ಸಾರಾಂಶ
ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಕುರಿತು ಇತ್ತೀಚೆಗೆ ಪ್ರಕಟವಾಗಿದ್ದ ಮತದಾನೋತ್ತರ ಸಮೀಕ್ಷಾ ವರದಿಗಳು ಭಾಗಶಃ ನಿಜವಾಗಿದೆ.
ಕಳೆದ ಲೋಕಸಭಾ ಚುನಾವಣೆ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳು ವಿಫಲವಾಗಿದ್ದ ಹಿನ್ನೆಲೆಯಲ್ಲಿ, ಈ ಬಾರಿ ಅವುಗಳ ಭವಿಷ್ಯದ ಕುರಿತು ಸಾಕಷ್ಟು ಕುತೂಹಲ ಇತ್ತು. ಆದರೆ ಈ ಸಲ ಸಮೀಕ್ಷೆ ತಕ್ಕಮಟ್ಟಿಗೆ ಫಲಪ್ರದವಾಗಿವೆ.
ಮಹಾರಾಷ್ಟ್ರ:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕುರಿತು 9 ಎಕ್ಸಿಟ್ ಪೋಲ್ ಪ್ರಕಟವಾಗಿತ್ತು. ಅವುಗಳ ಪೈಕಿ 6 ಸಮೀಕ್ಷೆಗಳು ಬಿಜೆಪಿ-ಶಿವಸೇನೆ ಶಿಂಧೆ ಬಣ-ಎನ್ಸಿಪಿ ಅಜಿತ್ ಬಣದ ಮಹಾಯುತಿ ಗೆಲುವು ಸಾಧಿಸಲಿವೆ ಎಂದು ಹೇಳಿದ್ದರೆ, 2 ಸಮೀಕ್ಷೆಗಳು ಕಾಂಗ್ರೆಸ್- ಶಿವಸೇನೆ ಠಾಕ್ರೆ ಬಣ-ಎನ್‌ಸಿಪಿ ಶರದ್ ಬಣದ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಗೆಲ್ಲಲಿದೆ ಎಂದಿದ್ದವು. 1 ಸಮೀಕ್ಷೆ ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿತ್ತು.
ಶನಿವಾರ ಪ್ರಕಟವಾದ ಫಲಿತಾಂಶಗಳನ್ನು ಆಧರಿಸಿ ಹೇಳುವುದಾದರೆ ಮೂರು ಸಮೀಕ್ಷೆಗಳು ಪೂರ್ಣ ಉಲ್ಟಾ ಆಗಿದ್ದರೆ ಮಹಾಯುತಿ ಗೆಲುವಿನ ಭವಿಷ್ಯ ನುಡಿದಿದ್ದ 6 ಸಮೀಕ್ಷೆಗಳು ನಿಖರ ಮಾಹಿತಿಯ ಭವಿಷ್ಯ ನುಡಿದಂತಾಗಿದೆ.
ನಿಖರ: ಚಾಣಕ್ಯ ಸ್ಟಾಟಿಟೀಸ್, ಮ್ಯಾಟ್ರಿಕ್ಸ್, ಪಿ- ಮಾರ್ಕ್, ಪೀಪಲ್ಸ್ ಪಲ್ಸ್, ಪೋಲ್ ಡೈರಿ, ಟೈಮ್ಸ್ ನೌ-ಜೆವಿಸಿ,ಉಲ್ಟಾ: ದೈನಿಕ್ ಭಾಸ್ಕರ್, ಎಲೆಕ್ಟೋರಲ್ ಎಡ್ಜ್, ಲೋಕಶಾಹಿ ಮರಾಟಿ
ಜಾರ್ಖಂಡ್:
ಜಾರ್ಖಂಡ್ ಚುನಾವಣೆ ಬಗ್ಗೆ ಪ್ರಕಟವಾಗಿದ್ದ 8 ಸಮೀಕ್ಷೆಗಳ ಪೈಕಿ 3 ಸಮೀಕ್ಷೆಗಳು ಜೆಎಂಎಂ- ಕಾಂಗ್ರೆಸ್- ಆರ್‌ಜೆಡಿ ಪರ, 3 ಸಮೀಕ್ಷೆಗಳು ಬಿಜೆಪಿ ಪರ, 2 ಸಮೀಕ್ಷೆಗಳು ಅತಂತ್ರ ವಿಧಾನಸಭಾ ರಚನೆಯ ಭವಿಷ್ಯ ನುಡಿದಿದ್ದವು. ಇದೀಗ ಫಲಿತಾಂಶ ಆಧರಿಸಿ ಹೇಳುವುದಾದರೆ 5 ಸಮೀಕ್ಷೆಗಳು ಪೂರ್ಣ ಉಲ್ಟಾ ಆಗಿದ್ದರೆ, 3 ಸಮೀಕ್ಷೆಗಳು ನಿಜವಾದಂತೆ ಆಗಿದೆ.
ನಿಖರ: ಆ್ಯಕ್ಸಿಸ್ ಮೈ ಇಂಡಿಯಾ, ಎಲೆಕ್ಟೋರಲ್ ಎಡ್ಜ್, ಪಿ ಮಾರ್ಕ್.
ಉಲ್ಟಾ: ಚಾಣಕ್ಯ ಸ್ಟಾಟಟೀಸ್, ದೈನಿಕ್ ಭಾಸ್ಕರ್, ಮ್ಯಾಟ್ರಿಕ್ಸ್, ಪೀಪಲ್ಸ್ ಪಲ್ಸ್, ಟೈಮ್ಸ್ ನೌ- ಜೆವಿಸಿ