ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ನಿರಂತರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ದಾಳಿಕೋರರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ.ಭಾರತೀಯ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ಇತ್ತೀಚೆಗೆ ನಡೆದ ಹಿಂದೂ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ ಎಂದರು.
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ನಿರಂತರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ದಾಳಿಕೋರರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ.
ಸುದ್ದಿಗಾರರ ಜತೆ ಮಾತನಾಡಿದ ಭಾರತೀಯ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್, ‘ಬಾಂಗ್ಲಾದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರಂಥ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿ ಕಳವಳಕಾರಿ. ಇತ್ತೀಚೆಗೆ ನಡೆದ ಹಿಂದೂ ಯುವಕನ ಹತ್ಯೆಯನ್ನು ನಾವು ಖಂಡಿಸುತ್ತೇವೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು’ ಎಂದರು.
‘ಮಧ್ಯಂತರ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಸುಮಾರು 2,900ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳು ನಡೆದಿವೆ ಎಂದು ಸ್ವತಂತ್ರ ಮೂಲಗಳು ತಿಳಿಸಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಮಾಧ್ಯಮಗಳು ವೈಭವೀಕರಿಸುತ್ತವೆ ಅಥವಾ ರಾಜಕೀಯ ಸಂಘರ್ಷ ಎಂದು ಹೇಳಿ ತಳ್ಳಿಹಾಕಬಾರದು’ ಎಂದು ಒತ್ತಾಯಿಸಿದರು.
ಇದೇ ವೇಳೆ, ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್‌ಪಿ) ಮುಖ್ಯಸ್ಥ ತಾರೀಖ್ ರೆಹಮಾನ್ ಅವರು 17 ವರ್ಷದ ಬಳಿಕ ಬಾಂಗ್ಲಾದೇಶಕ್ಕೆ ವಾಪಸ್ ಆಗಿರುವ ಕುರಿತೂ ಅವರು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿ. ‘ಮುಂಬರುವ ಸಾರ್ವತ್ರಿಕ ಚುನಾವಣೆ ಮುಕ್ತ, ನ್ಯಾಯಸಮ್ಮತ ಹಾಗೂ ಎಲ್ಲರನ್ನೂ ಒಳಗೊಂಡಿರುವಂತಿರಬೇಕು’ ಎಂದು ಆಗ್ರಹಿಸಿದರು.
ಬಾಂಗ್ಲಾ ಹಿಂದು ನರಮೇಧ ವಿರುದ್ಧ ಭಾರಿ ಪ್ರತಿಭಟನೆ
ಕೋಲ್ಕತಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ‘ಹಿಂದೂ ಸಂಹತಿ’ ಎಂಬ ಸಂಘಟನೆ ಕಾರ್ಯ ಕರ್ತರು ಕೋಲ್ಕತಾದಲ್ಲಿರುವ ಬಾಂಗ್ಲಾ ಉಪ ಹೈಮಿಷನರ್ ಕಚೇರಿ ಎದುರು ಭಾರೀ ಪ್ರತಿಭಟನೆ ನಡೆಸಿದರು.
ಈ ವೇಳೆ ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ 6 ಅಂಶಗಳ ಜ್ಞಾಪಕ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ಅಮೆರಿಕ ಎಚ್1ಬಿ ವೀಸಾ ಸಂದರ್ಶನ ರದ್ದು: ಭಾರತ ಕಳವಳ
ನವದೆಹಲಿ: ಅಮೆರಿಕ ಸರ್ಕಾರವು ಸಾವಿರಾರು ಎಚ್1ಬಿ ವೀಸಾ ಸಂದರ್ಶನಗಳನ್ನು ಏಕಾಏಕಿ ರದ್ದುಗೊಳಿಸಿದ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕವು ತ್ವರಿತ ಕ್ರಮಗಳನ್ನು ಕೈಗೊಂಡು ಭಾರತೀಯರ ಸಂದರ್ಶನವನ್ನು ಸುಗಮಗೊಳಿಸಲು ಆಗ್ರಹಿಸಿದೆ.
ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ತಮ್ಮ ವಾರದ ಮಾಹಿತಿಯಲ್ಲಿ, ‘ವೀಸಾ ಪ್ರಕ್ರಿಯೆಗಳು ಆಯಾ ದೇಶಗಳ ಸಾರ್ವಭೌಮತೆಗೆ ಸಂಬಂಧಿಸಿವೆ. ಅಮೆರಿಕದ ಎಚ್1ಬಿ ವೀಸಾ ಸಂದರ್ಶನದಲ್ಲಿ ರದ್ದತಿಯನ್ನು ದೆಹಲಿಯ ಅಮೆರಿಕ ದೂತಾವಾಸ ಕಚೇರಿಯ ಗಮನಕ್ಕೆ ತರಲಾಗಿದೆ. ಪ್ರಕ್ರಿಯೆ ಚುರುಕುಗೊಳಿಸಿ, ಭಾರತೀಯರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಲಾಗಿದೆ’ ಎಂದರು.
ವೀಸಾ ಅರ್ಜಿದಾರರ ಸಾಮಾಜಿಕ ಜಾಲತಾಣ ಪರಿಶೀಲನೆಗಾಗಿ ಡಿ.15ರಿಂದ ಎಲ್ಲ ಸಂದರ್ಶನಗಳನ್ನು ಮುಂದೂಡಲಾಗಿದೆ.
ಮಲ್ಯ, ಲಲಿತ್ ಕರೆತರ್ತೇವೆ: ಭಾರತ ತಿರುಗೇಟು
ನವದೆಹಲಿ: ‘ವಂಚಕ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಇತ್ತೀಚೆಗೆ ಭಾರತದ ಬಗ್ಗೆ ಕುಹಕವಾಡಿ ಮಾಡಿರುವ ವಿಡಿಯೋವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ವಂಚಕರನ್ನು ಭಾರತಕ್ಕೆ ಕರೆತರುತ್ತೇವೆ’ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.
ಇತ್ತೀಚೆಗೆ ವಂಚಕರಾದ ಲಲಿತ್ ಮೋದಿ ಮತ್ತು ಮಲ್ಯ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು, ‘ನಾವು ಭಾರತದ ವಂಚಕರು, ಅತಿ ದೊಡ್ಡ ವಂಚಕರು’ ಎಂದು ಭಾರತವನ್ನು ಅಣಕಿಸಿ ವಿಡಿಯೋ ಮಾಡಿದ್ದರು.
ಇದಕ್ಕೆ ವಿದೇಶಾಂಗ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿ, ‘ಕಾನೂನಿಗೆ ಬೇಕಿರುವ ಯಾವುದೇ ವ್ಯಕ್ತಿಯನ್ನು ತಂದು ವಿಚಾರಣೆಗೆ ಒಳಪಡಿಸಲು ಸಿದ್ಧ. ಈ ಬಗ್ಗೆ ಅವರು ಇರುವ ಬ್ರಿಟನ್ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ’ ಎಂದರು.

