ಸಾರಾಂಶ
ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆಯನ್ನು ಬಿಗಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು : ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಜೊತೆ ಯುದ್ಧ ಅನಗತ್ಯ. ಅದರ ಬದಲು ಭದ್ರತೆಯನ್ನು ಬಿಗಿಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಯನ್ನು ನಾವು ಪಾಲಿಸುತ್ತೇವೆ. ಈ ನಿಟ್ಟಿನಲ್ಲಿ ಕೇಂದ್ರಕ್ಕೆ ನಾವು ಅಗತ್ಯ ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಉಗ್ರರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತೂ ಯುದ್ಧದ ಪರ ಇಲ್ಲ. ನಾವು ಯಾವಾಗಲೂ ಶಾಂತಿಯ ಪರ. ಯುದ್ಧದ ಬದಲು ಭದ್ರತೆಯನ್ನು ಬಿಗಿಗೊಳಿಸಬೇಕಿದೆ. ಯುದ್ಧದ ಬಗ್ಗೆ ಯೋಚನೆ ಬೇಡ. ಅದರ ಬದಲು ಭದ್ರತೆಯನ್ನು ಬಿಗಿ ಮಾಡಿ ಎಂದು ಸಲಹೆ ನೀಡಿದರು.
ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಅಲ್ಲಿ ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು. ಆದರೆ, ಅಲ್ಲಿ ಭದ್ರತೆಯ ವೈಫಲ್ಯ ಉಂಟಾಗಿದೆ. ಹಾಗಾದರೆ, ಇವರು ಇಷ್ಟು ದಿನ ಮಾಡಿದ್ದು ಬರಿ ಭಾಷಣನಾ? ಈಗ ಏನೇ ಕ್ರಮ ಕೈಗೊಂಡರೂ ಹೋದ 26 ಜೀವಗಳನ್ನು ವಾಪಸ್ ತರಲು ಸಾಧ್ಯನಾ? ಎಂದು ಅವರು ಪ್ರಶ್ನಿಸಿದರು. ಪುಲ್ವಾಮಾ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು ಎಂಬುದು ಯಾರಿಗೆ ಗೊತ್ತಿದೆ ಹೇಳಿ ಎಂದು ಪ್ರಶ್ನಿಸಿದರು.
ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರಾದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಸಭೆಗಿಂತ ಮಹತ್ವದ ಸಭೆ ಯಾವುದು ಇದೆ ಹೇಳಿ?. ಚುನಾವಣಾ ಪ್ರಚಾರದ ಭಾಷಣ ಮುಖ್ಯನಾ? ದೇಶದ ಭದ್ರತೆ ಕುರಿತ ಸಭೆ ಮುಖ್ಯಾನಾ? ಇವರಿಗೆ ಪರಿಸ್ಥಿತಿಯ ಗಂಭೀರತೆ ಗೊತ್ತಿದ್ಯಾ ಎಂದು ಕಿಡಿಕಾರಿದರು.
ಸಿದ್ದು ಹೇಳಿಕೆಯಿಂದ ಆಘಾತ ಉಂಟಾಗಿದೆ
ದೇಶ ಸಂಕಷ್ಟದಲ್ಲಿರುವ ವೇಳೆ ಸಿದ್ದರಾಮಯ್ಯ ಅವರ ಮಾತು ಆಘಾತ ತಂದಿದೆ. ದೇಶಕ್ಕೇನಾದರೂ ಆಗಲಿ ಪರವಾಗಿಲ್ಲ, ಮತ ಸಿಕ್ಕಿದರೆ ಸಾಕು ಎಂಬ ಮನಸ್ಥಿತಿಗೆ ಬಂದಿದ್ದಾರೆ. ಇದೇ ಘಟನೆ ಅವರ ಕುಟುಂಬಕ್ಕೆ ಆಗಿದ್ದರೆ ಅವರ ಮಾತು ಹೀಗೆ ಇರುತ್ತಿರಲಿಲ್ಲ.
- ಆರ್. ಅಶೋಕ್, ಪ್ರತಿಪಕ್ಷ ನಾಯಕ
ಟೊಳ್ಳು ಹೇಳಿಕೆಗಳನ್ನುಮುಖ್ಯಮಂತ್ರಿ ನಿಲ್ಲಿಸಲಿಮುಖ್ಯಮಂತ್ರಿ ಹೇಳಿಕೆ ಪಲಾಯನವಾದಿ ನಿಲುವಿನಂತಿದೆ. ದೇಶದ ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಸಿಎಂ ಹೊರಟಿದ್ದಾರೆ. ದೇಶದ ಸುರಕ್ಷತೆಯ ವಿಷಯದಲ್ಲಿ ರಾಜಕೀಯ ಪ್ರೇರಿತ ಟೊಳ್ಳು ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಬೇಕು
.- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ