ಸಾರಾಂಶ
ಭಾರತದಲ್ಲಿ ಮತದಾನ ಹೆಚ್ಚಳಕ್ಕೆ ನೀಡುತ್ತಿದ್ದ ನಿಧಿಯನ್ನು ಅಮೆರಿಕ ಸ್ಥಗಿತಗೊಳಿಸಿದ ಬೆನ್ನಲ್ಲೇ, ಇದುವರೆಗೂ ಈ ಹಣ ಯಾವ ಪ್ರಭಾವಿಗಳ ‘ಕೈ’ ಸೇರುತ್ತಿತ್ತು ಎಂದು ಬಿಜೆಪಿ ಪ್ರಶ್ನಿಸಿದೆ.
ನವದೆಹಲಿ: ಭಾರತದಲ್ಲಿ ಮತದಾನ ಹೆಚ್ಚಳಕ್ಕೆ ನೀಡುತ್ತಿದ್ದ ನಿಧಿಯನ್ನು ಅಮೆರಿಕ ಸ್ಥಗಿತಗೊಳಿಸಿದ ಬೆನ್ನಲ್ಲೇ, ಇದುವರೆಗೂ ಈ ಹಣ ಯಾವ ಪ್ರಭಾವಿಗಳ ‘ಕೈ’ ಸೇರುತ್ತಿತ್ತು ಎಂದು ಬಿಜೆಪಿ ಪ್ರಶ್ನಿಸಿದೆ. ಜೊತೆಗೆ ಈ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕು ಎಂದು ಆಗ್ರಹಿಸುವ ಮೂಲಕ ವಿಪಕ್ಷದ ವಿರುದ್ಧದ ತನ್ನ ವಾಗ್ದಾಳಿ ತೀವ್ರಗೊಳಿಸಿದೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ, ‘ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿ ಸಮಸ್ಯೆ ಸೃಷ್ಟಿಸಲು ಅಮೆರಿಕದಿಂದ ನೀಡಲಾಗುತ್ತಿದ್ದ ನೆರವನ್ನು ಯಾರು ಪಡೆಯುತ್ತಿದ್ದರು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. 2011ರಲ್ಲಿ ಕಾಂಗ್ರೆಸ್ ಆಪ್ತ ಜಾರ್ಜ್ ಸೊರೋಸ್‌ರೊಂದಿಗೆ ಸಂಬಂಧ ಹೊಂದಿದ ಸಂಸ್ಥೆಯೊಂದರೊಂದಿಗೆ ಭಾರತದ ಚುನಾವಣಾ ಒಪ್ಪಂದ ಮಾಡಿಕೊಂಡಿತ್ತು. ಆಗಿಂದ ಭಾರತಕ್ಕೆ ಪ್ರತಿ ವರ್ಷ 3 ಕೋಟಿ ರು ನೆರವು ಹರಿದುಬರುತ್ತಿತ್ತು’ ಎಂದು ಆರೋಪಿಸಿದ್ದಾರೆ.ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಲ್ ಯುಎಸ್‌ಏಡ್ ಅನ್ನು ‘ಮಾನವ ಇತಿಹಾಸದ ಅತಿ ದೊಡ್ಡ ಹಗರಣ’ ಎಂದು ಕರೆದಿದ್ದು, ‘ಭಾರತ ಹಾಗೂ ಅದರ ನೆರೆಹೊರೆಯ ದೇಶಗಳಿಗೆ ನೀಡಲಾಗುತ್ತಿದ್ದ ಹಣ ಯಾರಿಗೆ ಸೇರುತ್ತಿತ್ತು?’ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಇದು ಬಾಹ್ಯ ಹಸ್ತಕ್ಷೇಪಕ್ಕೆ ಪ್ರಯತ್ನ ಎಂದು ಕಿಡಿ ಕಾರಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಎಲಾನ್ ಮಸ್ಕ್ ಅಧ್ಯಕ್ಷತೆಯ ಅಮೆರಿಕ ಕ್ಷಮತಾ ಇಲಾಖೆ(ಡಾಜ್), ಭಾರತದಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ನೀಡುತ್ತಿದ್ದ 21 ದಶಲಕ್ಷ ಡಾಲರ್ (180 ಕೋಟಿ ರು.) ನೆರವನ್ನು ನಿಲ್ಲಿಸಲು ನಿರ್ಧರಿಸಿದ್ದಾಗಿ ಭಾನುವಾರ ಮಾಹಿತಿ ನೀಡಿತ್ತು.