ಸಾರಾಂಶ
ಅಮೆರಿಕದ ಟ್ರಂಪ್ ಸರ್ಕಾರ ಅಕ್ರಮ ವಲಸಿಗರ ಕೈಗೆ ಕೋಳ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ ಹೊರದಬ್ಬುತ್ತಿರುವ ವಿಡಿಯೋವನ್ನು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದೆ. ಸಾಲದ್ದಕ್ಕೆ ಇದಕ್ಕೆ ಟ್ರಂಪ್ ಆಪ್ತ ಎಲಾನ್ ಮಸ್ಕ್ ಅವರು ‘ವಾವ್’ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಟ್ರಂಪ್ ಸರ್ಕಾರ ಅಕ್ರಮ ವಲಸಿಗರ ಕೈಗೆ ಕೋಳ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ ಹೊರದಬ್ಬುತ್ತಿರುವ ವಿಡಿಯೋವನ್ನು ಶ್ವೇತಭವನ ಮಂಗಳವಾರ ಬಿಡುಗಡೆ ಮಾಡಿದೆ. ಸಾಲದ್ದಕ್ಕೆ ಇದಕ್ಕೆ ಟ್ರಂಪ್ ಆಪ್ತ ಎಲಾನ್ ಮಸ್ಕ್ ಅವರು ‘ವಾವ್’ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಅಕ್ರಮ ವಲಸಿಗರನ್ನು ಅಮೆರಿಕ ನಡೆಸಿಕೊಂಡ ರೀತಿಗೆ ಭಾರತದಲ್ಲಿ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೆ ಈ ವೀಡಿಯೊ ಹೊರಬಂದಿದ್ದು, ವಿವಾದ ಮತ್ತಷ್ಟು ಹೆಚ್ಚಿಸಿದೆ.41 ಸೆಕೆಂಡ್‌ಗಳ ವೀಡಿಯೊದಲ್ಲಿ, ಅಧಿಕಾರಿಯೊಬ್ಬರು ಕೈಕೋಳ ಹಾಕಿ ಬಂಧಿಸಿದ ವ್ಯಕ್ತಿಯನ್ನು ವಿಮಾನ ಹತ್ತಿಸುತ್ತಾರೆ. ಬುಟ್ಟಿಯಲ್ಲಿ ಒಂದಷ್ಟು ಕೈಕೋಳ ಮತ್ತು ಸರಪಳಿಗಳನ್ನು ಇಟ್ಟಿರುವುದೂ ಕಂಡುಬರುತ್ತದೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡ ವಲಸಿಗನೊಬ್ಬ ಕೈಗೆ ಕೋಳ, ಕಾಲಿಗೆ ಸರಪಳಿ ಕಟ್ಟಿಕೊಂಡು ಅಧಿಕಾರಿಯೊಬ್ಬರ ಹಿಂದೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮತ್ತೊಂದು ದೃಶ್ಯದಲ್ಲಿ, ಎರಡೂ ಕೈಗಳಿಗೆ ಕೋಳ ಹಾಕಿದ, ಕಾಲಿಗೆ ಸರಪಳಿ ಬಿಗಿದ ವ್ಯಕ್ತಿಯೊಬ್ಬ ವಿಮಾನದ ಮೆಟ್ಟಿಲು ಹತ್ತುವುದು ಕಂಡುಬರುತ್ತದೆ. ವಿಡಿಯೋದಲ್ಲಿ ಯಾವ ವಲಸಿಗರ ಮುಖವೂ ಗೋಚರಿಸುತ್ತಿಲ್ಲ.ವಾವ್- ಮಸ್ಕ್:
ಈ ವಿಡಿಯೋವನ್ನು ಟೆಸ್ಲಾ ಸಿಇಒ ಮತ್ತು ಟ್ರಂಪ್ ಸರ್ಕಾರದ ಮುಖ್ಯ ಸಲಹೆಗಾರ ಎಲಾನ್ ಮಸ್ಕ್ ರೀಪೋಸ್ಟ್ ಮಾಡಿ, ‘ಹಹ.. ವಾವ್’ ಎಂದು ಬರೆದುಕೊಂಡಿದ್ದಾರೆ.ಈ ಹಿಂದೆಯೂ ಭಾರತೀಯ ಅಕ್ರಮ ವಲಸಿಗರನ್ನು ಕೈಕೋಳ, ಸರಪಳಿ ಹಾಕಿ ಸೇನಾ ವಿಮಾನದಲ್ಲಿ ಭಾರತಕ್ಕೆ ಕಳಿಸಲಾಗಿತ್ತು. ಈ ಅಮಾನವೀಯ ಕ್ರಮದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು.