಾಣ್‌ ಬ್ಯಾನರ್ಜಿ ಭಾಷಣಕ್ಕೆ ಹಾಗೂ ನಂತರ ಇತರರ ಭಾಷಣಕ್ಕೆ ಅವಕಾಶ ನೀಡಲಾಗಿತ್ತು. ಇತರರು ಮಾತನಾಡುವಾಗ ಮಧ್ಯಪ್ರವೇಶಕ್ಕೆ ಬ್ಯಾನರ್ಜಿಗೆ ಅಧ್ಯಕ್ಷ ಪಾಲ್‌ ಅವಕಾಶ ನೀಡಿದ್ದರು. ಈ ವೇಳೆ ಬಿಜೆಪಿ ಸದಸ್ಯ ಹಾಗೂ ಕಲ್ಕತ್ತಾ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಅಭಿಜಿತ್‌ ಗಂಗೋಪಾಧ್ಯಯ ಆಡಿದರು ಎನ್ನಲಾದ ಮಾತಿಗೆ ಬ್ಯಾನರ್ಜಿ ಕೆರಳಿದ್ದಾರೆ. ಆಗ ಬ್ಯಾನರ್ಜಿ ಕೂಡ ಕೆಲವು ಪದಗಳನ್ನು ಗಂಗೋಪಾಧ್ಯಾಯ ವಿರುದ್ಧ ಪ್ರಯೋಗಿಸಿದ್ದಾರೆ.

ಆವೇಶದ ಭರದಲ್ಲಿ ಆಗ ಅಲ್ಲೇ ನೀರಿದ್ದ ಗಾಜಿನ ಲೋಟವನ್ನು ಬ್ಯಾನರ್ಜಿ ಟೇಬಲ್‌ ಮೇಲೆ ಕುಕ್ಕಿ ಒಡೆದು ಹಾಕಿದ್ದಾರೆ ಹಾಗೂ ಅದರ ತುಣುಕನ್ನು ಸಮಿತಿ ಅಧ್ಯಕ್ಷ ಪಾಲ್‌ ಅವರತ್ತ ಎಸೆದಿದ್ದಾರೆ ಎಂದು ಗೊತ್ತಾಗಿದೆ. ಗಾಜು ಒಡೆದು ಕಲ್ಯಾಣ್‌ ಬೆರಳಿಗೆ ಚುಚ್ಚಿ ಗಾಯಗಳಾಗಿವೆ. ಆದರೆ ಪಾಲ್‌ಗೆ ಏನೂ ಆಗಿಲ್ಲ.

ರಕ್ತ ಸೋರುತ್ತಿದ್ದ ಕಾರಣ ಸ್ಥಳದಲ್ಲೇ ಬ್ಯಾನರ್ಜಿಗೆ 4 ಹೊಲಿಗೆ ಹಾಕಿ ಡ್ರೆಸ್ಸಿಂಗ್ ಮಾಡಲಾಯಿತು. ಬಲಗೈಗೆ ಏಟಾಗಿದ್ದರಿಂದ ಅಧಿಕಾರಿಗಳೇ ಅವರಿಗೆ ಸೂಪ್‌ ಕುಡಿಸಿದರು. ಬಳಿಕ ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಮತ್ತು ಆಪ್‌ ನಾಯಕ ಸಂಜಯ್ ಸಿಂಗ್ ಅವರು ಕಲ್ಯಾಣ್‌ ಬ್ಯಾನರ್ಜಿ ಅವರ ಕೈ ಹಿಡಿದು ಹೊರಗೆ ಕರೆದೊಯ್ದರು.