ಸಾರಾಂಶ
ನವದೆಹಲಿ: ಭಾರತದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ವಾಟ್ಸಾಪ್ ಆಗಲಿ ಅಥವಾ ಮೂಲ ಸಂಸ್ಥೆ ಮೆಟಾ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲವೆಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಕಳೆದ ವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ವಿವೇಕ ತಂಖಾ ಅವರು, ‘ಮಾಹಿತಿ ತಂತ್ರಜ್ಞಾನದ ಕಾಯ್ದೆ ಅಡಿಯಲ್ಲಿ ಭಾರತದ ನಿಯಮ ಒಪ್ಪಲ್ಲ ಎಂಬ ಕಾರಣ ನೀಡಿ ವಾಟ್ಸಾಪ್ ತನ್ನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆಯೇ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವೈಷ್ಣವ್ ಈ ಬಗ್ಗೆ ಸರ್ಕಾರಕ್ಕೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲವೆಂದು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ಸಾಮಾಜಿಕ ಮಾಧ್ಯಮಗಳು ಗೂಢಲಿಪೀಕರಣ ಹೊಂದಿದ್ದರೂ, ಸಂದೇಶಗಳನ್ನು ತುರ್ತು ಸಂದರ್ಭದಲ್ಲಿ ತಮಗೆ ತೋರಿಸಬೇಕು ಎಂದು ಸರ್ಕಾರ ಹೇಳಿತ್ತು. ಆದರೆ ಗೂಢಲಿಪೀಕರಣಕ್ಕೆ ಭಂಗ ಬಂದರೆ ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ವಾಟ್ಸಾಪ್ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.
ಮಾಲ್ಡೀವ್ಸ್‌ನಲ್ಲಿ ಮತ್ತೆ ಭಾರತ ನಿರ್ಮಿತ ವಿಮಾನಗಳ ಬಳಕೆ
ನವದೆಹಲಿ: ಕೆಲ ತಿಂಗಳ ಹಿಂದೆ ಭಾರತ ಹಾಗೂ ಮಾಲ್ಡೀವ್ಸ್ ನಡುವೆ ಸಂಬಂಧ ಹದಗೆಟ್ಟಾಗಿನಿಂದ ಕಾರ್ಯಾಚರಣೆ ನಿಲ್ಲಿಸಿದ್ದ ಭಾರತ ಉಡುಗೊರೆಯಾಗಿ ನೀಡಿದ್ದ ಡಾರ್ನಿಯರ್ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಮಾಲ್ಡೀವ್ಸ್ ಪುನಃ ಉಪಯೋಗಿಸಲು ಆರಂಭಿಸಿದೆ. ಇವುಗಳನ್ನು ವೈದ್ಯಕೀಯ ಕೆಲಸಗಳಿಗೆ ಮುಯಿಜು ಸರ್ಕಾರ ಬಳಕೆ ಮಾಡಿದೆ. ಇದಕ್ಕಾಗಿ ಸಹಕಾರ ನೀಡಿದ ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಧನ್ಯವಾದ ಸಲ್ಲಿಸಿದ್ದಾರೆ.
ಶುಕ್ರವಾರ ನಡೆದ ಎರಡು ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ಭಾರತೀಯರಿದ್ದ ಡಾರ್ನಿಯಾರ್ ವಿಮಾನ ಹಾಗೂ ಹೆಲಿಕಾಪ್ಟರ್ ಬಳಸಿ ಯಶಸ್ವಿ ಕಾರ್ಯಚರಣೆ ನಡೆಸಲಾಯಿತು ಎಂದು ಮಾಲ್ಡೀವ್ಸ್ ರಕ್ಷಣಾ ಪಡೆ ಎಕ್ಸ್‌ನಲ್ಲಿ ತಿಳಿಸಿದೆ.
ಘಟನೆ ಹಿನ್ನೆಲೆ:ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಅಲ್ಲಿದ್ದ 70ಕ್ಕೂ ಹೆಚ್ಚೂ ಭಾರತೀಯ ಸೈನಿಕರು ಹಿಂತಿರುಗುವಂತೆ ಆದೇಶಿಸಿದ್ದರು. ಈ ಪೈಕಿ ಭಾರತ ಉಡುಗೊರೆಯಾಗಿ ನೀಡಿದ್ದ ಡಾರ್ನಿಯಾರ್ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತಿದ್ದ ವಾಯುಪಡೆಯವರು ಸೇರಿದ್ದರು. ಇವರೆಲ್ಲರೂ ಹಿಂತಿರುಗಿದ ಬಳಿಕ ನಾಗರಿಕರನ್ನು ಕಳುಹಿಸಿಕೊಡುವಂತೆ ಮಾಲ್ಡೀವ್ಸ್ ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ್ದ ಭಾರತ, ಬೆಂಗಳೂರಿನ ಎಚ್‌ಎಎಲ್ ಸಿಬ್ಬಂದಿಯನ್ನು 2026ರವರೆಗೆ ಕಾಂಟ್ರಾಕ್ಟ್ ಆಧಾರದ ಮೇಲೆ ಕಳುಹಿಸಿಕೊಟ್ಟಿತ್ತು. ಈಗ ಅವರು ಮಾಲ್ಡೀವ್ಸ್‌ನಲ್ಲಿ ಡಾರ್ನಿಯಾರ್ ಹಾಗೂ ಹೆಲಿಕಾಪ್ಟರ್‌ಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.
ಅಯೋಧ್ಯೆ ಮಸೀದಿ ಜಮೀನು ನನ್ನದು: ಮಹಿಳೆ ದೂರು
ಲಖನೌ: ಸುಪ್ರೀಂ ಕೋರ್ಟ್‌ನ ಆದೇಶದಂತೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಕೊಡಲಾಗಿರುವ ಧನ್ನಿಪುರ ಗ್ರಾಮದ ಭೂಮಿ ತನ್ನದು ಎಂದಿರುವ ದೆಹಲಿಯ ರಾಣಿ ಪಂಜಾಬಿ ಎಂಬ ಮಹಿಳೆ, ಅದನ್ನು ಮರಳಿ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.‘ನನ್ನ ಬಳಿ ಅದಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳಿದ್ದು, ಅದನ್ನು ಮರಳಿ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗುವೆ. ದೇಶ ವಿಭಜನೆ ವೇಳೆ ನನ್ನ ಪರಿವಾರ ಭಾರತಕ್ಕೆ ಬಂದಿದ್ದು, ಆ ವೇಳೆ ಅವರಿಗೆ ಕೊಡಲಾದ ಈ ಭೂಮಿಯಲ್ಲಿ 1983ರ ವರೆಗೆ ಕೃಷಿ ಬಳಸಲಾಗಿತ್ತು. ತಂದೆಯ ಆರೋಗ್ಯ ಹದಗೆಟ್ಟ ಕಾರಣ ನಾವು ದೆಹಲಿಯಲ್ಲಿ ನೆಲೆಸಿದೆವು. ಅಂದಿನಿಂದ ಆ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ’ ಎಂದು ರಾಣಿ ಆರೋಪಿಸಿದ್ದಾರೆ.ಆದರೆ, ಮಸೀದಿ ನಿರ್ಮಾಣಕ್ಕಾಗಿ ರಚಿಸಲಾಗಿರುವ ಇಂಡೋ-ಇಸ್ಲಾಮಿಕ್ ಬೋರ್ಡ್‌ನ ಮುಖ್ಯಸ್ಥ ಝುಫರ್ ಫಾರೂಕಿ, ಈ ಹೇಳಿಕೆಯನ್ನು ಅಲ್ಲಗಳೆದಿದ್ದು, ಆಕೆಯ ವಾದವನ್ನು ಅಲಹಾಬಾದ್ ಹೈಕೋರ್ಟ್ 2021ರಲ್ಲೇ ತಿರಸ್ಕರಿಸಿತ್ತು ಎಂದಿದ್ದಾರೆ,
‘ಈ ಯೋಜನೆಗೆ ಯಾವುದೇ ಅಡೆತಡೆಗಳಿಲ್ಲ. ಮಸೀದಿ ನಿರ್ಮಾಣದ ಕಾರ್ಯ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ’ ಎಂದು ಸುನ್ನಿ ವಕ್ಫ್ ಬೋರ್ಡ್‌ನ ಅಧ್ಯಕ್ಷರೂ ಆಗಿರುವ ಫಾರೂಕಿ ಮಾಹಿತಿ ನೀಡಿದ್ದಾರೆ.
ತ.ನಾಡು: ಬಿಎಸ್ಪಿ ಅಧ್ಯಕ್ಷನ ಹತ್ಯೆ ಬೆನ್ನಲ್ಲೆ ಎಐಎಡಿಎಂಕೆ ಕಾರ್ಯಕರ್ತನ ಕೊಲೆ
ಕಡಲೂರು: ತಮಿಳುನಾಡಿನ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಆರ್ಮ್‌ಸ್ಟ್ರಾಂಗ್ ಹತ್ಯೆ ಬೆನ್ನಲ್ಲೇ ಎಐಎಡಿಎಂಕೆ ಕಾರ್ಯಕರ್ತನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಮಿಳ್ನಾಡು-ಪುದುಚೇರಿ ಗಡಿ ಭಾಗದಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿ ತಿರುಪಾಪುಲಿಯೂರಿನ ನಿವಾಸಿ ಪದ್ಮನಾಭನ್ ಎಂದು ಗುರುತಿಸಲಾಗಿದೆ.
ದ್ವಿಚಕ್ರವಾಹನದಲ್ಲಿ ಪದ್ಮನಾಭನ್ ಕಡಲೂರಿನಿಂದ ಬಾಗೂರು ಕಡೆಗೆ ಹೋಗುತ್ತಿದ್ದಾಗ ಸಂದರ್ಭದಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ಬಂದ ಅಪರಿಚಿತರ ಗುಂಪೊಂದು ಆತನ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಆತನನ್ನು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.