ಸಾರಾಂಶ
ವಾಷಿಂಗ್ಟನ್: ಅಧ್ಯಕ್ಷಗಾದಿ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ದೇಶದ ರಕ್ಷಣಾ ಇಲಾಖೆಯ ಹೆಸರನ್ನೇ ಬದಲಿಸಲು ಮುಂದಾಗಿದ್ದಾರೆ. ‘ರಕ್ಷಣಾ ಇಲಾಖೆ’ ಬದಲಿಗೆ ‘ಯುದ್ಧ ಇಲಾಖೆ’ ಎಂದು ಹೆಸರಿಡಲು ಉತ್ಸಾಹ ತೋರಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಸೋಮವಾರ ಈ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, ‘ರಕ್ಷಣೆ ಇರಬೇಕು. ಅದರ ಜೊತೆಗೆ ದಾಳಿಯೂ ನಮಗೆ ಬೇಕು. ಯುದ್ಧ ಇಲಾಖೆ ಕೇಳಲು ಚೆನ್ನಾಗಿದೆ. ನಾವು ಮರಳಿ ಈ ಹಿಂದೆ ಇದ್ದ ಯುದ್ಧ ಇಲಾಖೆ ಹೆಸರನ್ನೇ ಇಡುತ್ತೇವೆ’ ಎಂದು ಹೇಳಿದ್ದರು.
ಆದರೆ ಇಲಾಖೆಯ ಹೆಸರು ಬದಲಿಸುವ ಅಧಿಕಾರ ಸಂಸತ್‌ಗೆ ಹೊರತು ಶ್ವೇತಭವನಕ್ಕೆ ಇರುವುದಿಲ್ಲ. ಹೀಗಾಗಿ ರಿಪಬ್ಲಿಕನ್ ಪಕ್ಷದ ಸದಸ್ಯರು ಈಗಾಗಲೇ ಕಾನೂನಿಗೆ ತಿದ್ದುಪಡಿಗೆ ಈಗಾಗಲೇ ಸಿದ್ಧತೆ ಕೈಗೊಂಡಿದ್ದಾರೆ. ಈ ಮೂಲಕ ತಮ್ಮ ದೇಶದ ಸೇನೆಯು ಆಕ್ರಮಣಕಾರಿ ಎಂಬ ಸಂದೇಶ ಸಾರಲು ಟ್ರಂಪ್ ಮರುನಾಮಕರಣ ಮೂಲಕ ಮುಂದಾಗಿದ್ದಾರೆ.
1947ಕ್ಕೂ ಮುನ್ನ ಅಮೆರಿಕದ ರಕ್ಷಣಾ ಇಲಾಖೆ ಹೆಸರು ‘ಯುದ್ಧ ಇಲಾಖೆ’ ಎಂದೇ ಇತ್ತು. ಆ ಬಳಿಕ ವಾಯು, ನೌಕೆಪಡೆ ಮತ್ತು ಸೇನೆಯನ್ನು ಒಟ್ಟುಗೂಡಿಸಿ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಲಾಗಿತ್ತು. ಈಗ ಟ್ರಂಪ್ ಮತ್ತೆ ಹಳೆ ಹೆಸರನ್ನೇ ಮರಳಿ ತರಲು ಸಿದ್ಧತೆ ಕೈಗೊಂಡಿದ್ದಾರೆ.