ಸಾರಾಂಶ
‘ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರ ನರಮೇಧಗೈದ ಎಲ್ಲಾ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಗುವಾಹಟಿ: ‘ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ 26 ಪ್ರವಾಸಿಗರ ನರಮೇಧಗೈದ ಎಲ್ಲಾ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ. ಏ.23ರಂದು ನಡೆದ ಹತ್ಯಾಕಾಂಡದ ಬಳಿಕ ಇದೇ ಮೊದಲ ಬಾರಿಗೆ ಈ ಕುರಿತು ಬಹಿರಂಗ ಪ್ರತಿಕ್ರಿಯೆ ನೀಡಿರುವ ಶಾ, ದೇಶದ ಜನತೆಗೆ ಈ ಭರವಸೆ ನೀಡಿದ್ದಾರೆ.
ಅಸ್ಸಾಂನಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಪಹಲ್ಗಾಂ ಉಗ್ರದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲಾ ಉಗ್ರರನ್ನು ಹುಡುಕಿ ಹುಡುಕಿ ಬೇಟಿಯಾಡುವುದು ಖಚಿತ. ಆ ಹೇಯ ಕೃತ್ಯಕ್ಕೆ ಅವರೆಲ್ಲರನ್ನೂ ಉತ್ತರದಾಯಿಗಳನ್ನಾಗಿಸಲಾಗುವುದು’ ಎಂದು ಭರವಸೆ ನೀಡಿದರು.
ಜೊತೆಗೆ, ‘ಪ್ರಧಾನಿ ಮೋದಿ ಸರ್ಕಾರ ಉಗ್ರರ ವಿಷಯದಲ್ಲಿ ಶೂನ್ಯ ಸಹಿಷ್ಣುವಾಗಿದೆ. ಉಗ್ರರನ್ನು ಸುಮ್ಮನೆ ಬಿಡೆವು. ಉಗ್ರವಾದ ಸಂಪೂರ್ಣವಾಗಿ ನಿರ್ಮೂಲನೆಯಾಗುವವರೆಗೂ ಸರ್ಕಾರದ ಭಯೋತ್ಪಾದನಾ ವಿರುದ್ಧದ ಹೋರಾಟ ಮುಂದುವರಿಯುತ್ತದೆ’ ಎಂದು ಹೇಳಿದರು.