ಸಾರಾಂಶ
ವಯನಾಡ್ : ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಗ್ರ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಮೊತ್ತ ಮೊದಲ ಚುನಾವಣಾ ಜಯಭೇರಿ ಬಾರಿಸಿದ್ದಾರೆ. ಅವರು ಸುಮಾರು 4.1 ಲಕ್ಷ ಮತಗಳ ಅಂತರದಿಂದ ಉಪಚುನಾವಣೆಯಲ್ಲಿ ಗೆದ್ದಿದ್ದು, ಜಯದ ಅಂತರದಲ್ಲಿ ಕಳೆದ ಸಲ ತಮ್ಮ ಸಹೋದರ ರಾಹುಲ್ ಗಾಂಧಿ ಸಾಧಿಸಿದ ವಿಜಯವನ್ನು ಮೀರಿಸಿದ್ದಾರೆ.
ಇತ್ತೀಚಿನ ಚುನಾವಣಾ ಆಯೋಗದ ಅಂಕಿ ಅಂಶಗಳ ಪ್ರಕಾರ, ಪ್ರಿಯಾಂಕಾ 6,22,338 ಮತ ಪಡೆದು 4.1 ಲಕ್ಷ ಮತದಿಂದ ಗೆದ್ದಿದ್ದಾರೆ. ಎಲ್‌ಡಿಎಫ್‌ನ ಸತ್ಯನ್ ಮೊಕೇರಿ 2,11,407 ಲಕ್ಷ ಮತಗಳನ್ನು 2ನೇ ಸ್ಥಾನ ಪಡೆದಿದ್ದರೆ, ಬಿಜೆಪಿಯ ನವ್ಯಾ ಹರಿದಾಸ್ 1,09,939 ಲಕ್ಷ ಮತಗಳನ್ನು ಪಡೆದು 3ನೇ ಸ್ಥಾನ ಗಳಿಸಿದ್ದಾರೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು 6,47,445 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಐನ ಅನ್ನಿ ರಾಜಾ ವಿರುದ್ಧ 3,64,422 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರಲ್ಲಿ ಅವರು 7,06,367 ಮತಗಳನ್ನು ಪಡೆದು 4,31,770 ಮತಗಳ ಅಂತರದಿಂದ ಗೆದ್ದಿದ್ದರು.
ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಗೆದ್ದ ನಂತರ, ಈ ವರ್ಷದ ಚುನಾವಣೆಯಲ್ಲಿ, ರಾಹುಲ್ ವಯನಾಡ್ ಸ್ಥಾನವನ್ನು ತೆರವು ಮಾಡಿದ್ದರು ಮತ್ತು ಕಾಂಗ್ರೆಸ್ ಪಕ್ಷವು ಅವರ ಸಹೋದರಿ ಪ್ರಿಯಾಂಕಾ ಅವರನ್ನು ನಾಮನಿರ್ದೇಶನ ಮಾಡಿ, ಅವರ ಚುನಾವಣಾ ಚೊಚ್ಚಲ ಹಾದಿಯನ್ನು ಸುಗಮಗೊಳಿಸಿತ್ತು.
14 ಲಕ್ಷಕ್ಕೂ ಹೆಚ್ಚು ನೋಂದಾಯಿತ ಮತದಾರರನ್ನು ಹೊಂದಿರುವ ವಯನಾಡ್‌ನಲ್ಲಿ ಉಪಚುನಾವಣೆ ವೇಳೆ ಶೇ.65ರಷ್ಟು ಮತದಾನವಾಗಿತ್ತು,
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13 ರಂದು ಉಪಚುನಾವಣೆ ನಡೆದಿತ್ತು. 16 ಅಭ್ಯರ್ಥಿಗಳ ಪೈಕಿ ಪ್ರಿಯಾಂಕಾ, ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಹಾಗೂ ಬಿಜೆಪಿಯ ನವ್ಯಾ ಹರಿದಾಸ್ ಪ್ರಮುಖ ಸ್ಪರ್ಧಿಗಳಾಗಿದ್ದರು.
ನಾಂದೇಡ್‌ನಲ್ಲೂ ಕಾಂಗ್ರೆಸ್‌ಗೆ ಜಯ:
ವಯನಾಡ್ ಜತೆಗೆ ಲೋಕಸಭೆ ಉಪಚುನಾವಣೆ ನಡೆದಿದ್ದ ನಾಂದೇಡ್ ಕ್ಷೇತ್ರದಲ್ಲೂ ಕೂಡ ಕಾಂಗ್ರೆಸ್ ಜಯ ಸಾಧಿಸಿದೆ. ಕಾಂಗ್ರೆಸ್‌ನ ರವೀಂದ್ರ ಚೌಹಾಣ್ ಅವರು ಬಿಜೆಪಿ ಅಭ್ಯರ್ಥಿ ಸಂತುಕರಾವ್ ಹಂಬರಡೆ ಅವರನ್ನು 1457 ಮತಗಳ ಅಂತರದಿಂದ ಸೋಲಿಸಿದ್ದಾರೆ.
ವಯನಾಡ್ ಜನರ ದನಿಯಾಗಲು ಕಾದಿರುವೆ: ಪ್ರಿಯಾಂಕಾ
ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಂದ ತೆರವಾಗಿದ್ದ ಕೇರಳದ ವಯನಾಡು ಕ್ಷೇತ್ರದಲ್ಲಿ ಅವರ ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಜಯ ಸಾಧಿಸಿದ್ದು, ‘ಸಂಸತ್ತಿನಲ್ಲಿ ವಯನಾಡು ಜನರ ದನಿಯಾಗಲು ಎದುರುನೋಡುತ್ತಿದ್ದೇನೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನನ್ನ ಮೇಲೆ ವಿಶ್ವಾಸವಿಟ್ಟ ವಯನಾಡಿನ ಜನತೆಗೆ ನಾನು ಆಭಾರಿಯಾಗಿದ್ದೇನೆ. ದಿನಕಳೆದಂತೆ, ಈ ಜಯವು ನಿಮ್ಮದು ಹಾಗೂ ನೀವು ಚುನಾಯಿಸಿದ ಅಭ್ಯರ್ಥಿ ನಿಮ್ಮ ಕನಸು, ಭರವಸೆಗಳನ್ನು ಅರ್ಥೈಸಿಕೊಂಡು ನಿಮ್ಮಲ್ಲೇ ಒಬ್ಬಳಾಗಿ ಹೋರಾಡುತ್ತಿದ್ದಾರೆ ಎಂದು ನಿಮಗೆ ಮನವರಿಕೆಯಾಗುತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಅಂತೆಯೇ, ಪ್ರಚಾರದುದ್ದಕ್ಕೂ ಬೆನ್ನೆಲುಬಾಗಿದ್ದ ಸಹೋದರ ರಾಹುಲ್ ಗಾಂಧಿ, ತಾಯಿ ಸೋನಿಯಾ, ಪತಿ ರಾಬರ್ಟ್ ವಾದ್ರಾ, 2 ಮಕ್ಕಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ್ದಾರೆ.