ಸಾರಾಂಶ
ಮುಂಬೈ: ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮಮುಂಬೈನ ಜಿಯೋ ವರ್ಲ್ಡ್ ಕನ್ವೆಂಶನ್ ಸೆಂಟರ್‌ನಲ್ಲಿ ಶುಕ್ರವಾರ ಅದ್ಧೂರಿಯಾಗಿ ನಡೆದಿದೆ. ಸಂಜೆಯ ಮುಹೂರ್ತದಲ್ಲಿ ಅನಂತ್ ಹಾಗೂ ರಾಧಿಕಾ ಇಬ್ಬರೂ ಸತಿಪತಿಗಳಾಗಿದ್ದಾರೆ.
ರಿಲಯನ್ಸ್ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕಿರಿಯ ಪುತ್ರನ ಈ ವಿವಾಹಕ್ಕೆ ಜಗತ್ತಿನ ವಿವಿಧ ರಂಗದ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದಾರೆ. ಜಗತ್ತೇ ಒಮ್ಮೆ ತಿರುಗಿ ನೋಡುವಂತೆ ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ಬ್ರಿಟನ್ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್, ಬೋರಿಸ್ ಜಾನ್ಸಸ್, ಅಮೆರಿಕದ ಖ್ಯಾತ ಮಾಡೆಲ್ ಕಿಮ್ ಕರ್ದಶಿಯನ್ ಮತ್ತು ಸಹೋದರಿ ಖೋಲೆ ಕರ್ದಶಿಯನ್ , ಡಬ್ಲುಡಬ್ಲುಎಫ್ ಖ್ಯಾತಿಯ ಜಾನ್ ಸೀನ, ಕನ್ನಡದ ಖ್ಯಾತ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ, ಕೆನಡಾದ ಮಾಜಿ ಪ್ರಧಾನಿ ಸ್ಟೀಫನ್ ಹಾರ್ಪರ್ ಸೇರಿದಂತೆ ಹಲವು ಜಾಗತಿಕ ನಾಯಕರು ಆಗಮಿಸಿದ್ದರು.ಇದಲ್ಲದೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ , ಜಾಹ್ನವಿ ಕಪೂರ್, ರಾಮ್ ಚರಣ್ ಸೇರಿದಂತೆ ಹಲವು ಸಿನಿತಾರೆಯರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವರು ಆಗಮಿಸಿ ಕಾರ್ಯಕ್ರಮಕ್ಕೆ ರಂಗೇರಿಸಿದರು.
ಇಂದು ಮೋದಿ ಆಗಮನ?:ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಗಮಿಸಿ ವಧು ವರರಿಗೆ ಹಾರೈಸುವ ನಿರೀಕ್ಷೆ ಇದೆ.
5000 ಕೋಟಿ ರು.ಗೂ ಹೆಚ್ಚು ಖರ್ಚು?:ಕಳೆದ ಹಲವು ತಿಂಗಳಿಂದ ಅಂಬಾನಿ ಮನೆಯಲ್ಲಿ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದವು. ಖ್ಯಾತ ಸಿಂಗರ್ ಜಸ್ಟೀನ್ ಬೀಬರ್ ಬರೋಬ್ಬರಿ 83 ಕೋಟಿ ರು. ಹಣ ಪಡೆದು ಮದುವೆಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ದೇಶದ ನಂ.1 ಸಿರಿವಂತ ತನ್ನ ಕಿರಿಯ ಪುತ್ರನ ಮದುವೆಗೆ ಬರೋಬ್ಬರಿ 5,000 ಕೋಟಿ ರು. ಖರ್ಚು ಮಾಡಿದ್ದಾರೆಂದು ಅಂದಾಜಿಸಲಾಗಿದೆ.