ಸಾರಾಂಶ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆ ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿಯ ಕೊನೆ ಸಭೆ ಸೋಮವಾರ ನಡೆದಿದ್ದು, ಆಡಳಿತ ಪಕ್ಷ ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಮತದಾನದ ಮೂಲಕ ಅಂಗೀಕರಿಸಲಾಗಿದೆ. ಅಂತೆಯೇ, ವಿಪಕ್ಷಗಳ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ.
ಈ ಕುರಿತು ಮಾತನಾಡಿದ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್, ‘ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳು ಸೂಚಿಸಿದ್ದ 14 ತಿದ್ದುಪಡಿಗಳನ್ನು ಅಂಗೀಕರಿಸಲಾಗಿದ್ದು, 44 ನಿಯಮಗಳಲ್ಲಿ ತಿದ್ದುಪಡಿ ಮಾಡುವ ವಿಪಕ್ಷದ ಸದಸ್ಯರ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ’ ಎಂದರು.
ಈ ನಡುವೆ ತಿದ್ದುಪಡಿ ಅನುಮೋದನೆ ಪ್ರಕ್ರಿಯೆಯನ್ನು ಪಾಲ್ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಸಿಲ್ಲ ಎಂದು ವಿಪಕ್ಷದ ಸದಸ್ಯರು ಆರೋಪಿಸಿದ್ದರೆ, ಆರೋಪವನ್ನು ನಿರಾಕರಿಸಿದ ಪಾಲ್, ‘ತಿದ್ದುಪಡಿಗಳನ್ನು ಎಲ್ಲರ ಅನುಮತಿಯೊಂದಿಗೇ ಅನುಮೋದಿಸಲಾಗಿದೆ’ ಎಂದಿದ್ದಾರೆ.
ಹೀಗೆ ಸಿದ್ಧಗೊಂಡಿರುವ ಮಸೂದೆಯನ್ನು ಜೆಪಿಸಿ ಬುಧವಾರ ಅಂಗೀಕರಿಸಲಿದ್ದು, ಬಳಿಕ ಬಜೆಟ್ ಅಧಿವೇಶನದಲ್ಲಿ ಲೋಕಸಭೆಗೆ ಮಸೂದೆಯನ್ನು ಸಮಿತಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಕ್ಫ್ ಮಂಡಳಿಗೆ ಒಂದಷ್ಟು ರಿಲೀಫ್
ವಕ್ಫ್ ಮಂಡಳಿಗೆ ದಾನವಾಗಿ ನೀಡಿದ್ದ ಆಸ್ತಿ ಕುರಿತು ಯಾವುದೇ ವಿವಾದ ಇಲ್ಲದೇ ಹೋದ ಪಕ್ಷದಲ್ಲಿ ಅಥವಾ ಅಂಥ ಆಸ್ತಿಯಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳು ಇಲ್ಲದೇ ಹೋದಲ್ಲಿ, ಅದನ್ನು ಹೊಸ ಕಾಯ್ದೆ ಜಾರಿಯ ಒಳಗೆ ವಕ್ಫ್ ಮಂಡಳಿ ಹೆಸರಲ್ಲಿ ನೋಂದಣಿ ಮಾಡುವ ಅವಕಾಶವನ್ನು ಜೆಪಿಸಿ ಕಲ್ಪಿಸಿದೆ. ಹೀಗಾಗಿ ಒಂದು ವೇಳೆ ಅಂಥ ಯಾವುದಾದರೂ ಆಸ್ತಿ ಇದ್ದು ಅದು ನೋಂದಣಿಯಾಗದೇ ಇದ್ದಲ್ಲಿ ಅದನ್ನು ನೋಂದಣಿ ಮಾಡಿಸುವ ಅವಕಾಶ ಲಭ್ಯವಾಗಲಿದೆ.
ಜೊತೆಗೆ ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಯೋಜನೆ ಜಾರಿ ಕಡ್ಡಾಯ ಎಂಬ ಅಂಶಗಳನ್ನು ಕೈಬಿಟ್ಟು ಅದನ್ನು ವಕ್ಫ್ ಮಂಡಳಿಯ ವಿವೇಚನೆಗೂ ಬಿಡಲು ಸಮಿತಿ ನಿರ್ಧರಿಸಿದೆ.
ಏನೇನು ತಿದ್ದುಪಡಿ ಅಂಗೀಕಾರಶಾಸನಬದ್ಧವಾಗಿ ವಕ್ಫ್ ಮಂಡಳಿಯಲ್ಲಿ ಇರುವ ಸದಸ್ಯರ ಜೊತೆಗೆ 4 ಮುಸ್ಲಿಮೇತರ ಸದಸ್ಯರ ನೇಮಕಕ್ಕೆ ಅವಕಾಶ
ಕಳೆದ 5 ವರ್ಷಗಳಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದವರು ಮಾತ್ರ ತಮ್ಮ ಆಸ್ತಿ ವಕ್ಫ್ ಮಂಡಳಿಗೆ ದಾನ ನೀಡಬಹುದು
ವಕ್ಫ್ ಆಸ್ತಿಯನ್ನು ಧಾರ್ಮಿಕ ಆಚರಣೆಗಳಿಗೆ ಬಳಸಲಾಗುತ್ತಿದ್ದುದರ ಆಧಾರದಲ್ಲಿ ಪ್ರಶ್ನಿಸುವಂತಿಲ್ಲ ಎಂಬ ನಿಯಮ ಬದಲು
ಸರ್ಕಾರದ ವಶದಲ್ಲಿನ ವಿವಾದಿತ ವಕ್ಫ್ ಆಸ್ತಿಯ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಇನ್ನು ಜಿಲ್ಲಾಧಿಕಾರಿಗಳಿಗಿಲ್ಲಇಂಥ ನಿರ್ಧಾರ ಕೈಗೊಳ್ಳುವ ಅಧಿಕಾರ ಇನ್ನು ರಾಜ್ಯ ಸರ್ಕಾರ ನೇಮಿಸುವ ಜಿಲ್ಲಾಧಿಕಾರಿಗಿಂತ ಮೇಲ್ದರ್ಜೆಯ ಅಧಿಕಾರಿಗೆ