ನವದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿ ಭಾರತೀಯರಿಗೆ ದೂತಾವಾಸ ಕಚೇರಿ ಸೇವೆ ಮತ್ತು ವೀಸಾ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುತ್ತೇವೆ ಎಂದು ಬಾಂಗ್ಲಾದೇಶ ಸರ್ಕಾರ ಸೋಮವಾರ ಘೋಷಿಸಿದೆ.
ನವದೆಹಲಿ: ಬಾಂಗ್ಲಾದೇಶದ ಭಾರತ ವಿರೋಧಿ ಹೋರಾಟಗಾರ ಉಸ್ಮಾನ್ ಹದಿ ಹತ್ಯೆ ಹಿನ್ನೆಲೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ರಾಜತಾಂತ್ರಿಕ ಸಮರ ಆರಂಭವಾಗಿದೆ. ನವದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿ ಭಾರತೀಯರಿಗೆ ದೂತಾವಾಸ ಕಚೇರಿ ಸೇವೆ ಮತ್ತು ವೀಸಾ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುತ್ತೇವೆ ಎಂದು ಬಾಂಗ್ಲಾದೇಶ ಸರ್ಕಾರ ಸೋಮವಾರ ಘೋಷಿಸಿದೆ.
ಇದರೊಂದಿಗೆ ಶೇಖ್ ಹಸೀನಾ ಸರ್ಕಾರ ಪದಚ್ಯುತಿ ಬಳಿಕ ಆರಂಭವಾಗಿದ್ದ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಮರ ಇದೀಗ ಇನ್ನೊಂದು ಹಂತ ತಲುಪಿದಂತಾಗಿದೆ.
ಉಸ್ಮಾನ್ ಹದಿ ಹತ್ಯೆ ಬಳಿಕ ಬಾಂಗ್ಲಾದೇಶದಲ್ಲಿನ ಭಾರತೀಯ ರಾಯಭಾರ ಕಚೇರಿಗಳು ಮತ್ತು ರಾಯಭಾರಿಗಳ ಮನೆಯ ಮೇಲೆ ಮೇಲೆ ದುಷ್ಕರ್ಮಿಗಳು ಕಲ್ಲಿನ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ ಭಾರತ ಸರ್ಕಾರ, ಢಾಕಾ, ಕುಲ್ನಾ, ರಾಜಶಶಿ ಮತ್ತು ಚಿತ್ತಗಾಂಗ್‌ನಲ್ಲಿ ವೀಸಾ ಸೇವೆಗಳನ್ನು ನಿಲ್ಲಿಸಿತ್ತು. ಬಳಿಕ ಚಿತ್ರಗಾಂಗ್ ಹೊರತುಪಡಿಸಿ ಉಳಿದ ಕಡೆ ಸೇವೆ ಪುನಾರಂಭ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಬಾಂಗ್ಲಾದೇಶ ಇದೀಗ ನವದೆಹಲಿಯಲ್ಲಿನ ತನ್ನ ರಾಯಭಾರ ಕಚೇರಿಯಲ್ಲಿ ವೀಸಾ ವಿತರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಘೋಷಣೆ ಮಾಡಿದೆ.
ನವದೆಹಲಿಯಲ್ಲಿನ ಬಾಂಗ್ಲಾ ದೂತಾವಾಸದೆದುರು ಸೋಮವಾರ ಪ್ರದರ್ಶಿಸಲಾಗಿರುವ ಪ್ರಕಟಣೆಯಲ್ಲಿ, ‘ಕೆಲ ಅನಿವಾರ್ಯ ಕಾರಣಗಳಿಂದ ಮುಂದಿನ ಆದೇಶದ ವರೆಗೆ ಎಲ್ಲಾ ಸೇವೆ ಸ್ಥಗಿತಗೊಳಿಸಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ.
ಇದಕ್ಕೂ ಮೊದಲು ಭಾರತ ತನ್ನ ದೂತಾವಾಸ ಕೇಂದ್ರಗಳ ಮೇಲೆ ದಾಳಿ ಆರೋಪ ಮಾಡಿದ್ದಕ್ಕೆ, ಬಾಂಗ್ಲಾ ಕೂಡಾ ನವದೆಹಲಿಯ ನಮ್ಮ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪ ಮಾಡಿತ್ತು. ಆದರೆ ಇದು ಸುಳ್ಳು ಎಂದು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿತ್ತು.
ಸಂಘರ್ಷದ ಹಾದಿ
- ಇತ್ತೀಚೆಗೆ ಭಾರತ ವಿರೋಧಿ ಯುವ ಹೋರಾಟಗಾರ ಉಸ್ಮಾನ್ ಹದಿ ಬಾಂಗ್ಲಾದಲ್ಲಿ ಹತ್ಯೆ
- ಈತನ ಹತ್ಯೆಗೆ ಪ್ರತೀಕಾರವಾಗಿ ಬಾಂಗ್ಲನ್ನರಿಂದ ಭಾರತೀಯ ದೂತಾವಾಸ ಮೇಲೆ ದಾಳಿ
- ಹೀಗಾಗಿ ಚಿತ್ತಗಾಂಗ್ ಸೇರಿ ಕೆಲವು ವೀಸಾ ವಿತರಣಾ ಕೇಂದ್ರ ಬಂದ್ ಮಾಡಿದ ಭಾರತ
- ಇದಕ್ಕೆ ಈaಗ ಬಾಂಗ್ಲಾ ತಿರುಗೇಟು. ಭಾರತೀಯರಿಗೆ ಬಾಂಗ್ಲಾ ವೀಸಾ ತಾತ್ಕಾಲಿಕ ಬಂದ್
- ಇದರಿಂದಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷ ತೀವ್ರ ಸಂಭವ
ಬಾಂಗ್ಲಾದಲ್ಲಿ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡೇಟು
ಢಾಕಾ: ಸಂಘರ್ಷಪೀಡಿತ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಉಸ್ಮಾನ್ ಹದಿ ಹತ್ಯೆ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕ ಡಾ. ಮೊತಲೆಬ್ ಶಿಕ್ದರ್ (42) ಮೇಲೆ ಅಪರಿಚಿತರು ಸೋಮವಾರ ಗುಂಡಿನ ದಾಳಿ ನಡಸಿದ್ದಾರೆ. ದುಷ್ಕರ್ಮಿಗಳ ಗುಂಡು ಶಿಕ್ದರ್ ತಲೆಗೇ ತಾಗಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಹಿಂಸೆ ಮತ್ತಷ್ಟು ಭುಗಿಲೇಳುವ ಸಂಭವವಿದೆ.
