ಅಮೇಠಿ ಬಿಟ್ಟು ರಾಹುಲ್‌ ರಾಯ್‌ಬರೇಲಿಗೆ ಹೋಗಿದ್ದೇಕೆ?

| Published : May 04 2024, 12:32 AM IST / Updated: May 04 2024, 08:31 AM IST

Rahul Gandhi Nomination

ಸಾರಾಂಶ

ಸೋಲಿನ ಭೀತಿ, ಎರಡೂ ಕಡೆ ಗೆದ್ದರೆ ವಯನಾಡು ಬಿಡಲು ಸೂಕ್ತ ಕಾರಣ ಎಂಬುದೂ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಗಾಂಧಿ ರಾಯ್‌ಬರೇಲಿಯಿಂದ ಸ್ಪರ್ಧೆ ಮಾಡಿದ್ದಾರೆ ಎನ್ನಲಾಗಿದೆ.

ನವದೆಹಲಿ: ಸತತ ಮೂರು ಬಾರಿ ಗೆದ್ದು, ಕಳೆದ ಬಾರಿ ಸೋಲನ್ನಪ್ಪಿದ ಅಮೇಠಿಗೆ ಈ ಬಾರಿ ರಾಹುಲ್‌ ಗಾಂಧಿ ಗುಡ್‌ಬೈ ಹೇಳಿದ್ದಾರೆ. ಅದರ ಬದಲಿಗೆ ಕಾಂಗ್ರೆಸ್‌ನ ಅತ್ಯಂತ ಭದ್ರಕೋಟೆ ಎನ್ನಿಸಿಕೊಂಡಿರುವ ರಾಯ್‌ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ 25 ವರ್ಷಗಳ ಬಳಿಕ ಅಮೇಠಿ ಕ್ಷೇತ್ರ ಗಾಂಧಿ ಕುಟುಂಬದ ಕೈತಪ್ಪಿದಂತಾಗಿದೆ.

ರಾಹುಲ್‌ ಹೀಗೆ ಅಮೇಠಿ ತೊರೆಯಲು ಹಲವು ಕಾರಣಗಳು ಕೇಳಿಬಂದಿವೆ.

1.ಅಮೇಠಿ ಮತ್ತು ರಾಯ್‌ಬರೇಲಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಮೊದಲಿಗೆ ರಾಹುಲ್‌, ಪ್ರಿಯಾಂಕಾ ನಕಾರ. ಆದರೆ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಗಾಂಧೀ ಕುಟುಂಬದ ಯಾವುದೇ ಸದಸ್ಯರು ಸ್ಪರ್ಧಿಸದೇ ಹೋದಲ್ಲಿ ಅದು ಮತದಾರರಿಗೆ ತಪ್ಪು ಸಂದೇಶ ರವಾನಿಸಬಹುದು ಎಂದು ಖರ್ಗೆ ಸೇರಿ ಹಲವು ನಾಯಕರ ಎಚ್ಚರಿಕೆ ಹಿನ್ನೆಲೆಯಲ್ಲಿ ಅಂತಿಮವಾಗಿ ಸ್ಪರ್ಧೆಗೆ ರಾಹುಲ್‌ ನಿರ್ಧಾರ.

2. ಅಮೇಠಿಯಲ್ಲಿ ಕಳೆದ ಬಾರಿ ಇಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತ ಬಳಿಕ ಕ್ಷೇತ್ರ ಬಹುತೇಕ ಪಕ್ಷದ ಕೈತಪ್ಪಿದೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ. ಹೀಗಿರುವಾಗ ಮತ್ತೆ ಸ್ಪರ್ಧಿಸಿ ಸೋತರೆ ಅದು ಸ್ವತಃ ರಾಹುಲ್‌ ಮತ್ತು ಕಾಂಗ್ರೆಸ್‌ ಎರಡಕ್ಕೂ ಮುಜುಗರದ ವಿಷಯ.

3. ಮತ್ತೆ ಅಮೇಠಿಯಲ್ಲಿ ಕಣಕ್ಕೆ ಇಳಿದರೆ ಇಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯ ಮೀಸಲಿಡಬೇಕು. ಇದು ದೇಶವ್ಯಾಪಿ ಕಾಂಗ್ರೆಸ್‌ ಪ್ರಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

4. ಅಮೇಠಿಗೆ ಹೋಲಿಸಿದರೆ ಈಗಲೂ ರಾಯ್‌ಬರೇಲಿ ಪಕ್ಷದ ಪಾಲಿಗೆ ಹೆಚ್ಚು ಸುರಕ್ಷಿತ ಕ್ಷೇತ್ರ. ಇಲ್ಲಿ ಪ್ರಿಯಾಂಕಾ ಕಣಕ್ಕಿಳಿಯಲು ಬಿಲ್‌ಕುಲ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಇಲ್ಲಿಂದ ಸ್ಪರ್ಧೆಗೆ ರಾಹುಲ್‌ ಒಲವು.

5. ವಯನಾಡಿನಲ್ಲಿ ರಾಹುಲ್‌ ಗೆಲುವು ಬಹುತೇಕ ಖಚಿತವಿದೆ. ಆದರೆ ಈ ಗೆಲುವು ಕೇರಳದಲ್ಲಿ ವಿಧಾನಸಭೆಯ ಮೇಲೆ ಅಂಥ ಪರಿಣಾಮ ಬೀರಿಲ್ಲ. ಹೀಗಾಗಿ ರಾಹುಲ್‌ ಮತ್ತೆ ಹಿಂದಿ ಭಾಷಿಕ ಪ್ರದೇಶಗಳ ಚಿತ್ತ ಹರಿಸಿದ್ದಾರೆ. ಹೀಗಿರುವಾಗ ಒಂದು ವೇಳೆ ವಯನಾಡು, ಅಮೇಠಿ ಎರಡೂ ಕಡೆ ಗೆದ್ದರೆ, ವಯನಾಡು ತಿರಸ್ಕರಿಸುವುದು ಕಷ್ಟಕರ.

6. ರಾಯ್‌ಬರೇಲಿ ಮತ್ತು ವಯನಾಡು ಎರಡೂ ಕಡೆ ಗೆದ್ದರೆ, ವಯನಾಡು ದಶಕಗಳಿಂದ ಕುಟುಂಬವನ್ನು ಸಲುಹಿದ ಕ್ಷೇತ್ರ. ಮೇಲಾಗಿ ತಮ್ಮ ತಾಯಿ ಸ್ಪರ್ಧಿಸುತ್ತಿದ್ದ ಕ್ಷೇತ್ರ ಎನ್ನುವ ಕಾರಣ ನೀಡಿ ರಾಯ್‌ಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಸುಲಭ ಎನ್ನುವ ಲೆಕ್ಕಾಚಾರ.